ಶೂನ್ಯ ಅಂಕ ಪಡೆದ ಎಬಿವಿಪಿ ನಂಟಿನ ವಿದ್ಯಾರ್ಥಿ: ಅಧ್ಯಾಪಕನ ಮೇಲೆ ಹಲ್ಲೆ

Update: 2017-07-18 06:57 GMT

ಹೊಸದಿಲ್ಲಿ,ಜು.18 : ಇಂಟರ್ನಲ್ ಅಸೆಸ್ಮೆಂಟ್ ನಲ್ಲಿ ತನಗೆ ಸೊನ್ನೆ ಅಂಕಗಳನ್ನು ನೀಡಿ ತನ್ನ ಭವಿಷ್ಯವನ್ನೇ ಹಾಳುಗೆಡಹಿದ್ದಾರೆಂಬ ಸಿಟ್ಟಿನಲ್ಲಿ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್  ಇಲ್ಲಿನ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ  ಸಂಸ್ಥೆಯ ಪಾರ್ಕಿಂಗ್ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾನೆ.

ವಿದ್ಯಾರ್ಥಿ ತರಗತಿಗಳಿಗೆ ಹಾಜರಾಗುತ್ತಿರಲೇ ಇಲ್ಲದಿದ್ದುದರಿಂದ  ಆತನಿಗೆ ಸೊನ್ನೆ ಅಂಕಗಳನ್ನು ನೀಡಲಾಗಿತ್ತೆಂದು ಪ್ರಾಂಶುಪಾಲ ಆರ್ ಪಿ ರುಸ್ತಗಿ ಹೇಳಿದರೆ, ವಿದ್ಯಾರ್ಥಿ ಪ್ರದೀಪ್ ಫೋಗಟ್  ತಾನು ರಾಜಕೀಯವಾಗಿ ಸಕ್ರಿಯನಾಗಿದ್ದುದರಿಂದ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಗೆ ಸೇರಿದವನಾಗಿದ್ದುದರಿಂದ ತನ್ನ ವಿರುದ್ಧ ತಾರತಮ್ಯವೆಸಗಲಾಗುತ್ತಿದೆ ಎಂದು ಆರೋಪಿಸಿದ್ದಾನೆ.

 ಆದರೆ ಫೋಗಟ್ ತಮ್ಮ ಸಂಘಟನೆಗೆ ಸೇರಿದವನಲ್ಲ ಎಂದು  ಎಬಿವಿಪಿ ರಾಜ್ಯ ಕಾರ್ಯದರ್ಶಿ ಭಾರತ್ ಖತಾನ ಅವರು ಹೇಳುತ್ತಾರೆ.  ವಿದ್ಯಾರ್ಥಿಯ ವಿರುದ್ಧ ಐಪಿಸಿ ಸೆಕ್ಷನ್ 323, 341 ಹಾಗೂ 506 ಅನ್ವಯ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿದ್ಯಾರ್ಥಿಯು  ಗ್ಲೋಬಲ್ ಬಿಸಿನೆಸ್ ಆಪರೇಶನ್ಸ್ ವಿಷಯದಲ್ಲಿ ಸ್ನಾತ್ತಕೋತ್ತರ ಡಿಪ್ಲೋಮಾ ಮಾಡುತ್ತಿದ್ದು  ಈ ಹಿಂದೆ ದಿಲ್ಲಿ ವಿಶ್ವವಿದ್ಯಾಲಯದಿಂದ ಎಲ್ ಎಲ್ ಬಿ ಪದವಿ ಪಡೆದಿದ್ದನಲ್ಲದೆ  ಅಲ್ಲಿ ಕಲಿಯುತ್ತಿದ್ದಾಗ ಕ್ರೀಡಾ ವಿಭಾಗದ ಕಾರ್ಯದರ್ಶಿಯೂ ಆಗಿದ್ದ.

ಫೋಗಟ್  ತನ್ನ ಸಂಸ್ಥೆಯ ಪಾರ್ಕಿಂಗ್ ಪ್ರದೇಶದಲ್ಲಿ ಶಿಕ್ಷಕ ಅಶ್ವನಿ ಕುಮಾರ್ ಗೆ ಒಂದೆರಡು ಬಾರಿ ಕಪಾಳ ಮೋಕ್ಷ ಮಾಡಿದ್ದರೂ ಶಿಕ್ಷಕ  ಆತನಿಂದ ತಪ್ಪಿಸಕೊಳ್ಳುವಲ್ಲಿ ಸಫಲರಾಗಿದ್ದರೆನ್ನಲಾಗಿದೆ. ವಿದ್ಯಾರ್ಥಿ ಅವರನ್ನು ನಿಂದಿಸಿ ನಂತರ ಪರಾರಿಯಾಗಿದ್ದ. ವಿದ್ಯಾರ್ಥಿ ಈ ಹಿಂದೆಯೂ ತನ್ನ ಶಿಕ್ಷಕನಿಗೆ ಫೋನಿನಲ್ಲಿ ಬೆದರಿಸಿದ್ದನೆನ್ನಲಾಗಿದೆ.

ಆದರೆ ವಿದ್ಯಾರ್ಥಿ ಮಾತ್ರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು ಕಳೆದ ಬಾರಿ ಚುನಾವಣೆ ನಡೆದಂದಿನಿಂದ ಶಿಕ್ಷಕ ತನ್ನ ವಿರುದ್ಧ  ದ್ವೇಷ ಕಾರುತ್ತಿದ್ದು ವಿದ್ಯಾರ್ಥಿಗಳು ರಾಜಕೀಯದಲ್ಲಿ ಸಕ್ರಿಯವಾಗಿರುವುದು ಇಷ್ಟವಿಲ್ಲದೇ ಇರುವುದರಿಂದ  ತನಗೆ ಸೊನ್ನೆ ಅಂಕಗಳನ್ನು ನೀಡಿದ್ದಾಗಿ ಹೇಳುತ್ತಾನೆ. ತಾನು ತರಗತಿಗಳಿಗೆ ಹಾಜರಾಗುತ್ತಿದ್ದುದಾಗಿಯೂ ಆತ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News