ಎರಡು ಬಾರಿ ನ್ಯಾಯಾಲಯ ಆದೇಶಿಸಿದ್ದರೂ ಲಭಿಸದ ಗ್ರಾಚ್ಯುಯಿಟಿ, ಐಐಟಿ ಬಾಂಬೆಯ ನಿವೃತ್ತ ನೌಕರ ಆತ್ಮಹತ್ಯೆ

Update: 2024-05-05 10:52 GMT

ರಮಣ ಗರಸೆ | PC : thewire.in

ಮುಂಬೈ: ಐಐಟಿ ಬಾಂಬೆಯಲ್ಲಿ 39 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ದುಡಿದು ನಾಲ್ಕು ವರ್ಷಗಳ ಹಿಂದೆ ನಿವೃತ್ತರಾಗಿದ್ದ ರಮಣ ಗರಸೆ ಕಾರ್ಮಿಕ ಆಯೋಗವು ಎರಡು ಸಲ ತನ್ನ ಪರವಾಗಿ ಆದೇಶ ಹೊರಡಿಸಿದ್ದರೂ ಸಂಸ್ಥೆಯಿಂದ ಗ್ರಾಚ್ಯುಯಿಟಿ ಮೊತ್ತ ಸಿಗದ್ದರಿಂದ ಹತಾಶರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು thewire.in ವರದಿ ಮಾಡಿದೆ.

2019,ಡಿ.27ರಂದು ಐಐಟಿ ಬಾಂಬೆಯ ಆಡಳಿತವು ಗುತ್ತಿಗೆ ನೌಕರರಾಗಿದ್ದ ಗರಸೆ,ದಾದಾರಾವ್ ಇಂಗಳೆ ಮತ್ತು ತಾನಾಜಿ ಲಾಡ್ ಅವರಿಗೆ ನಿವೃತ್ತಿ ನೋಟಿಸನ್ನು ಜಾರಿಗೊಳಿಸಿತ್ತು. ನಿವೃತ್ತರಾದರೆ ಕಾಯಂ ನೌಕರರಿಗೆ ಸಿಗುವ ಲಾಭಗಳು ಸಿಗುವುದಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. 60 ವರ್ಷ ವಯಸ್ಸಾಗಿದ್ದರೂ ಉತ್ತಮ ದೈಹಿಕ ಸ್ಥಿತಿಯಲ್ಲಿದ್ದ ಅವರು ಹಿಂದಿನ ಹಲವಾರು ಗುತ್ತಿಗೆ ನೌಕರರಂತೆ ತಮ್ಮ ಸೇವಾವಧಿಯೂ ಇನ್ನೂ ಕೆಲವು ವರ್ಷಗಳ ಕಾಲ ವಿಸ್ತರಣೆಗೊಳ್ಳಬಹುದು ಎಂದು ಆಶಿಸಿದ್ದರು.

ನಿವೃತ್ತಿಯ ಬಳಿಕ,ಮೂರು ದಶಕಗಳಿಗೂ ಹೆಚ್ಚಿನ ಅವರ ದುಡಿಮೆಯ ಅವಧಿಯಲ್ಲಿ ಸಂಗ್ರಹವಾಗಿದ್ದ ಗ್ರಾಚ್ಯುಯಿಟಿ ಮೊತ್ತವನ್ನು ನೀಡಲು ಐಐಟಿ ಆಡಳಿತವು ನಿರಾಕರಿಸಿತ್ತು. ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಿರ್ಧರಿಸಿದ್ದ ಗರಸೆ,ಇಂಗಳೆ ಮತ್ತು ಲಾಡ್ ಕಾರ್ಮಿಕ ಆಯೋಗದ ಮೊರೆ ಹೋಗಿದ್ದು, ಅದು ಎರಡು ಸಲ ಅವರ ಪರವಾಗಿ ಆದೇಶಗಳನ್ನು ಹೊರಡಿಸಿತ್ತು. ಆದರೆ ಐಐಟಿ ಆಡಳಿತವು ಮತ್ತೊಮ್ಮೆ ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಸಜ್ಜಾಗಿತ್ತು. ಅಂತಿಮವಾಗಿ ಬದುಕಿನಲ್ಲಿ ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದ ಗರಸೆ ಮೇ 2ರಂದು ಐಐಟಿ ಕ್ಯಾಂಪಸ್‌ಗೆ ಸಮೀಪದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4,28,805 ರೂ.ಗಳ ಗ್ರಾಚ್ಯುಯಿಟಿ ಮೊತ್ತಕ್ಕಾಗಿ ಕಾಯುತ್ತಲೇ ಬದುಕಿನ ಅಧ್ಯಾಯವನ್ನು ಮುಗಿಸಿದ ಗರಸೆ ಅದನ್ನು ತನ್ನ ಅನಾರೋಗ್ಯಗಳಿಗೆ ಚಿಕಿತ್ಸೆಗೆ ಬಳಸಲು ಆಶಿಸಿದ್ದರು. ನಿವೃತ್ತಿಯ ಬಳಿಕ ನಾಲ್ಕು ವರ್ಷಗಳಿಂದಲೂ ಅವರು ಪಾರ್ಶ್ವವಾಯು ಪೀಡಿತರಾಗಿದ್ದರು.

ಸಂಸ್ಥೆಯು ‘ಅರ್ಹ’ನೌಕರರಿಗೆ ಅಸ್ತಿತ್ವದಲ್ಲಿರುವ ಕಾನೂನುಗಳ ಮೇರೆಗೆ ಗ್ರಾಚ್ಯುಯಿಟಿ ಪಾವತಿಸುತ್ತದೆ ಎಂದು ಐಐಟಿ ಬಾಂಬೆ ವಕ್ತಾರರು ತಿಳಿಸಿದರು. ಪೊಲೀಸರೂ ಗರಸೆ ಆತ್ಮಹತ್ಯೆಯಲ್ಲಿ ಸಂಸ್ಥೆಯ ಪಾತ್ರವಿಲ್ಲ ಎಂಬ ತಕ್ಷಣದ ನಿರ್ಧಾರಕ್ಕೆ ಬಂದಿದ್ದಾರೆ.

ಗರಸೆ ಆತ್ಮಹತ್ಯೆ ಚೀಟಿಯನ್ನು ಬರೆದಿರಲಿಲ್ಲವಾದರೂ ದಿನಗಳೆದಂತೆ ಅವರು ಭರವಸೆಯನ್ನು ಕಳೆದುಕೊಳ್ಳುತ್ತಿದ್ದರು. ಗ್ರಾಚ್ಯುಯಿಟಿ ಮೊತ್ತವೊಂದೇ ಅವರ ಉಳಿತಾಯವಾಗಿತ್ತು ಎಂದು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಮೇ 3ರಂದು ಐಐಟಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಸ್ಮರಣ ಸಭೆಯಲ್ಲಿ ಪಾಲ್ಗೊಂಡಿದ್ದ ಇಂಗಳೆ ಮತ್ತು ಲಾಡ್ ತಿಳಿಸಿದರು. ಆದರೆ ಆಡಳಿತವು ಗರಸೆ ಆತ್ಮಹತ್ಯೆಯ ಬಗ್ಗೆ ಸಂಪೂರ್ಣ ಮೌನ ವಹಿಸಿತ್ತು.

ಕಳೆದೊಂದು ದಶಕದಲ್ಲಿ ಗರಸೆ ಸೇರಿದಂತೆ 1,800 ನೌಕರರು ಬಲವಂತದಿಂದ ನಿವೃತ್ತರಾಗಿದ್ದಾರೆ. ಕ್ಯಾಂಪಸ್‌ನಲ್ಲಿ ವಿವಿಧ ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಿದ್ದ ಅವರು ಮಾಸಿಕ ಸಂಬಳವನ್ನು ಬಿಟ್ಟರೆ ಇನ್ನೇನನ್ನೂ ಗಳಿಸಿರಲಿಲ್ಲ. ಇಂಗಳೆ ಪ್ರಕಾರ ಗರಸೆ ಗುಜರಾತಿನ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದರು.

‘ನಮ್ಮ ಸೇವೆಯುದ್ದಕ್ಕೂ ನೌಕರಿಯನ್ನು ಕಾಯಂಗೊಳಿಸುವುದಾಗಿ ಮತ್ತು ಕಾಯಂ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಪೂರ್ವಾನ್ವಯವಾಗಿ ನೀಡುವುದಾಗಿ ಆಡಳಿತ ನಮಗೆ ಭರವಸೆ ನೀಡುತ್ತಲೇ ಇತ್ತು. ಆದರೆ ಅದು ನಾವು ಕೆಲಸವನ್ನು ಬಿಡದಂತೆ ಕಣ್ಣೊರೆಸುವ ತಂತ್ರವಾಗಿತ್ತು ’ ಎಂದು ಇಂಗಳೆ ಹೇಳಿದರು.

ದಶಕದ ಹಿಂದೆಯೇ ಐಐಟಿ ಬಾಂಬೆಯಲ್ಲಿ ಗುತ್ತಿಗೆ ನೌಕರರು ತಮ್ಮದೇ ಆದ ಯೂನಿಯನ್ ರಚಿಸಿಕೊಂಡಿದ್ದರು. ಆದರೆ ಯಾವುದೇ ದೊಡ್ಡ ಸಂಸ್ಥೆಗಳಲ್ಲಿರುವಂತೆ ಈ ಸಂಘಟನೆಯನ್ನು ತಿರಸ್ಕಾರದಿಂದಲೇ ನೋಡಲಾಗಿತ್ತು ಮತ್ತು ಯೂನಿಯನ್‌ಗೆ ಸೇರುವವರು ಆಡಳಿತದ ಕಿರುಕುಳಗಳಿಗೆ ಸುಲಭದ ಗುರಿಗಳಾಗುತ್ತಿದ್ದರು.

ಬಹುಶಃ ಗರಸೆ,ಇಂಗಳೆ ಮತ್ತು ಲಾಡ್ ಮಾತ್ರ ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಿರ್ಧರಿಸಿದ್ದ ಕಾರ್ಮಿಕರಾಗಿದ್ದರು. ಕಾರ್ಮಿಕ ಹಕ್ಕುಗಳ ನ್ಯಾಯವಾದಿ ಸುಧಾ ಭಾರದ್ವಾಜ್ ಅವರು ಮೊದಲಿನಿಂದಲೂ ಅವರ ಪ್ರಕರಣವನ್ನು ನಿರ್ವಹಿಸಿದ್ದರು.

ಗರಸೆ,ಇಂಗಳೆ ಮತ್ತು ಲಾಡ್ ಬೇಡಿಕೆಯಿಟ್ಟಿದ್ದ ಗ್ರಾಚ್ಯುಯಿಟಿ ಮೊತ್ತವು ಅವರಿಗೆ ಸರ್ವಸ್ವವಾಗಿತ್ತು,ಆದರೆ ಸಂಸ್ಥೆಗೆ ಅದು ಏನೂ ಅಲ್ಲ. ವಾಸ್ತವದಲ್ಲಿ ಅವರು ಕಾನೂನು ಸಮರಕ್ಕಾಗಿ ಮಾಡಿರುವ ವೆಚ್ಚ ಇದನ್ನು ಮೀರಿದೆ. ಆದರೆ ಇಂದು ಈ ಮೂವರಿಗೆ ಗ್ರಾಚ್ಯುಯಿಟಿ ಪಾವತಿಸಿದರೆ ನಾಳೆ ಸಾವಿರಾರು ಇತರ ಗುತ್ತಿಗೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಎದ್ದು ನಿಲ್ಲುತ್ತಾರೆ ಎನ್ನುವುದು ಸಂಸ್ಥೆಗೆ ಗೊತ್ತಿದೆ ಮತ್ತು ಇದನ್ನು ಅದು ಖಂಡಿತವಾಗಿಯೂ ಬಯಸುವುದಿಲ್ಲ ಎಂದು ಐಐಟಿ ಬಾಂಬೆಯ ವಿದ್ಯಾರ್ಥಿ ಸಂಘಟನೆ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್‌ನ ಸದಸ್ಯರೋರ್ವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News