ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಸೀಟು ಪಡೆದ ಕೊಳೆಗೇರಿ ಕಾರ್ಮಿಕನ ಮಗ, ಕೂಲಿಯ ಮಗಳು

Update: 2017-07-25 18:54 GMT

ದಿಲ್ಲಿ ವಿಶ್ವವಿದ್ಯಾನಿಲಯದ ಕಾಲೇಜೊಂದರಲ್ಲಿ ಸೀಟು ಪಡೆಯುವುದೆಂದರೆ ಅದೊಂದು ಕನಸು ನನಸಾದಂತೆ. ಆದರೆ ನಗರದ ಕೊಳೆಗೇರಿಯೊಂದರಲ್ಲಿ ಬದುಕುತ್ತ ಬಡತನ ಹಾಗೂ ಕಷ್ಟಗಳ ಸರಮಾಲೆಯ ವಿರುದ್ಧ ಹೋರಾಡಿ ಗೆದ್ದು ಭಾರೀ ಎತ್ತರದ ಕಟ್-ಆಫ್ ಅಂಕಗಳ ಯಾದಿಯಲ್ಲಿ ಒಂದು ಸ್ಥಾನ ಗಳಿಸುವುದೆಂದರೆ ಈ ಸಾಧನೆ ಇನ್ನಷ್ಟು ಪ್ರಶಂಸಾರ್ಹವಾಗುತ್ತದೆ. ದಿಲ್ಲಿ ವಿಶ್ವವಿದ್ಯಾನಿಲಯದ ಸುಮಾರು 60 ಪದವಿ ಸಂಸ್ಥೆಗಳಿಗೆ ಪ್ರವೇಶ ಪಡೆದ ಸಾವಿರಾರು ಮಂದಿ ವಿದ್ಯಾರ್ಥಿಗಳಲ್ಲಿ, ಓರ್ವ ಐಎಎಸ್ ಅಧಿಕಾರಿಯಾಗಲು ಬಯಸುವ ವಿದ್ಯಾರ್ಥಿಯೂ ಇದ್ದಾನೆ.

ಈತ ಕಾರ್ಮಿಕನೊಬ್ಬನ ಮಗ. ಈತನ ತಾಯಿ ಲಿಂಬೆಹಣ್ಣು ಮಾರಾಟಮಾಡಿ ಕಷ್ಟದಿಂದ ಬದುಕು ಸವೆಸುವ ಬಡ ಹೆಂಗಸು ಮತ್ತು ಒಬ್ಬ ಕೂಲಿಯ ಮಗಳು ಕೂಡಾ ಇದ್ದಾಳೆ. ಇವಳು ಪತ್ರಿಕೋದ್ಯಮದ ಮೂಲಕ ಮಹಿಳೆಯರನ್ನು ಸಬಲರಾಗಿಸುವ ಗುರಿ ಹೊಂದಿದ್ದಾಳೆ. 17ರ ಹರೆಯದ ಪ್ರಿನ್ಸ್‌ಗೆ ಅಧ್ಯಯನ ನಡೆಸಲು ಇದ್ದ ಸಾಮಾನ್ಯ ಪರಿಸ್ಥಿತಿಗಳೆಂದರೆ ಪಕ್ಕದಲ್ಲೇ ಹಾದುಹೋಗುವ ಟ್ರೈನ್‌ಗಳ ನಿರಂತರ ಸದ್ದು ಮತ್ತು ಭಾರತದ ಅತ್ಯಂತ ಬೃಹತ್ತಾದ ಗುಜರಿಮಾರುಕಟ್ಟೆಗಳಲ್ಲೊಂದಾಗಿರುವ ಮಾಯಾಪುರಿಯಲ್ಲಿ ಕಸದ ರಾಶಿಗಳಿಂದ ಬರುವ ದುರ್ನಾಥ.

‘‘ನಾನು ರಾತ್ರಿ ವೇಳೆ ಓದಬೇಕಾಗಿತ್ತು, ಈ ಹೊತ್ತಲ್ಲಿ ಕಡಿಮೆ ಟ್ರೈನುಗಳು ಹಾದುಹೋಗುತ್ತವೆ. ಆದರೂ ಒಮ್ಮಿಮ್ಮೆ ಕಿವಿ ಕಿವುಡಾಗಿಸುವ ಸದ್ದಿನಿಂದ ಪಾರಾಗಲು ಕಿವಿಗೆ ಇಯರ್‌ಬಡ್ಸ್ ಗಳನ್ನು ಇಟ್ಟುಕೊಳ್ಳುತ್ತಿದ್ದೆ’’ ಎನ್ನುತ್ತಾನೆ ಪ್ರಿನ್ಸ್. ‘‘ನಾನು ಒಬ್ಬ ಐಎಎಸ್ ಅಧಿಕಾರಿಯಾದರೆ ನನ್ನ ಕುಟುಂಬವನ್ನು ಇಲ್ಲಿಂದ ದೂರಕ್ಕೆ ಕರೆದೊಯ್ಯುತ್ತೇನೆ’’ ಎನ್ನುವ ಈತ ಶೇ. 94 ಅಂಕ ಗಳಿಸಿದ್ದ. ಈಗ ಈತ ಕಿರೋರಿ ಮಾಲ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಯನ ಮಾಡುತ್ತಿದ್ದಾನೆ. ಸದ್ಯದಲ್ಲೇ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಶನ್ (ಯುಪಿಎಸ್‌ಸಿ) ಪರೀಕ್ಷೆಗೆ ಸಿದ್ಧತೆ ನಡೆಸಲು ಯೋಜನೆ ರೂಪಿಸುತ್ತಿದ್ದಾನೆ. ಕಳೆದ ವಾರ ಕಾಲೇಜಿಗೆ ಸೇರಿದ ಪ್ರಿನ್ಸ್ ಹೇಳುತ್ತಾನೆ ‘‘ನನ್ನ ತಂದೆಯ ಸಂಪಾದನೆ ನಮ್ಮ ಕುಟುಂಬದ ಹೊಟ್ಟೆತುಂಬಿಸಲು ಸಾಕಾಗುತ್ತದೆ, ಆದರೂ ಅವರು ನನ್ನ ಶಿಕ್ಷಣಕ್ಕೆ ಬೇಕಾದ ಹಣಕಾಸು ಪೂರೈಸುವ ನಿಟ್ಟಿನಲ್ಲಿ ಯಾವುದೇ ರಾಜಿ ಮಾಡಿಕೊಂಡದ್ದಿಲ್ಲ. ನಾನು ನನ್ನ ಪದವಿ ಶಿಕ್ಷಣ ಮುಗಿಸಿ ನಾಗರಿಕ ಸೇವಾ ಪರೀಕ್ಷೆಗೆ ಕುಳಿತುಕೊಳ್ಳುತ್ತೇನೆಂಬ ಭರವಸೆ ನನಗಿದೆ.’’

ಹಾಗೆಯೇ, ದೇವಿಂದರ್, ತನ್ನ ಕುಟುಂಬದಿಂದ ಕಾಲೇಜಿಗೆ ಹೋದ ಮೊದಲಿಗ ಮತ್ತು ಈ ಮಳೆಗಾಲದಲ್ಲಿ ಅನಾರೋಗ್ಯಕ್ಕೊಳಗಾಗದಿರಲು ಆತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಶಹೀದ್ ಭಗತ್‌ಸಿಂಗ್ ಕಾಲೇಜಿನಲ್ಲಿ ಸೀಟು ಪಡೆಯುವುದೆಂದರೆ ಅದೊಂದು ‘‘ದೊಡ್ಡ ಅವಕಾಶ, ಅದೃಷ್ಟ’’. 17ರ ಹರೆಯದ ಈ ಹುಡುಗ ದಿಲ್ಲಿಯ ತಿಗ್ರಿ ಕೊಳೆಗೇರಿಯ ನಿವಾಸಿ. ಈ ಕೊಳೆಗೇರಿ ಪ್ರದೇಶದಲ್ಲಿ ಯಾವಾಗಲೂ ಮಳೆ ನೀರಿನಿಂದ ಮುಳುಗಿ ಹೋಗುವ, ನೆರೆಯಿಂದ ಆವೃತವಾಗುವ ಭಯ ಇದ್ದೇ ಇದೆ. ಹಾಗಾಗಿ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿಯಲ್ಲೇ ಜನ ಬದುಕಬೇಕಾಗುತ್ತದೆ.

‘‘ಅವರು (ನನ್ನ ತಂದೆ ತಾಯಿ) ತಿಂಗಳಿಗೆ ಸುಮಾರು 10ಸಾವಿರ ರೂಪಾಯಿ ಸಂಪಾದಿಸುತ್ತಾರೆ. ನನ್ನ ತಾಯಿ ಲಿಂಬೆಹಣ್ಣು ಹಾಗೂ ಮೆಣಸಿನ ಕಾಯಿಗಳನ್ನು ಮಾರುತ್ತಾಳೆ. ನನ್ನ ತಂದೆ ಓರ್ವ ಜವಾನ. ಒಮ್ಮಾಮ್ಮೆ ಮನೆಯ ಪರಿಸ್ಥಿತಿ ಬಿಗಡಾಯಿಸುತ್ತದೆ. ಆದರೆ ಅವರು ಯಾವಾಗಲೂ ನನಗೆ ನೆರವು ನೀಡಿದ್ದಾರೆ’’ ಎನ್ನುತ್ತಾನೆ ದೇವಿಂದರ್.

ಆತ ಕಾಲೇಜಿನಲ್ಲಿ ಭೂಗೋಲಶಾಸ್ತ್ರ ಕಲಿಯುತ್ತಿದ್ದಾನೆ. ಆತ 12ನೆ ತರಗತಿಯಲ್ಲಿ ಶೇ. 90 ಅಂಕ ಗಳಿಸಿದ್ದ. ನಗರದ ಇನ್ನೊಂದು ಬದಿಯಲ್ಲಿ ಇಂದಿರಾಕ್ಯಾಂಪ್ ಕೊಳಗೇರಿಯಲ್ಲಿ ಹನ್ಸರಾಜ್ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿನಿಯಾಗಿರುವ ಮಧು ತಾನು ಒಬ್ಬಳು ಪತ್ರಿಕೋದ್ಯಮಿಯಾಗುವ ಮೂಲಕ ಮಹಿಳೆಯರನ್ನು ಸಬಲರಾಗಿಸಬಲ್ಲೆ ಎಂದಿದ್ದಾಳೆ. ‘‘ಮಾಡಬೇಕಾದ್ದು ತುಂಬಾ ಇದೆ. ಪತ್ರಿಕೋದ್ಯಮಿಯಾಗಿ ಮಹಿಳಾ ಸಬಲೀಕರಣದ ನನ್ನ ಗುರಿಯನ್ನು ನಾನು ತಲುಪಬಹುದು. ಇಲ್ಲವಾದಲ್ಲಿ ನಾನು ಶಿಕ್ಷಕಿಯಾಗುತ್ತೇನೆ.’’ ಎನ್ನುತ್ತಾಳೆ 17ರ ಹರೆಯದ ಮಧು.

ಹನ್ಸರಾಜ್ ಕಾಲೇಜಿನಲ್ಲಿ ಸೀಟ್ ಪಡೆಯಲು ಮಧು ಶೇ.88 ಅಂಕ ಗಳಿಸಿದ್ದಳು. ‘‘ನನ್ನ ಕೊಳೆಗೇರಿಯಲ್ಲಿ ಯಾವಾಗಲೂ ಕಿರುಚುವ ಧ್ವನಿವರ್ಧಕಗಳ ಗದ್ದಲದಲ್ಲಿ ಓದುವುದು ತುಂಬಾ ಕಷ್ಟವಾಗುತ್ತಿತ್ತು. ಇಲ್ಲಿನ ಪರಿಸರ ಕೂಡಾ ತುಂಬ ಕೆಟ್ಟದಾಗಿದೆ. ನನ್ನ ಸುತ್ತಮುತ್ತ ಇದಕ್ಕಿಂತ ಚೆನ್ನಾಗಿರುತ್ತಿದ್ದಲ್ಲಿ ನಾನು ಇನ್ನಷ್ಟು ಹೆಚ್ಚು ಅಂಕಗಳನ್ನು ಗಳಿಸಬಹುದಾಗಿತ್ತು ಎನ್ನುವ ಮಧು, ತನ್ನ ಯಶಸ್ಸು ತನ್ನ ತಂದೆತಾಯಿಗಳಿಂದಾಗಿಯೇ ಸಾಧ್ಯವಾಯಿತು ಎನ್ನುತ್ತಾಳೆ: ‘‘ನನ್ನ ತಂದೆ ಶೂ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರ ಸಂಪಾದನೆ ಅಷ್ಟಕ್ಕಷ್ಟೆ, ಆದರೂ ನಾನು ಕಲಿಯುವಂತೆ ಅವರು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು.’’

ದಿಲ್ಲಿ ನಗರ ಮೂಲದ ಒಂದು ಸರಕಾರೇತರ ಸಂಸ್ಥೆಯಾಗಿರುವ ಆಶಾ ಕಮ್ಯುನಿಟಿ ಹೆಲ್ತ್ ಆ್ಯಂಡ್ ಡೆವೆಲಪ್‌ಮೆಂಟ್ ಸೊಸೈಟಿಯ ಪ್ರಕಾರ ದೇಶದ ರಾಜಧಾನಿಯ ಕೊಳೆಗೇರಿಗಳಿಂದ ಬರುವ, ಪ್ರಿನ್ಸ್, ದೇವಿಂದರ್ ಮತ್ತು ಮಧು ಸೇರಿದಂತೆ 130 ಮಕ್ಕಳು ಕಿರೊರಿ ಮಾಲ್, ಕಮಲಾ ನೆಹರೂ, ಝಾಕಿರ್ ಹುಸೈನ್, ಮೈತ್ರಿ ಮತ್ತು ಹನ್ಸರಾಜ್‌ನಂತಹ ದಿಲ್ಲಿ ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.

ಈ ಸಂಸ್ಥೆಯು 90 ಚಿಕ್ಕ ಹಾಗೂ ದೊಡ್ಡ ಕೊಳೆಗೇರಿಗಳಲ್ಲಿ ನಡೆಸಿದ ಉನ್ನತ ಶಿಕ್ಷಣದ ಕಾರ್ಯಕ್ರಮದ ಮೂಲಕ ಆ ಮಕ್ಕಳನ್ನು ಗುರುತಿಸಲಾಗಿತ್ತು. ಸಂಸ್ಥೆಯ ಕಾರ್ಯವಿಧಾನವನ್ನು ವಿವರಿಸುತ್ತಾ ಅದರ ಸ್ಥಾಪಕ ನಿರ್ದೇಶಕ ಕಿರಣ್ ಮಾರ್ಟಿನ್ ಹೇಳುತ್ತಾರೆ; ಪ್ರತಿ ಹಂತದಲ್ಲೂ ಆಶಾ ಸಂಸ್ಥೆಯ ಸದಸ್ಯರು ಮತ್ತು ರಾಯಭಾರಿಗಳು (ತಮ್ಮ ಶಿಕ್ಷಣವನ್ನು ಮುಗಿಸಿದ ಅಥವಾ ಕಾಲೇಜಿನಲ್ಲಿ ಓದುತ್ತಿರುವ ಕೊಳೆಗೇರಿ ಮಕ್ಕಳು) ಈ ಮಕ್ಕಳಿಗೆ ಪ್ರೋತ್ಸಾಹ ಮತ್ತು ಸ್ಫೂರ್ತಿ ನೀಡಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News