ಕಸಾಯಿಖಾನೆಗಳಿಗಿಂತಲೂ ಬರ್ಬರ ಈ ಗೋಶಾಲೆಗಳು

Update: 2017-07-25 05:06 GMT

ಈ ದೇಶ ಅದೆಷ್ಟು ವೈರುದ್ಧಗಳನ್ನು ಹೊಂದಿದೆ ಎಂದರೆ, ಇಲ್ಲಿ, ಒಳ್ಳೆಯದನ್ನು ಮೊದಲು ಸಾಯಿಸಲಾಗುತ್ತದೆ. ಬಳಿಕ ಅದನ್ನು ದೇವರೆಂದು ಪೂಜಿಸಲಾಗುತ್ತದೆ. ಹೆಣ್ಣನ್ನು ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ’ ಎಂದ ದೇಶ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಆಕೆಯನ್ನು ಈ ದೇಶ ನಡೆಸಿಕೊಂಡಷ್ಟು ಕ್ರೂರವಾಗಿ ಯಾವ ದೇಶವೂ ನಡೆಸಿಕೊಳ್ಳಲಿಲ್ಲ. ಬ್ರಿಟಿಷರು ಈ ದೇಶಕ್ಕೆ ಕಾಲಿಡುವವರೆಗೂ ಇಲ್ಲಿ ಸತಿಸಹಗಮನ ಜೀವಂತವಿತ್ತು. ಈ ದೇಶದಲ್ಲಿ ‘ವಿಧವೆ’ ಎನ್ನುವ ಹೆಣ್ಣು ಜಾತಿ ಈಗಲೂ ಅಸ್ತಿತ್ವದಲ್ಲಿದೆ. ಅವರಿಗಾಗಿಯೇ ಒಂದು ಕೇರಿಯನ್ನು ನಾವು ಸೃಷ್ಟಿ ಮಾಡಿದ್ದೇವೆ. ಇತ್ತೀಚೆಗೆ ನ್ಯಾಯಾಧೀಶರೊಬ್ಬರು ವಿಧವೆಯರ ಅತಂತ್ರ ಸ್ಥಿತಿಯ ಕುರಿತಂತೆ ಕಳವಳ ವ್ಯಕ್ತಪಡಿಸಿದರು.

ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಪತಿಯನ್ನು ಕಳೆದುಕೊಂಡ ಹೆಣ್ಣಿನ ಸ್ಥಿತಿ ಅತ್ಯಂತ ಘೋರವಾಗಿದೆ. ಆಕೆ ಯಾವುದೇ ಮಂಗಳಕರವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಸ್ವತಃ ತನ್ನ ಮಕ್ಕಳ ಮದುವೆಯ ನೇತೃತ್ವವನ್ನು ವಹಿಸುವಂತಿಲ್ಲ. ಅಷ್ಟೇ ಅಲ್ಲ, ಅದೆಷ್ಟೋ ಕುಟುಂಬಗಳು ಪತಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳನ್ನು ಮಥುರಾದ ವೃಂದಾವನದಲ್ಲಿ ಬಿಟ್ಟು ಬರುತ್ತಾರೆ. ಹಾಗಾದರೆ, ಹೆಣ್ಣನ್ನು ನಾವು ‘ದೇವತೆ’ ಎಂದು ಕರೆಯುವುದರಲ್ಲಿ ಏನು ಅರ್ಥ ಉಳಿಯಿತು? ಈ ದೇಶದಲ್ಲಿ ನದಿಯೊಂದಿಗೆ ನೇರ ಸಂಬಂಧವಿದ್ದುದು ರೈತನಿಗೆ. ಆದರೆ ಯಾವಾಗ ವೈದಿಕ ಪರಂಪರೆ ನದಿಯನ್ನು ದೇವರಾಗಿ ಪರಿಗಣಿಸಿತೋ, ಅಲ್ಲಿಂದ ನದಿಗಳ ಜೀವಕ್ಕೂ ಕುತ್ತು ಬರತೊಡಗಿತು. ಇಂದು ಗಂಗಾನದಿ ಶುಚಿಗೊಳಿಸಲಾಗದಷ್ಟು ಕೆಟ್ಟು ಹೋಗಿದ್ದರೆ ಅದರ ನೇರ ಕಾರಣಕರ್ತರು, ಗಂಗೆಯನ್ನು ಪವಿತ್ರ ಎಂದು ಪರಿಗಣಿಸಿದ ಅದರ ಭಕ್ತರೇ ಆಗಿದ್ದಾರೆ.

ಪವಿತ್ರ ನದಿಗೆ ಅರೆಬೆಂದ ಹೆಣಗಳನ್ನು ಎಸೆಯಬಾರದು, ಪ್ರಸಾದದ ಹೆಸರಲ್ಲಿ ನದಿಗಳನ್ನು ಮಾಲಿನ್ಯಗೊಳಿಸಬಾರದು ಎನ್ನುವ ಪ್ರಜ್ಞೆಯೂ ಇಲ್ಲದ ಭಕ್ತರು ಗಂಗಾ ನದಿಯ ಅತೀ ದೊಡ್ಡ ಶತ್ರುಗಳಾಗಿ ಪರಿವರ್ತನೆಗೊಂಡಿದ್ದಾರೆ. ಗಂಗೆಯನ್ನು ಶುದ್ಧಿಗೊಳಿಸಲು ಸುರಿದ ಹಣವೆಲ್ಲ ವ್ಯರ್ಥವಾಗಿವೆ. ಗಂಗಾನದಿಯ ಶುದ್ಧೀಕರಣದ ಹೆಸರಲ್ಲಿ ರಾಜಕಾರಣಿಗಳೆಲ್ಲ ಕೋಟಿ ಕೋಟಿ ರೂಪಾಯಿ ದೋಚಿದ್ದಾರೆ. ಹಾಗೆಯೇ ನಾಗರಹಾವನ್ನು ದೇವರೆಂದು ಸ್ವೀಕರಿಸಿರುವ ಜನರು, ಹೇಗೆ ನಾಗರಹಾವುಗಳ ಸಾವಿಗೆ ಕಾರಣರಾಗುತ್ತಿದ್ದಾರೆ ಎನ್ನುವುದನ್ನು ಇತ್ತೀಚೆಗೆ ಉರಗ ತಜ್ಞರೊಬ್ಬರು ಮಾಧ್ಯಮಗಳಿಗೆ ವಿವರಿಸಿದ್ದರು.

ಹಾವು ಹಾಲು ಕುಡಿಯುವುದಿಲ್ಲ ಎನ್ನುವುದು ವೈಜ್ಞಾನಿಕವಾದ ಮಾತು. ಹುತ್ತಗಳಿಗೆ ಹಾಲು ಸುರಿದರೆ, ಹಾವುಗಳನ್ನು ಕೊಂದಂತೆಯೇ ಸರಿ. ಹಾಲು ಸುರಿದಾಕ್ಷಣ ಅಲ್ಲಿಗೆ ಇರುವೆಗಳು ಧಾವಿಸುತ್ತವೆ. ಇರುವೆಗಳ ಕೈಗೆ ಸಿಲುಕಿಕೊಂಡರೆ ಹಾವುಗಳು ನರಳಿ ನರಳಿ ಸಾಯಬೇಕಾಗುತ್ತದೆ. ಹಾವು ಮೊಟ್ಟೆ, ಇಲಿ ಇತ್ಯಾದಿಗಳನ್ನು ತಿಂದು ಬದುಕುವ ಜೀವಿ. ಹಾವಿನ ಹೆಸರಲ್ಲಿ ಹಾಲನ್ನು ಚೆಲ್ಲುತ್ತಿರುವುದು ಮಾತ್ರವಲ್ಲ, ಹಾವಿನ ಸಾವಿಗೂ ಇದೇ ಭಕ್ತರು ಕಾರಣವಾಗುತ್ತಿದ್ದಾರೆ ಎನ್ನುವುದು ಉರಗತಜ್ಞರ ಆರೋಪ. ಇದೀಗ ಈ ಭಕ್ತರ ದೃಷ್ಟಿ ಗೋವುಗಳ ಮೇಲೆ ಬಿದ್ದಿದೆ. ಗೋವಿನಲ್ಲಿ ದೇವರಿದ್ದಾರೆ ಎಂದು ಭಾವಿಸಿರುವ ಅಂಧ ಭಕ್ತರ ಕಾರಣದಿಂದಾಗಿ ಇದೀಗ ದೇಶಾದ್ಯಂತ ಗೋಶಾಲೆಯಲ್ಲಿರುವ ಗೋವುಗಳು ಹಸಿವಿನಿಂದ, ವಿವಿಧ ರೋಗಗಳಿಂದ ಚಿತ್ರಹಿಂಸೆ ಅನುಭವಿಸುತ್ತಾ ಸಾಯುತ್ತಿದೆ. ಗೋಶಾಲೆಗಳೇ ಗೋವುಗಳ ಪಾಲಿಗೆ ಬರ್ಬರ ಕಸಾಯಿಖಾನೆಗಳಾಗಿವೆ. ಅಷ್ಟೇ ಅಲ್ಲ, ಗೋಭಕ್ತರ ಕಾರಣದಿಂದ ದೇಶಾದ್ಯಂತ ಗೋವುಗಳು ನಿರ್ವಂಶವಾಗುವ ಸೂಚನೆ ಕಾಣಿಸಿಕೊಂಡಿದೆ.

 ಆಂಧ್ರ ಪ್ರದೇಶದ ಗೋಶಾಲೆಯೊಂದರಲ್ಲಿ 46 ಗೋವುಗಳು ಅತ್ಯಂತ ಬರ್ಬರ ಸ್ಥಿತಿಯಲ್ಲಿ ಸತ್ತಿವೆ. ಇಡೀ ಗೋಶಾಲೆ ಶುಚಿತ್ವವಿಲ್ಲದೆ ದುರ್ವಾಸನೆಯಿಂದ ಕೂಡಿದ್ದರೆ, ಸೆಗಣಿಯ ರಾಶಿಯ ನಡುವೆ ಗೋವುಗಳ ಹೆಣಗಳು ತೇಲಾಡುತ್ತಿದ್ದವು. ಈ ‘ಗೋಶಾಲೆ’ಯೆನ್ನುವುದು ಅದೆಷ್ಟು ಅವೈಜ್ಞಾನಿಕ ಎನ್ನುವುದಕ್ಕೆ ಆಂಧ್ರದ ಕಾಕಿನಾಡ ಗೋಶಾಲೆಯ ದುರಂತವೇ ದೊಡ್ಡ ಉದಾಹರಣೆ. ಇತ್ತೀಚೆಗೆ ರಾಜಸ್ಥಾನದಲ್ಲೂ ಇದೇ ರೀತಿ ಗೋವುಗಳು ಸಾಮೂಹಿಕವಾಗಿ ಹಸಿವಿನಿಂದ ರೋಗದಿಂದ ಗೋಶಾಲೆಗಳಲ್ಲಿ ಸಾವನ್ನಪ್ಪಿದ್ದವು. ಈ ಕುರಿತಂತೆ ಹೈಕೋರ್ಟ್‌ನಲ್ಲಿ ವಿಚಾರಣೆಯೂ ನಡೆದಿತ್ತು. ದೇಶದ ವಿವಿಧ ಕಡೆಗಳಲ್ಲಿ ನಿರಾಶ್ರಿತ ಗೋವುಗಳು ಗೋಶಾಲೆಗಳಲ್ಲಿ ಆಹಾರಗಳಿಲ್ಲದೆ, ರೋಗರುಜಿನದಿಂದ ಸಾಯುತ್ತಿವೆ ಮಾತ್ರವಲ್ಲ, ಇಡೀ ಪ್ರದೇಶವನ್ನೇ ಅರಾಜಕಗೊಳಿಸುತ್ತಿವೆ. ಇವನ್ನು ಹೇಗೆ ನಿಯಂತ್ರಿಸಬೇಕು ಎಂದು ತಿಳಿಯಲಾಗದೆ ಆಡಳಿತ ವ್ಯವಸ್ಥೆ ಒದ್ದಾಡುತ್ತಿದೆ.

ಆಹಾರಕ್ಕಾಗಿ ಗೋವುಗಳನ್ನು ಕಸಾಯಿಖಾನೆಯಲ್ಲಿ ಹತ್ಯೆ ಮಾಡುವುದು ತಪ್ಪು ಎಂದಾದರೆ, ಗೋಶಾಲೆಯಲ್ಲಿ ಈ ರೀತಿ ಚಿತ್ರಹಿಂಸೆ ನೀಡಿ ಗೋವುಗಳನ್ನು ಸಾಯಿಸುವುದು ಸರಿಯೇ? ಈ ಗೋವುಗಳ ಸಾವಿಗೆ ನೇರವಾಗಿ ಗೋಭಕ್ತರೇ ಕಾರಣರಲ್ಲವೇ? ಇತ್ತೀಚೆಗೆ ಮಾರಾಟನಿಯಂತ್ರಣ ಕಾಯ್ದೆ ಜಾರಿಗೆ ಬಂದ ಆನಂತರ, ರೈತರು ಅನುಪಯುಕ್ತ ಗೋವುಗಳನ್ನು ಮಾರಲು ಸಾಧ್ಯವಾಗದೆ, ಮನೆಯಲ್ಲೂ ಇಟ್ಟುಕೊಳ್ಳಲಾರದೆ ಬೀದಿಗೆ ಬಿಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಬೀದಿಗಳಲ್ಲಿ ಉಂಡಾಡಿ ದನಗಳ ಸಂಖ್ಯೆಯೂ ಹೆಚ್ಚುತ್ತಿವೆ. ಗೋಭಕ್ತರ ಅಟ್ಟಹಾಸದಿಂದ ನಡೆಯುತ್ತಿರುವ ಅನಾಹುತಗಳು ಒಂದೆರಡಲ್ಲ. ಒಂದೆಡೆ, ಕೃಷಿಕರು ದನಸಾಕುವುದನ್ನು ನಿಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ರೈತರು ಗೋವುಗಳನ್ನು ಪೂಜೆ ಮಾಡುವುದಕ್ಕಾಗಿ ಸಾಕುತ್ತಿರಲಿಲ್ಲ. ಬದಲಿಗೆ ಜೀವನ ನಿರ್ವಹಣೆಗಾಗಿ ಅದನ್ನು ಉದ್ಯಮದ ಭಾಗವಾಗಿ ಸಾಕುತ್ತಿದ್ದರು.

ಗೋವಿನ ಉತ್ಪನ್ನವೆಂದರೆ ಹಾಲು ಮಾತ್ರವಲ್ಲ. ಚರ್ಮೋದ್ಯಮ, ಮಾಂಸಾಹಾರಿಗಳು ಈ ಉದ್ಯಮದ ಭಾಗವಾಗಿದ್ದಾರೆ. ಅನುಪಯುಕ್ತವಾದ, ಹಾಲುಕೊಡದ ಗೋವುಗಳನ್ನು ಮಾರುವುದು ತೀರಾ ಸಹಜವಾಗಿದೆ. ಒಂದು ದನವನ್ನು 10 ಸಾವಿರ ರೂಪಾಯಿಗೆ ಮಾರಿದರೆ ಅದರಿಂದ ರೈತರಿಗೆ ದೈನಂದಿನ ಆವಶ್ಯಕತೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿತ್ತು. ಅಷ್ಟೇ ಅಲ್ಲ, ಇರುವ ದನಗಳಿಗೆ ಬೇಕಾದ ಆಹಾರವನ್ನು ಆ ಹಣದಿಂದ ಪೂರೈಸಲು ಸಾಧ್ಯವಾಗುತ್ತಿತ್ತು. ಅನುಪಯುಕ್ತ ದನವನ್ನು ಕೊಟ್ಟಿಗೆಯಲ್ಲಿ ಇಟ್ಟುಕೊಂಡರೆ ಅವರಿಗೆ ನಷ್ಟವೇ ಅಧಿಕ. ಆದುದರಿಂದ ಮಾಂಸಾಹಾರಿಗಳು ಹೈನೋದ್ಯಮದ ಒಂದು ಪ್ರಮುಖ ಭಾಗ. ಯಾವಾಗ ಗೋವುಗಳಿಗೆ ಅದರ ಭಕ್ತರು ಅಟಕಾಯಿಸಿಕೊಂಡರೋ ಅಲ್ಲಿಂದ ರೈತರಿಗೆ ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡುವುದು ಕಷ್ಟವಾಗಿದೆ. ಸಾಕುವುದಕ್ಕೆಂದು ದನವನ್ನು ಸಾಗಿಸುತ್ತಿದ್ದರೂ ನಕಲಿ ಗೋರಕ್ಷಕರ ಕಾಟವನ್ನು ಎದುರಿಸಬೇಕು. ಕೆಲವೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳಬೇಕು.

ತಮ್ಮ ಮನೆಯ ಗೋವುಗಳನ್ನು ಮಾರಾಟ ಮಾಡಲು ಬೀದಿ ರೌಡಿಗಳಿಂದ ಗೂಂಡಾಗಳಿಂದ ಅನುಮತಿ ಪಡೆಯಬೇಕು ಅಥವಾ ಅವರಿಗೆ ಕಮಿಶನ್ ನೀಡಬೇಕು. ತನಗೇ ಉಣ್ಣಲು ಸರಿಯಾಗಿ ಆಹಾರವಿಲ್ಲದೇ ಇರುವಾಗ, ಹಟ್ಟಿಯಲ್ಲಿರುವ ಅನುಪಯುಕ್ತ ಗೋವುಗಳಿಗೆ ಆಹಾರವನ್ನು ಒದಗಿಸುವುದು ರೈತನಿಗೆ ಸಾಧ್ಯವಾಗುವ ಮಾತೇ? ಅಂತಿಮವಾಗಿ ಗ್ರಾಮೀಣ ಪ್ರದೇಶದ ಜನರು ಈ ಗೋವುಗಳ ತಂಟೆಯೇ ಬೇಡವೆಂದು ತಮ್ಮ ತಮ್ಮ ಕೊಟ್ಟಿಗೆಗಳನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ. ಅಂದರೆ ಗೋಭಕ್ತರ ದೆಸೆಯಿಂದಾಗಿ ಮುಂದಿನ ದಿನಗಳಲ್ಲಿ ಗೋವುಗಳ ತಳಿಗಳು ಸಂಪೂರ್ಣ ನಾಶವಾಗಲಿವೆ. ಪೂಜೆ ಮಾಡುವುದಕ್ಕೂ ಗೋವುಗಳು ಸಿಗುವುದು ಅನುಮಾನ. ಗೋಶಾಲೆಗಳೆಂಬ ಪರಿಕಲ್ಪನೆಯೇ ಅವೈಜ್ಞಾನಿಕವಾದುದು.

ಗೋವುಗಳು ದೇವರು ಎನ್ನುವ ನಂಬಿಕೆ ಕೇವಲ 8 ಶೇಕಡವಿರುವ ವೈದಿಕ ಧರ್ಮೀಯರದ್ದು. ಗೋವುಗಳನ್ನು ದೇವರು ಎಂದು ನಂಬುವವರೇ ಅನುಪಯುಕ್ತ ಗೋವುಗಳನ್ನು ತಮ್ಮ ತಮ್ಮ ಮನೆಯಲ್ಲಿಟ್ಟು ಸಾಕುವ ಹೊಣೆ ಹೊತ್ತುಕೊಳ್ಳಬೇಕು. ಅದು ಬಿಟ್ಟು ಈ ನಂಬಿಕೆಗಾಗಿ, ಜನರ ಅಭಿವೃದ್ಧಿಗೆ ಬಳಸಬೇಕಾದ ಕೋಟ್ಯಂತರ ಹಣವನ್ನು ಗೋಶಾಲೆಗಳೆಂಬ ಅನುಪಯುಕ್ತ ಕೆಲಸಕ್ಕೆ ಬಳಸುವುದು ಅಪರಾಧವಾಗಿದೆ. ಇಂದು ಗೋಶಾಲೆ ಅಕ್ರಮಗಳ ಬೀಡಾಗಿದೆ. ಗೋವುಗಳಿಗೆಂದು ಬಿಡುಗಡೆಗೊಂಡಿರುವ ಅನುದಾನಗಳೆಲ್ಲ ಭ್ರಷ್ಟರ ಪಾಲಾಗುತ್ತಿದೆ. ಗೋವುಗಳು ಹಸಿವಿನಿಂದ ಸಾಯುತ್ತ್ತಿವೆ ಅಥವಾ ಗುಟ್ಟಾಗಿ ಕಸಾಯಿಖಾನೆಗಳ ಕಡೆಗೆ ಸಾಗುತ್ತಿವೆ. ಆದುದರಿಂದ ಗೋವುಗಳ ಬರ್ಬರ ಕಸಾಯಿಖಾನೆಗಳಾಗಿರುವ ಎಲ್ಲ ಗೋಶಾಲೆಗಳನ್ನು ತಕ್ಷಣವೇ ಮುಚ್ಚಬೇಕಾಗಿದೆ. ಗೋವುಗಳ ಮಾರಾಟದ ಹಕ್ಕನ್ನು ಅದನ್ನು ಸಾಕುವ ರೈತರಿಗೇ ಮರಳಿಸಬೇಕಾಗಿದೆ. ಗೋಸಾಕಣೆ ಅರ್ಥಶಾಸ್ತ್ರದ ಭಾಗವೇ ಹೊರತು ಧರ್ಮಶಾಸ್ತ್ರದ ಭಾಗವಲ್ಲ ಎನ್ನುವುದನ್ನು ಅದರ ಭಕ್ತರಿಗೆ ಸ್ಪಷ್ಟಗೊಳಿಸಿ ಗೋಶಾಲೆಗಳಿಂದ ಗೋವುಗಳಿಗೆ ಮುಕ್ತಿ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News