ವೈದ್ಯರು ಮತ್ತು ಔಷಧಿ ಕಂಪೆನಿಗಳ ಅಪವಿತ್ರ ಮೈತ್ರಿಗೆ ಭಂಗ?

Update: 2017-07-21 18:36 GMT

ಎರಡು ವರ್ಷಗಳ ವಿಳಂಬದ ಬಳಿಕ, ಔಷಧಿ (ಫಾರ್ಮಾಸ್ಯುಟಿಕಲ್) ಉದ್ಯಮವು ವೈದ್ಯರಿಗೆ ಮತ್ತು ಆರೋಗ್ಯ ವೃತ್ತಿ ನಿರತರಿಗೆ ಲಂಚ ನೀಡುವುದನ್ನು ತಡೆಯಲು ಕಡ್ಡಾಯವಾದ ಒಂದು ಮಾರುಕಟ್ಟೆ ಸಂಹಿತೆ ಸದ್ಯದಲ್ಲೆ ಜಾರಿಗೆ ಬರಬಹುದು. ಇತ್ತೀಚೆಗೆ ಫಾರ್ಮಾಸ್ಯುಟಿಕಲ್ ಇಲಾಖೆ (ಡಿಒಪಿ)ಯು ಅವಶ್ಯ ಸರಕುಗಳ (ಔಷಧಿಗಳ ಮಾರಾಟದಲ್ಲಿ ಅನೈತಿಕ ಕ್ರಮಗಳ ನಿಯಂತ್ರಣ) ಆಜ್ಞೆಯ (2017) ಕರಡು ಪ್ರತಿಯನ್ನು ಅಂತಿಮಗೊಳಿಸುವುದಕ್ಕಾಗಿ ಕಾನೂನು ಸಚಿವಾಲಯಕ್ಕೆ ಕಳುಹಿಸಿತು.

‘‘ಈಗಾಗಲೇ ಕಾನೂನು ಸಚಿವಾಲಯವು ಈ ಆಜ್ಞೆಯ ಕರಡು ಪ್ರತಿಯನ್ನು ಕೂಲಂಕಷವಾಗಿ ಪರಿಶೀಲಿಸಿರುವುದರಿಂದ ಇದು ಜಾರಿಯಾಗಲು ಹೆಚ್ಚು ಸಮಯ ಬೇಕಾಗಲಾರದು’’ ಎಂದು ಡಿಒಪಿಯ ಅಧಿಕಾರಿಗಳು ಹೇಳಿದ್ದಾರೆ.

ಸಾರ್ವಜನಿಕ ಅಭಿಪ್ರಾಯಗಳಿಗಾಗಿ ಸಾಮಾನ್ಯವಾಗಿ ನೀಡುವ 45 ದಿನಗಳ ಅವಧಿಯನ್ನು ಮನ್ನಾಮಾಡಲಾಗುವುದೇ ಎಂದು ಕೇಳಿದಾಗ ಆ ಅಧಿಕಾರಿ ‘‘ಈ ವಿಷಯದಲ್ಲಿ, ಸಂಬಂಧಿಸಿದ ಎಲ್ಲರೊಡನೆ ಈಗಾಗಲೇ ವ್ಯಾಪಕವಾಗಿ ಸಮಾಲೋಚನೆ ನಡೆಸಿರುವುದರಿಂದ ಈ ಕಾಲ ಮಿತಿಯ ಅಗತ್ಯವಿರಲಾರದು’’ ಎಂದಿದ್ದಾರೆ. ಕರಡು ಪ್ರತಿಯಲ್ಲಿ ಆಜ್ಞೆಯು ಜುಲೈ 1 ರಿಂದ ಜಾರಿಗೆ ಬರುತ್ತದೆ ಎನ್ನಲಾಗಿದೆ. ಈ ಅಂತಿಮ ಗಡು ಈಗಾಗಲೇ ಕಳೆದು ಹೋಗಿದೆ.

ಈ ಆಜ್ಞೆಯು ವೈದ್ಯಕೀಯ ಸಾಧನ (ಡಿವೈಸ್)ಗಳಿಗೂ ಅನ್ವಯಿಸುತ್ತದೆಂದು ಡಿಒಪಿ 2015ರ ಮಾರ್ಚ್‌ನಲ್ಲಿ ಒಂದು ಅಧಿಸೂಚನೆ ಹೊರಡಿಸಿತ್ತು ಆದರೆ ಪ್ರಸ್ತಾವಿತ ಹೊಸ ಆಜ್ಞೆಯು, ವಾರ್ಷಿಕ 25,000 ಕೋಟಿ ರೂ. ವಹಿವಾಟು ಹೊಂದಿರುವ ಒಂದು ಉದ್ಯಮವಾಗಿರುವ, ವೈದ್ಯಕೀಯ ಸಾಧನಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳುತ್ತದೆ. ಯಾಕೆಂದರೆ, ವೈದ್ಯಕೀಯ ಸಾಧನ ಉದ್ಯಮಗಳಿಗೆ ಪ್ರತ್ಯೇಕವಾದ ಒಂದು ಸಂಹಿತೆಯನ್ನು ಸಿದ್ಧಪಡಿಸಲಾಗುತ್ತಿದೆ. ತಾವಾಗಿಯೇ ಅನುಸರಿಸಬೇಕಾದ (ವಲಂಟರಿ) ಸಂಹಿತೆಗಳಿಂದ ಉಪಯೋಗವಿಲ್ಲವೆಂದು ಸರಕಾರ ಒಪ್ಪುತ್ತದಾದರೂ ಈ ಹೊಸ ಸಹಿಂತೆ ಆರು ತಿಂಗಳವರೆಗೆ ಕಡ್ಡಾಯವಾಗಿರುವುದಿಲ್ಲ.

ಅನೈತಿಕವಾದ ಮಾರುಕಟ್ಟೆ ಕ್ರಮಗಳನ್ನು ನಿಯಂತ್ರಿಸುವ ಕರಡು ಆಜ್ಞೆಯು ಕಂಪೆನಿಗಳು ವೈದ್ಯರಿಗೆ, ಕೆಮಿಸ್ಟ್‌ಗಳಿಗೆ ಹಾಗೂ ಫಾರ್ಮಾಸಿಸ್ಟ್‌ಗಳಿಗೆ ನಗದು ಉಡುಗೊರೆಗಳು ಮತ್ತು ಸ್ಪಾನ್ಸರ್‌ಶಿಪ್ ಅಥವಾ ಪ್ರಯಾಣ ಸೌಕರ್ಯವನ್ನು ಒದಗಿಸುವುದು ಅಥವಾ ರಜಾದಿನಗಳ ವೆಚ್ಚವನ್ನು ತಾವೇ ನೀಡುವುದು ಇತ್ಯಾದಿಗಳನ್ನು ನಿಷೇಧಿಸುತ್ತದೆ. ಅದೇನಿದ್ದರೂ, ವೈದ್ಯಕೀಯ ಸಂಘಗಳು ನಡೆಸುವ ಅಕಾಡೆಮಿಕ್ ಅಧಿವೇಶನಗಳಲ್ಲಿ ಸಮ್ಮೇಳನಗಳನ್ನು ಸ್ಪಾನ್ಸರ್ ಮಾಡಲು ಮತ್ತು ಸರಕಾರಿ ಮಾಲಕತ್ವದ ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ಕ್ರೀನಿಂಗ್ ಶಿಬಿರಗಳನ್ನು ಅಥವಾ ತಿಳುವಳಿಕೆ ಅಭಿಯಾನಗಳನ್ನು ನಡೆಸಲು ಹೊಸ ಆಜ್ಞೆ ಅವಕಾಶ ನೀಡುತ್ತದೆ. ಆದರೆ ಇವುಗಳನ್ನು ಬದಲಿ ಅಥವಾ ಬಾಡಿಗೆ ಜಾಹೀರಾತಿಗಾಗಿ ಬಳಸಿಕೊಳ್ಳುವಂತಿಲ್ಲ ಎಂಬ ಶರತ್ತನ್ನು ಅದು ವಿಧಿಸುತ್ತದೆ.

 ನಿಯಮಗಳ ಉಲ್ಲಂಘನೆ ಕುರಿತ ಎಲ್ಲ ದೂರುಗಳನ್ನು ಸರಕಾರ ನೇಮಿಸುವ ‘ಎಥಿಕ್ಸ್ ಕಂಪ್ಲಯನ್ಸ್ ಆಪೀಸರ್’ ಎಂಬ ‘ಜಂಟಿ ಕಾರ್ಯದರ್ಶಿಯ ಶ್ರೇಣಿಗಿಂತ ಕೆಳಗಿನವಲ್ಲದ’ ಓರ್ವ ಅಧಿಕಾರಿ ವಿಚಾರಣೆ ನಡೆಸುತ್ತಾನೆ. ಆದರೆ ಕಾನೂನು ನಿಯಮಗಳ ಉಲ್ಲಂಘನೆಗೆ ಔಷಧ ತಯಾರಿಕಾ ಕಂಪೆನಿಯನ್ನು ಜವಾಬ್ದಾರರನ್ನಾಗಿಸಲಾಗುತ್ತದೋ ಅಥವಾ ಕಂಪೆನಿಯ ಪ್ರತಿನಿಧಿ (ಏಜೆಂಟ್)ಯನ್ನೋ ಎನ್ನುವುದು ಆಜ್ಞೆಯಲ್ಲಿ ಸ್ಪಷ್ಟವಿಲ್ಲ. ಕಂಪೆನಿಯೊಂದು ತಪ್ಪಿತಸ್ಥವೆಂದು ಕಂಡು ಬಂದಾಗ, ನಿಯಮ ಉಲ್ಲಂಘನೆಯ ಗಂಭೀರ ಸ್ವರೂಪವನ್ನು ಅವಲಂಬಿಸಿ, ಕಂಪೆನಿ ಉತ್ಪಾದಿಸುವ ಔಷಧಿಯ ಮಾರಾಟವನ್ನು ಮೂರು ತಿಂಗಳುಗಳಿಂದ ಒಂದು ವರ್ಷದ ಅವಧಿಯವರೆಗೆ ತಡೆಹಿಡಿಯುವುದು. ಅಮಾನತಿನಲ್ಲಿಡುವುದು ಶಿಕ್ಷೆಯಾಗಿರುತ್ತದೆ.

ಈ ಅಮಾನತು, ನಿಯಮ ಉಲ್ಲಂಘಿಸಿದ ಕಂಪೆನಿಯ ಔಷಧಿಯ ಬ್ರಾಂಡ್‌ಗೆ ಅನ್ವಯಿಸುತ್ತದೆ. ಶಿಕ್ಷೆ ನೀಡುವಾಗ ಜಾರಿಯಾಗುವ ಹಿಂದಿನ ಹನ್ನೆರಡು ತಿಂಗಳುಗಳಲ್ಲಿ ಕಂಪೆನಿಯ ಗರಿಷ್ಠ ವಹಿವಾಟನ್ನು ಪರಿಗಣಣಿಸಲಾಗುತ್ತದೆ. ಅಥವಾ ಕಂಪೆನಿಗಳು 5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿ ವರೆಗಿನ ದಂಡ ಪಾವತಿಸುವ ಮೂಲಕ ಮಾರಾಟ ತಡೆಹಿಡಿಯುವಿಕೆಯನ್ನು ಹಿಂಪಡೆಯಬೇಕೆಂದು ಮನವಿ ಮಾಡಿಕೊಳ್ಳಬಹುದು. ಹೀಗೆ ಮನವಿ ಮಾಡಿಕೊಂಡಾಗ, ಆ ಬಗ್ಗೆ ವಿಚಾರಣೆ ನಡೆಸುವ ಅಪಲೆೇಟ್ ಅಥಾರಿಟಿ ಡಿಒಪಿ ಕಾರ್ಯದರ್ಶಿಯಾಗಿರುತ್ತಾನೆ. ಈ ಹಂತದ ಬಳಿಕ ಕಂಪೆನಿಯು ನ್ಯಾಯಾಲಯಕ್ಕೆ ಹೋಗಬಹುದು.

ತಜ್ಞರ ಪ್ರಕಾರ, ಕಂಪೆನಿಗಳು ದಂಡ ಪಾವತಿಸುವ ಮೂಲಕ ಅಮಾನತು ಆದೇಶದಿಂದ ಅವು ಪಾರಾಗುವ ಆಯ್ಕೆ ನೀಡಿರುವುದು. ದಂಡ ಪಾವತಿ ವ್ಯವಸ್ಥೆಯನ್ನು ವ್ಯಾಪಾರದ ಇನ್ನೊಂದು ಖರ್ಚಿನ ಬಾಬತ್ತಾಗಿ ಮಾರ್ಪಡಿಸುತ್ತದೆ. ಇದರಿಂದಾಗಿ ಹೊಸ ನಿಯಂತ್ರಣ ನಿಯಮವು ಅಪರಾಧ ಎಸಗುವುದನ್ನು ತಡೆಯುವ ಅದರ ವೌಲ್ಯಕ್ಕೆ ಧಕ್ಕೆ ಉಂಟು ಮಾಡಿದಂತಾಗುತ್ತದೆ.

ಕೃಪೆ: health.economictimes.indiatimes.com

Writer - ರೀಮಾ ನಾಗರಾಜನ್

contributor

Editor - ರೀಮಾ ನಾಗರಾಜನ್

contributor

Similar News