ರಾಷ್ಟ್ರಪತಿ ಚುನಾವಣೆ: ಮತ ಎಣಿಕೆಗೆ ಕ್ಷಣಗಣನೆ

Update: 2017-07-20 03:46 GMT

ಹೊಸದಲ್ಲಿ, ಜು.20:  ಸೋಮವಾರ ನಡೆದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಸಂಜೆಯ ವೇಳೆಗೆ ಫಲಿತಾಂಶ ನಿರೀಕ್ಷಿಸಲಾಗಿದೆ.

ಸಂಜೆ 5 ಗಂಟೆಯ ವೇಳೆಗೆ ಹೊಸ ರಾಷ್ಟ್ರಪತಿ ಯಾರು ಎನ್ನುವುದು ನಿರ್ಧಾರವಾಗಲಿದೆ.

ಚುನಾವಣಾ ಅಧಿಕಾರಿಯಾಗಿರುವ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅನೂಪ್ ಮಿಶ್ರಾ ಪ್ರಕಾರ, "ಎಣಿಕೆ ಕಾರ್ಯ 11 ಗಂಟೆಗೆ ಆರಂಭವಾಗಲಿದೆ. ಮೊದಲು ಸಂಸತ್ ಭವನದ ಮತ ಪೆಟ್ಟಿಗೆಗಳನ್ನು ತೆರೆಯಲಾಗುವುದು. ಬಳಿಕ ರಾಜ್ಯಗಳಿಂದ ಬಂದ ಮತ ಪೆಟ್ಟಿಗೆಗಳನ್ನು ಅಕ್ಷರಾನುಕ್ರಮವಾಗಿ ಒಂದೊಂದಾಗಿ ತೆರೆದು ಎಣಿಕೆ ನಡೆಸಲಾಗುತ್ತದೆ"

ನಾಲ್ಕು ಕೌಂಟಿಂಗ್ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಎಂಟು ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯುತ್ತದೆ. ಸಂಜೆ 5 ರ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹಿಂದಿನ ಎರಡು ರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸಿರುವ ಈ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದರು.

ಭಾರತದ ಮುಂದಿನ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಶೇಕಡ 99ರಷ್ಟು ಮತದಾನವಾಗಿತ್ತು. ಮೇಲ್ನೋಟಕ್ಕೆ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ ಅಧಿಕ ಮತಗಳನ್ನು ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಗಳಿಸುವ ಸಾಧ್ಯತೆ ಇದೆ. ಸಂಸತ್ ಭವನ ಸೇರಿದಂತೆ 32 ಮತಗಟ್ಟೆಗಳನ್ನು ದೇಶದ ವಿವಿಧೆಡೆ ತೆರೆಯಲಾಗಿತ್ತು.

4,120 ಶಾಸಕರು ಹಾಗೂ 776 ಮಂದಿ ಚುನಾಯಿತ ಸಂಸದರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಅವಕಾಶ ಇರುವುದಿಲ್ಲ. ಸಂಸದರ ಮತಮೌಲ್ಯ 708 ಮತಗಳಾಗಿದ್ದು, ಶಾಸಕರ ಮತ ಮೌಲ್ಯ, ಅವರ ಕ್ಷೇತ್ರದ ಜನಸಂಖ್ಯೆಯನ್ನು ಆಧರಿಸಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News