ಭೀಕರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಒಂದೇ ಕುಟುಂಬದ ನಾಲ್ವರಿದ್ದ ಆ್ಯಂಬುಲನ್ಸ್

Update: 2017-07-26 12:03 GMT

ಲೋಹಾರ್‌ದಾಗಾ(ಜಾರ್ಖಂಡ್),ಜು.26: ಲೋಹಾರ್‌ದಾಗಾ ಜಿಲ್ಲೆಯಲ್ಲಿ ಬುಧವಾರ ಬೆಳಗಿನ ಜಾವ ಪಾರ್ಶ್ವವಾಯು ಪೀಡಿತ ಶಿಕ್ಷಕಿ ಸೇರಿದಂತೆ ಒಂದೇ ಕುಟುಂಬದ ನಾಲ್ವರಿದ್ದ ಆ್ಯಂಬುಲನ್ಸ್‌ವೊಂದು ಕೋಲಿ ನದಿಯ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ನಸುಕಿನ 2:30ರ ಸುಮಾರಿಗೆ ಕೋಲಿ ನದಿಯ ನೆರೆನೀರಿನಿಂದ ತುಂಬಿದ್ದ ಸಿಥೋಯಾ ಸೇತುವೆಯ ಮೇಲೆ ಆ್ಯಂಬುಲನ್ಸ್ ಕೆಟ್ಟು ನಿಂತಾಗ ನತದೃಷ್ಟ ಕುಟುಂಬದ ಓರ್ವ ಸದಸ್ಯ ಮತ್ತು ಚಾಲಕ ಅದನ್ನು ತಳ್ಳಲು ಕೆಳಗಿಳಿದಿದ್ದರು. ಇದೇ ವೇಳೆ ನೀರಿನ ಮಟ್ಟ ಏರಿ ಆ್ಯಂಬುಲನ್ಸ್ ಕೊಚ್ಚಿಕೊಂಡು ಹೋಗಿದ್ದು, ಈ ಇಬ್ಬರು ಪವಾಡಸದೃಶವಾಗಿ ಬದುಕುಳಿ ದಿದ್ದಾರೆ. ಆ್ಯಂಬುಲನ್ಸ್ ರಾಂಚಿಯ ಚೈನಪುರದಿಂದ ಪಲಮಾವು ಜಿಲ್ಲೆಯ ಡಾಲ್ಟನ್‌ಗಂಜ್‌ಗೆ ಪ್ರಯಾಣಿಸುತ್ತಿತ್ತು ಎಂದು ಎಸ್‌ಪಿ ಕಾರ್ತಿಕ ಎಸ್.ತಿಳಿಸಿದರು.

ಘಟನೆಯನ್ನು ಗಮನಿಸಿದ್ದ ಪೊಲೀಸ್‌ನೋರ್ವ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ರಕ್ಷಣಾ ತಂಡ ಕ್ರೇನ್ ಮತ್ತು ಹಗ್ಗಗಳೊಂದಿಗೆ ಕೇವಲ 15 ನಿಮಿಷಗಳಲ್ಲಿ ಸ್ಥಳವನ್ನು ತಲುಪಿತ್ತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಡಿಸಿಪಿ ವಿನೋದಕುಮಾರ ತಿಳಿಸಿದರು.

ಆ್ಯಂಬುಲನ್ಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೆರೆನೀರು ತುಂಬಿದ್ದ ಸೇತುವೆಯಲ್ಲಿ ವಾಹನ ಚಲಾಯಿಸಲು ಚಾಲಕ ಮೊದಲು ಹಿಂದೇಟು ಹೊಡೆದಿದ್ದನಾದರೂ ಬಳಿಕ ಇತರರ ಒತ್ತಡಕ್ಕೆ ಮಣಿದು ಮುಂದಕ್ಕೆ ಸಾಗಿದ್ದ ಎನ್ನಲಾಗಿದೆ.

ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಆ್ಯಂಬುಲನ್ಸ್ ಮತ್ತು ಅದರಲ್ಲಿದ್ದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News