​ಗೋರಕ್ಷಕರೆಂಬ ಕೋತಿಗಳ ಬಾಲಕ್ಕೆ ಬೆಂಕಿ ಹಚ್ಚಿ ಬಿಟ್ಟದ್ದು ಸ್ವತಃ ಮೋದಿ: ಮಮತಾ ಬ್ಯಾನರ್ಜಿ

Update: 2017-07-18 04:05 GMT

ಕೊಲ್ಕತ್ತಾ, ಜು. 18: ಗೋರಕ್ಷಣೆಯ ಹೆಸರಿನಲ್ಲಿ ಗೋರಕ್ಷಕರು ಹಿಂಸಾಕೃತ್ಯ ನಡೆಸುವುದನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ, ಇಂಥ ಕೃತ್ಯದಲ್ಲಿ ತೊಡಗುವಂತೆ ಪರೋಕ್ಷವಾಗಿ ಗೋರಕ್ಷಕರಿಗೆ ಸ್ವತಃ ಪ್ರಧಾನಿಯವರೇ ಅಧಿಕಾರ ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸೋಮವಾರ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಾಣದಲ್ಲಿ ಹನುಮಂತನ ಬಾಲಕ್ಕೆ ಬೆಂಕಿ ಕೊಟ್ಟು ಇಡೀ ಲಂಕೆಯನ್ನು ದಹಿಸಿದಂತೆ, ಎಂದು ಗೋರಕ್ಷಕರ ಕೃತ್ಯವನ್ನು ಬಣ್ಣಿಸಿದರು.

"ಗೋರಕ್ಷಣೆಯ ಹೆಸರಿನಲ್ಲಿ ಹಿಂಸೆ ಎಸಗುವಂತೆ ಸ್ವತಃ ಮೋದಿಯವರೇ ಗೋರಕ್ಷಕರೆಂಬ ಕಪಿಗಳ ಬಾಲಕ್ಕೆ ಬೆಂಕಿ ಹಚ್ಚಿ ಬಿಟ್ಟಿದ್ದಾರೆ. ಕೇಂದ್ರ ಹಚ್ಚಿದ ಈ ಬೆಂಕಿಯನ್ನು ರಾಜ್ಯಗಳು ನಂದಿಸಬೇಕೇ?" ಎಂದು ಬ್ಯಾನರ್ಜಿ ಕಟುವಾಗಿ ಪ್ರಶ್ನಿಸಿದರು.

ಚೀನಾ ಹಾಗೂ ಭೂತಾನ್ ಜತೆಗಿನ ಸಂಬಂಧವನ್ನು ಕೇಂದ್ರ ಸರ್ಕಾರ ಹಾಳು ಮಾಡಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿದ ಅವರು, ಪಶ್ಚಿಮ ಬಂಗಾಳದ ಭಾಗವಾದ "ಚಿಕನ್‌ನೆಕ್ ಕಾರಿಡಾರ್" ಪ್ರದೇಶದ ಮೇಲೆ ಕೂಡಾ ಚೀನಾ ಕಣ್ಣಿಟ್ಟಿದೆ ಎಂದು ಆಪಾದಿಸಿದರು. ಕೇಂದ್ರದ ವಿದೇಶಾಂಗ ನೀತಿಯಿಂದಾಗಿ ಪಶ್ಚಿಮ ಬಂಗಾಲ ತೊಂದರೆ ಎದುರಿಸುತ್ತಿದೆ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News