ಉಪರಾಷ್ಟ್ರಪತಿ ಅಭ್ಯರ್ಥಿಯ ಅಂಚೆ ಪ್ರಚಾರ!

Update: 2017-07-19 04:16 GMT

ಹೊಸದಿಲ್ಲಿ, ಜು.19: ಸಂಯುಕ್ತ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಉಪರಾಷ್ಟ್ರಪತಿ ಚುನಾವಣಾ ಕಣದಲ್ಲಿರುವ ಗೋಪಾಲಕೃಷ್ಣ ಗಾಂಧಿ, ಮತದಾರರನ್ನು ತಲುಪಲು ವಿಶಿಷ್ಟ ಪೋಸ್ಟ್‌ಕಾರ್ಡ್ ರಾಜತಾಂತ್ರಿಕತೆಗೆ ಮೊರೆ ಹೋಗಿದ್ದಾರೆ.

ಉಪ ರಾಷ್ಟ್ರಪತಿ ಚುನಾವಣೆಯ ಮತದಾರರಾಗಿರುವ ಎಲ್ಲ 785 ಸಂಸದರಿಗೆ ವೈಯಕ್ತಿಕವಾಗಿ ಪತ್ರ ಬರೆದು ಮತ ಯಾಚಿಸಲು ಗಾಂಧಿ ನಿರ್ಧರಿಸಿದ್ದಾರೆ. ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಗಸ್ಟ್ 5ರಂದು ಮತದಾನ ನಡೆಯಲಿದೆ.

ಗೋಪಾಲಕೃಷ್ಣ ಗಾಂಧಿ ಅವರ ಈ ವಿನೂತನ ಯೋಚನೆ ಎಲ್ಲ ವಿರೋಧ ಪಕ್ಷಗಳ ಮುಖಂಡರಿಗೆ ಇಷ್ಟವಾಗಿದೆ. ಈ ಪೈಕಿ ವಿರೋಧ ಪಕ್ಷದ ಒಬ್ಬ ಮುಖಂಡರಂತೂ 1000 ಅಂಚೆ ಕಾರ್ಡ್‌ಗಳನ್ನು ಖರೀದಿಸಲು ಗಾಂಧಿಗೆ ನೆರವಾಗುವುದಾಗಿ ಹೇಳಿದ್ದಾರೆ. ಸಂಸತ್ತಿನ ಬಳಿ ಇರುವ ಗೋಲ್ ಮಾರ್ಕೆಟ್ ಅಂಚೆ ಕಚೇರಿಯಿಂದ ಬುಧವಾರ ಮಧ್ಯಾಹ್ನ ವೇಳೆಗೆ 1000 ಅಂಚೆ ಕಾರ್ಡ್ ಖರೀದಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಂಚೆಕಾರ್ಡ್ ಮೂಲಕ ಮಾತ್ರವಲ್ಲದೇ ಎಲ್ಲ ಸಂಸದರಿಗೆ ಇ-ಮೇಲ್ ಕಳುಹಿಸಿ ಗಾಂಧಿ ಮತಯಾಚಿಸಲಿದ್ದಾರೆ. ಇದರ ಜತೆಗೆ ಧ್ವನಿಮುದ್ರಿತ ವಿಡಿಯೊ ಮೆಸೇಜ್‌ಗಳನ್ನು ಕೂಡಾ ಸಂಸತ್ತಿನ ಉಭಯ ಸದನಗಳ ಎಲ್ಲ ಸದಸ್ಯರಿಗೆ ಕಳುಹಿಸಲಾಗುತ್ತದೆ.

"ಪ್ರಚಾರಕ್ಕೆ ವೈಯಕ್ತಿಕ ಸ್ಪರ್ಶ ನೀಡುವುದು ಗಾಂಧಿಯವರ ಆಶಯ. ಇದರಿಂದ ಎಲ್ಲ ಸಂಸದರಿಗೆ ಅಂಚೆ ಕಾರ್ಡ್ ಕಳುಹಿಸಲು ನಿರ್ಧರಿಸಿದ್ದಾರೆ. ಪೋಸ್ಟ್ ಕಾರ್ಡ್‌ನಲ್ಲಿ ಮನವಿಯ ಪ್ರಮುಖ ಅಂಶಗಳನ್ನು ನೀಡಿ, ವಿವರಗಳನ್ನು ಇ-ಮೇಲ್ ಮತ್ತು ಪತ್ರದಲ್ಲಿ ನೀಡಲಾಗುತ್ತದೆ" ಎಂದು ವಿರೋಧ ಪಕ್ಷದ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ಗಾಂಧಿ ಚೆನ್ಣೈಗೆ ತೆರಳಿದರು. ಆಗಸ್ಟ್ 4ರಂದು ದೆಹಲಿಗೆ ಆಗಮಿಸಿ ಎಲ್ಲ ಸಂಸದರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಸಾಧ್ಯತೆ ಇದೆ. ಮಹಾತ್ಮಗಾಂಧೀಜಿ, ಗೋಪಾಲಕೃಷ್ಣ ಗಾಂಧಿಯವರ ತಂದೆಯ ತಂದೆ ಹಾಗೂ ಸಿ.ರಾಜಗೋಪಾಲಾಚಾರಿ, ಗೋಪಾಲಕೃಷ್ಣ ಗಾಂಧಿಯವರ ತಾಯಿಯ ತಂದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News