ಚಾಮರಾಜನಗರ ಜಿಲ್ಲೆಯ 11 ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ

Update: 2017-07-16 13:52 GMT

ಚಾಮರಾಜನಗರ, ಜು.16: ನಗರ ಪ್ರದೇಶವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರಿಗೆ ಇನ್ನು ಕೆಲವೇ ದಿನಗಳಲ್ಲಿ ಸಿಂಗಾಪುರದ ವಿಮಾನ ಹತ್ತಲಿದ್ದಾರೆ. ಸಮಾಜದ ಕಟ್ಟ ಕಡೆಯ ಸಮುದಾಯವಾಗಿರುವ ಇವರಿಗೆ ಕರ್ನಾಟಕ ಸರಕಾರ ವಿದೇಶಕ್ಕೆ ಹಾರುವ ಭಾಗ್ಯ ಕಲ್ಪಿಸಿದೆ. ಅದೂ ಸಿಂಗಾಪುರಕ್ಕೆ.

ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಹಿಂದುಳಿದಿರುವ ಚಾಮರಾಜನಗರ ಜಿಲ್ಲೆಯ ಎರಡು ನಗರಸಭೆ ಹಾಗೂ ಒಂದು ಪುರಸಭೆಯ ಒಟ್ಟು 11 ಪೌರ ಕಾರ್ಮಿಕರು ಸ್ವಚ್ಚತೆಯ ಬಗ್ಗೆ ಸಿಂಗಾಪುರದಲ್ಲಿ ಅಧ್ಯಯನ ಮಾಡಲು ಸಜ್ಜಾಗಿದ್ದಾರೆ. ಎರಡು ನಗರ ಸಭೆಯ ಎಂಟು ಹಾಗೂ ಪುರಸಭೆಯ ಮೂವರು ಪೌರಕಾರ್ಮಿಕರಿಗೆ ಸಿಂಗಾಪುರಕ್ಕೆ ಹಾರುವ ಭಾಗ್ಯ ಒದಗಿಬಂದಿದೆ. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯರವರ ಮಹತ್ವಕಾಂಕ್ಷೆಯಂತೆ ರಾಜ್ಯದ ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಸಿಂಗಾಪುರಕ್ಕೆ ಹಾರಲಿದ್ದಾರೆ.

ಚಾಮರಾಜನಗರ ನಗರಸಭೆಯ ಪೌರಕಾರ್ಮಿಕರಾದ ತಂಗವೇಲು, ನಟರಾಜು, ವರದರಾಜು, ಸಿ.ಪಿ ಮಾದ, ಕೊಳ್ಳೇಗಾಲ ನಗರಸಭೆಯ ಪೌರ ಕಾರ್ಮಿಕರಾದ ಪಿ. ಕುಪ್ಪ, , ರಾಜು ಡಿ. ಮುರುಗ, ಗುಂಡ್ಲುಪೇಟೆ ಪುರಸಭೆಯ ಪೌರಕಾರ್ಮಿಕರಾದ ಚಿಕ್ಕಮಾದ, ರಂಗಸ್ವಾಮಿ ಮತ್ತು ಮೂರ್ತಿ ಕುಮಾರ್ ಸಿಂಗಾಪುರಕ್ಕೆ ತೆರಳಲಿದ್ದಾರೆ. ಈಗಾಗಲೇ ಈ ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಯಿಂದಲೇ ಪಾಸ್‌ಪೋರ್ಟ್, ವೀಸಾ ಹಾಗೂ ಪ್ರಯಾಣ ವೆಚ್ಚವನ್ನು ಭರಿಸಲು ಸರಕಾರ ನಿರ್ದೇಶನ ನೀಡಿದೆ. ಅದರಂತೆ ಚಾಮರಾಜನಗರ ಜಿಲ್ಲಾಡಳಿತವು ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಸೂಕ್ತ ಆದೇಶ ನೀಡಿ ಸಿಂಗಾಪುರಕ್ಕೆ ಅಧ್ಯಯನಕ್ಕೆ ತೆರಳುವ ಕಾರ್ಮಿಕರಿಗೆ ಸಕಲ ರೀತಿಯಲ್ಲಿ ವ್ಯವಸ್ಥೆಗಳನ್ನು ಏರ್ಪಾಟು ಮಾಡುವಂತೆ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ.

ನಗರಸಭೆಯ ಪೌರಕಾರ್ಮಿಕರ ಜೊತೆ ಪರಿಸರ ಅಭಿಯಂತರೆ ಗಿರಿಜಮ್ಮ, ಪುರಸಭೆ ಪೌರಕಾರ್ಮಿಕರ ಜೊತೆ ಗುಂಡ್ಲುಪೇಟೆ ಮುಖ್ಯಾಧಿಕಾರಿ ರಮೇಶ್ ಕೂಡ ತೆರಳಲಿದ್ದು, ಸಿಂಗಾಪುರದ ಅಧ್ಯಯನ ಅಲ್ಲಿನ ಸ್ವಚ್ಚತಾ ಕಾರ್ಯದ ಬಗ್ಗೆ ಇಲ್ಲಿನ ಪೌರಕಾರ್ಮಿಕರಿಗೆ ಅರಿವು ಮೂಡಲಿಸಲು ಸಹಕಾರಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News