ಪಾಸ್ಟರ್ ಹತ್ಯೆ : ಆರೆಸ್ಸೆಸ್, ಬಿಜೆಪಿ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಆಪ್ ಶಾಸಕ ಆಗ್ರಹ

Update: 2017-07-22 06:28 GMT

ಲುಧಿಯಾನ, ಜು.22: ಕೆಲ ದಿನಗಳ ಹಿಂದೆ ಲೂಧಿಯಾನದಲ್ಲಿ ನಡೆದ ಪಾಸ್ಟರ್ ಹತ್ಯೆ ಘಟನೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ಪಾತ್ರವೇನಾದರೂ ಇದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕೆಂದು ಪಂಜಾಬ್ ವಿಧಾನಸಭೆಯ ವಿಪಕ್ಷ ನಾಯಕರಾದ ಮರುದಿನವೇ ಎಎಪಿ ಶಾಸಕ ಸುಖಪಾಲ್ ಸಿಂಗ್ ಖೈರಾ ಆಗ್ರಹಿಸಿದ್ದಾರೆ.

ಲೂಧಿಯಾನದ ಸಲೇಂ ತಭ್ರಿ ಪ್ರದೇಶದಲ್ಲಿರುವ ಟೆಂಪಲ್ ಆಫ್ ಗಾಡ್ ಇದರ ಪಾಸ್ಟರ್ ಸುಲ್ತಾನ್ ಮಸಿಹ್ ಕೊಲೆಯಾದವರು. ಕಳೆದ ಶನಿವಾರ ಮೋಟಾರ್ ಸೈಕಲ್ಲಿನಲ್ಲಿ ಬಂದ ಇಬ್ಬರು ಮಸೀಹ್ ಮೇಲೆ ದಾಳಿ ನಡೆಸಿದ್ದರು.

‘‘ಹಿಂದಿನ ಘಟನೆಗಳನ್ನು ಗಮನಿಸಿದಾಗ ಒಡಿಶಾದಲ್ಲಿ ಕ್ರೈಸ್ತ ಪಾದ್ರಿಯ ಮೇಲೆ 2008ರಲ್ಲಿ ನಡೆದ ದಾಳಿ ಹಾಗೂ ಯುವತಿಯೊಬ್ಬಳನ್ನು ಜೀವಂತ ಸುಟ್ಟ ಪ್ರಕರಣದ ಹಿಂದೆ ಹಿಂದೂ ಮೂಲಭೂತವಾದಿಗಳಿದ್ದರು ಹಾಗೂ ಅವರ ವಿರುದ್ಧ ಎಫ್.ಐ.ಆರ್. ಕೂಡ ದಾಖಲಾಗಿತ್ತು. ಹಿಂದಿನ ಪಂಜಾಬ್ ಆಡಳಿತದ ಸಮಯದಲ್ಲೂ ಘರ್ ವಾಪ್ಸಿ ಕಾರ್ಯಕ್ರಮದ ಬಗ್ಗೆ ಕ್ರೈಸ್ತರು ಹಾಗೂ ಸಂಘ ಪರಿವಾರದ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದುದರಿಂದ ಇತ್ತೀಚಿಗಿನ ಘಟನೆಯ ಹಿಂದೆ ಕೇಸರಿ ಸಂಘಟನೆಗಳ ಕೈವಾಡ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ನನಗೆ ಖಚಿತವಾಗಿ ತಿಳಿದಿಲ್ಲವಾದರೂ ಪೊಲೀಸರು ತನಿಖೆ ನಡೆಸಬೇಕು’’ ಎಂದು ಖೈರಾ ಸುದ್ದಿಗಾರರೊಡನೆ ಮಾತನಾಡುತ್ತಾ ಹೇಳಿದರು.

‘‘ಈ ಹತ್ಯೆಯ ಹಿಂದೆ ಬಾಹ್ಯ ಶಕ್ತಿಗಳ ಕೈವಾಡದ ಬಗ್ಗೆ ಪಂಜಾಬ್ ಡಿಜಿಪಿ ಹೇಳಿರುವುದು ನನಗೆ ಆಶ್ಚರ್ಯ ಹುಟ್ಟಿಸಿದೆ. ಅವರು ಬೇರೆಯವರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ’’ ಎಂದ ಸುಖಪಾಲ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಸುಖಪಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಲೂಧಿಯಾನ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ಅರೋರಾ, ‘‘ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದನೆ ಉತ್ತೇಜಿಸಿದ ಕುಟುಂಬದಿಂದ ಬಂದವರು ಅವರು. ಬಿಜೆಪಿಯಿಂದ ಯಾರು ಕೂಡಾ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಲ್ಲ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News