ಮಲ್ಯ ಬ್ಯಾಂಕ್ ಖಾತೆ ಮುಟ್ಟುಗೋಲು

Update: 2017-07-18 04:02 GMT

ಹೊಸದಿಲ್ಲಿ, ಜು. 18: ಐಡಿಬಿಐ ಸಾಲ ಸುಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಹಾಗೂ ಬ್ರಿಟನ್ ಮತ್ತು ಸ್ವಿಡ್ಝರ್‌ಲೆಂಡ್‌ನಲ್ಲಿರುವ ಅವರ ಸಹಚರರ ಬ್ಯಾಂಕ್‌ ಖಾತೆಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಕಳೆದ ವಾರವಷ್ಟೆ ವಿಶೇಷ ನ್ಯಾಯಾಲಯ, ಪ್ರಕರಣದ ವಿಚಾರಣೆಗೆ ಸಹಕರಿಸುವಂತೆ ಬ್ರಿಟನ್ ಅಧಿಕಾರಿಗಳನ್ನು ಕೋರುವ ವಿಶೇಷ ಪತ್ರವನ್ನು ಬರೆಯಲು ತನಿಖಾ ಸಂಸ್ಥೆಗೆ ಅನುಮತಿ ನೀಡಿತ್ತು. ಈ ಖಾತೆಗಳ ಬಗ್ಗೆ, ವಹಿವಾಟಿನ ಬಗ್ಗೆ ತನಿಖೆ ನಡೆಸಲು ಸಹಕರಿಸುವಂತೆಯೂ ಪತ್ರ ಬರೆಯಲು ನ್ಯಾಯಾಲಯ ಅನುಮತಿ ನೀಡಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ 1300 ಕೋಟಿ ರೂ. ಸಾಲ ಮಂಜೂರು ಮಾಡುವ ಸಂದರ್ಭ ಐಡಿಬಿಐ ಅಧಿಕಾರಿಗಳು ಹಲವು ಲೋಪಗಳನ್ನು ಎಸಗಿರುವುದು ಕೂಡಾ ತನಿಖೆಯಿಂದ ಬಹಿರಂಗವಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ಆರೋಪಪಟ್ಟಿಯ ಪ್ರಕಾರ ಮಲ್ಯ, 260 ಕೋಟಿ ರೂ. ಕಿಂಗ್‌ಫಿಶರ್ ಖಾತೆಯಿಂದ ಬೇರೆ ಖಾತೆಗೆ ವರ್ಗಾಯಿಸಿದ್ದರೆ, 263 ಕೋಟಿ ರೂ. ವೇತನ ಪಾವತಿ, ತೆರಿಗೆ ಕಡಿತ ಹಾಗೂ ಆದಾಯ ತೆರಿಗೆ ಪಾವತಿ ಮತ್ತು ಸಾಲದ ಕಂತು ಪಾವತಿಸಲು ಬಳಸಲಾಗಿದೆ.

ಮಲ್ಯ ಅವರ ವೈಯಕ್ತಿಕ ವೆಚ್ಚಕ್ಕಾಗಿ ಸಾಲ ಖಾತೆಯಿಂದ ಹಣ ವರ್ಗಾಯಿಸಲಾಗಿದೆ ಎನ್ನುವುದು ಸಿಬಿಐ ಆರೋಪ. ಮಲ್ಯಗೆ ಸಾಲ ಮಂಜೂರು ಮಾಡಿದ ಮತ್ತು ವಿತರಿಸಿದ ಅಧಿಕಾರಿಗಳನ್ನು ಈಗಾಗಲೇ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News