ಮಕ್ಕಳಿಗಾಗಿ ಸರಳ ವಿಜ್ಞಾನ

Update: 2017-07-17 18:34 GMT

 ಮಕ್ಕಳಿಗೆ ಸರಳವಿಜ್ಞಾನವನ್ನು ಇಷ್ಟವಾಗುವಂತೆ ಬರೆಯುವುದು ಮತ್ತು ಅವರಿಗೆ ಅದನ್ನು ತಲುಪಿಸುವುದು ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ಕನ್ನಡದಲ್ಲಿ ಮಕ್ಕಳಿಗಾಗಿ ಬರೆಯುವವರ ಕೊರತೆ ವ್ಯಾಪಕವಾಗಿದೆ. ಇಂಗ್ಲಿಷ್ ಮಾಧ್ಯಮಗಳು ದಾಪುಗಾಲು ಇಟ್ಟ ಬಳಿಕ, ವಿಜ್ಞಾನವನ್ನು ಸರಳಗನ್ನಡದಲ್ಲಿ ಅರ್ಥ ಮಾಡಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಇಂತಹ ಸಂದರ್ಭದಲ್ಲಿ ನವಕರ್ನಾಟಕ ಪ್ರಕಾಶನವು ‘ಪುಟ್ಟ-ಕಿಟ್ಟ ವಿಜ್ಞಾನ ಸಂವಾದ’ ಸರಣಿಯನ್ನು ಹೊರ ತಂದಿದೆ. ಡಾ. ಎ. ಓ ಆವಲ ಮೂರ್ತಿಯವರು ಈ ಎಂಟು ಸರಳವಿಜ್ಞಾನ ಮಾಲಿಕೆಯನ್ನು ಹೊರತಂದಿದ್ದಾರೆ. ವಿಜ್ಞಾನವೆನ್ನುವುದು ನಮ್ಮ ಬದುಕಿನ ಜೊತೆಗೆ ನೇರವಾಗಿ ಸಂಬಂಧ ಹೊಂದಿರುವಂಥದು. ಪ್ರತಿನಿತ್ಯ ವಿಜ್ಞಾನದ ಚಮತ್ಕಾರಗಳ ನಡುವೆಯೇ ನಾವು ಬದುಕುತ್ತಿದ್ದೇವಾದರೂ, ಅದರ ಕಾರಣಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು ಅವುಗಳಿಗೆ ವೈಜ್ಞಾನಿಕವಾಗಿ ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಉತ್ತರವನು್ನ ನೀಡಿದ್ದಾರೆ ಆವಲ ಮೂರ್ತಿ ಯವರು.
ನೀರೊಳಗಿನ ಕಲ್ಲೇಕೆ ಹಗುರ?, ತಂಪುಪಾತ್ರೆ, ಜೋಕೆ!, ಕಚಗುಳಿ ಇಟ್ಟಾಗ ನಗು ಏಕೆ ಬರುತ್ತದೆ?, ಈರುಳ್ಳಿ ಹೆಚ್ಚಿದರೆ ಕಣ್ಣೀರೇಕೆ? ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ?, ಭೂಮಿಯ ದ್ರವ್ಯರಾಶಿ ಎಷ್ಟು?, ಅಲೆಗಳೇಳುವುದೇಕೆ?, ನಾವು ಸೀನುವುದೇಕೆ? ಹೀಗೆ ಎಂಟು ಪ್ರಶ್ನೆಗಳನ್ನಿಟ್ಟು ಮಕ್ಕಳಿಗಾಗಿ ಕಿರು ಪುಸ್ತಕಗಳನ್ನು ರಚಿಸಲಾಗಿದೆ. ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟು ಮಾಡುವ ಒಂದು ಪ್ರಯತ್ನ ಇದು. ಡಾ. ಆವಲ ಮೂರ್ತಿಯವರ ಬರವಣಿಗೆಯ ಶೈಲಿ ಆಕರ್ಷಕ, ವಿಷಯದ ನಿರೂಪಣೆ ನೇರ, ಸರಳ ಮತ್ತು ಸ್ಪಷ್ಟ. ಹಾಗಾಗಿ ಈ ಮಾಲೆಯ ಪುಸ್ತಕಗಳು ಮಕ್ಕಳನ್ನಷ್ಟೇ ಅಲ್ಲದೆ ಸಾಮಾನ್ಯ ಓದುಗರನ್ನೂ ಅಷ್ಟೇ ಪರಿಣಾಮಕಾರಿಯಾಗಿ ತಲುಪುತ್ತದೆ. ಇವತ್ತಿನ ಶಾಲಾ ಕಾಲೇಜುಗಳಲ್ಲಿ ವಿಜ್ಞಾನವನ್ನು ಕುತೂಹಲಕಾರಿಯಾಗಿ, ಆಕರ್ಷಕವಾಗಿ ಕಲಿಸುವ ಪ್ರಯತ್ನ ನಡೆಯುತ್ತಿಲ್ಲ. ಅಂಕಗಳನ್ನು ಗುರಿಯಾಗಿಟ್ಟು ಕಲಿಸುವ ವಿಜ್ಞಾನವೇ ಬೇರೆ. ವಿದ್ಯಾರ್ಥಿಗಳಲ್ಲಿ ತನ್ನ ಸುತ್ತಮುತ್ತಲಿನ ಕುರಿತಂತೆ ಕುತೂಹಲ ಹುಟ್ಟಿಸಿ ಕಲಿಸುವ ವಿಜ್ಞಾನವೇ ಬೇರೆ. ಮಕ್ಕಳಲ್ಲಿ ಚಿಂತನಶೀಲತೆಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಈ ಪುಟ್ಟ ಕೃತಿ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News