ಏರ್ ಇಂಡಿಯಾ ಖಾಸಗೀಕರಣ : ಬದಲಾವಣೆಗೆ ಸಿದ್ಧರಾಗಿ, ಉದ್ಯೋಗಿಗಳಿಗೆ ಅಧ್ಯಕ್ಷರ ಕರೆ

Update: 2017-07-19 11:12 GMT

ಹೊಸದಿಲ್ಲಿ,ಜು.19 : ಏರ್ ಇಂಡಿಯಾವನ್ನು  ಖಾಸಗೀಕರಣಗೊಳಿಸಲು ಸರಕಾರ ನಿರ್ಧರಿಸಿರುವ ಬೆನ್ನಲ್ಲೇ  ಸಂಸ್ಥೆಯ ಅಧ್ಯಕ್ಷ ಅಶ್ವನಿ ಲೋಹನಿ ಅವರು  ತಮ್ಮ ಉದ್ಯೋಗಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಸಿದ್ಧರಾಗುವಂತೆ ಕರೆ ನೀಡಿದ್ದು ಅರ್ಹತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದಿದ್ದಾರೆ. ಏರ್ ಇಂಡಿಯಾ ತನ್ನ ಒಟ್ಟು ರೂ. 50,000 ಕೋಟಿ ಸಾಲದ ಹೊರೆಯಿಂದ ಹೊರಬರಲಾರದೆ ಕಂಗೆಟ್ಟಿರುವುದೇ  ಅದನ್ನು ಖಾಸಗೀಕರಣಗೊಳಿಸುವ  ಸರಕಾರದ ನಿರ್ಧಾರದ ಹಿಂದಿನ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

``ಕಳೆದ ಹಲವು ವರ್ಷಗಳಿಂದ ಏರ್ ಇಂಡಿಯಾ ಸತತವಾಗಿ ನಷ್ಟ ಅನುಭವಿಸುತ್ತಿದೆ. ಈ ಸಮಸ್ಯೆಗೆ ಒಂದು ಪರಿಹಾರ ಕಾಣದ ಹೊರತು ಮುಂದಿನ ವರ್ಷಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಬಹುದು. ಖಾಸಗೀಕರಣದಿಂದ ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಾಯುಯಾನ ಸಂಸ್ಥೆಯಾಗಿಸುವುದೇ ಸರಕಾರದ ಉದ್ದೇಶ ಎಂದು ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಲೊಹಾನಿ ಹೇಳಿದ್ದಾರೆ.

``ಇದು ಬದಲಾಗುತ್ತಿರುವ ಕಾಲ, ಬದಲಾವಣೆ ಅನಿವಾರ್ಯವಾದರೂ ಅದನ್ನು ಸ್ವೀಕರಿಸುವುದು ಕಷ್ಟಕರ. ಸಾರ್ವಜನಿಕ ರಂಗದ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುವುದಕ್ಕೂ ಕಾರ್ಪೊರೇಟ್ ಸಂಸ್ಥೆಯ ಜತೆ ಕಾರ್ಯನಿರ್ವಹಿಸುವುದಕ್ಕೂ ವ್ಯತ್ಯಾಸವಿದೆ,'' ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಏರ್ ಇಂಡಿಯಾ ಖಾಸಗೀಕರಣಗೊಳ್ಳುವುದು ಎಂಬ ಸುದ್ದಿ ಬಂದಂದಿನಿಂದ ಉದ್ಯೋಗಿಗಳಲ್ಲಿ ಮೂಡಿದ ಆತಂಕದ ಬಗ್ಗೆ ತಿಳಿದಿರುವ ಲೊಹಾನಿ ಈ ಆತಂಕವನ್ನು ದೂರ ಮಾಡಲು ಪ್ರಯತ್ನಿಸುತ್ತಾ ಉದ್ಯೋಗಿಗಳ ಹಿತಾಸಕ್ತಿಯನ್ನು ಹೊಸ ಆಡಳಿತದಡಿಯಲ್ಲೂ ರಕ್ಷಿಸಲಾಗುವುದು ಎಂದಿದ್ದಾರೆ.

``ಮುಂದಿನ ದಿನಗಳ ಬೆಳವಣಿಗೆಗಳು ಸಂಸ್ಥೆಗೆ ಹಲವು ಸವಾಲುಗಳನ್ನೊಡ್ಡಬಹುದಾದರೂ ಉದ್ಯೋಗಿಗಳ ಸಮಸ್ಯೆಗಳನ್ನು ಪರಿಹರಿಸುವ ವಿಶ್ವಾಸ ನಮಗಿದೆ. ಈ ನಿಟ್ಟಿನಲ್ಲಿ ನಮ್ಮ ಈಗಿನ ಪ್ರಯತ್ನಗಳು ಯಶಸ್ವಿಯಾಗಿದ್ದರೂ ಅದು ಸೀಮಿತವಾಗಿದೆ''ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News