ಹಿಂಬಾಗಿಲ ಪ್ರವೇಶಕ್ಕೆ ಅಮಿತ್ ಶಾ ಸಜ್ಜು

Update: 2017-07-27 04:02 GMT

ಹೊಸದಿಲ್ಲಿ, ಜು. 27: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿದೆ. ಈ ಮೂಲಕ ಹಿಂಬಾಗಿಲ ಮೂಲಕ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲು ಅಮಿತ್ ಶಾ ನಿರ್ಧರಿಸಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಅವರನ್ನೂ ರಾಜ್ಯಸಭೆಗೆ ಕಳುಹಿಸಲು ಪಕ್ಷ ನಿರ್ಧರಿಸಿದೆ. ಈ ನಿರ್ಧಾರವನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮಪಡಿಸಲಾಗುವುದು ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಪ್ರಕಟಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಗುಜರಾತ್‌ನಿಂದ ತೆರವಾಗುವ ಎರಡು ಸ್ಥಾನಗಳಿಗೆ ಈ ಇಬ್ಬರು ನಾಯಕರು ಸ್ಪರ್ಧಿಸುತ್ತಾರೆ. ಆಗಸ್ಟ್ 8ರಂದು ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ವೆಂಕಯ್ಯ ನಾಯ್ಡು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಯವರನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆಯಾಗಿ ನೇಮಕ ಮಾಡಲಾಗಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾನವ ಸಂಪನ್ಮೂಲ ಖಾತೆ ಸಚಿವೆಯಾಗಿದ್ದ ಇರಾನಿ ಅವರಿಗೆ 2016ರಲ್ಲಿ ಜವಳಿ ಖಾತೆ ನೀಡಲಾಗಿತ್ತು. ರಾಜ್ಯಸಭೆಗೆ ಮಧ್ಯಪ್ರದೇಶದಿಂದ ನಡೆಯುವ ಉಪ ಚುನಾವಣೆಯಲ್ಲಿ ಬುಡಕಟ್ಟು ಜನಾಂಗದ ಮಹಿಳೆ ಸಂಪಾತಿಯಾ ಯೂಕೆ ಅವರಿಗೆ ಟಿಕೆಟ್ ನೀಡಲಾಗುವುದು ಎಂದೂ ನಡ್ಡಾ ವಿವರಿಸಿದರು.

ಇದಕ್ಕೂ ಮುನ್ನ ಮಂಗಳವಾರ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್, ಗುಜರಾತ್‌ನಿಂದ ನಡೆಯುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿರುವ ಅಹ್ಮದ್ ಪಟೇಲ್ ಮರು ಆಯ್ಕೆಯಾದರೆ ಐದು ಬಾರಿ ರಾಜ್ಯಸಭೆಗೆ ಆಯ್ಕೆಯಾದ ಕೀರ್ತಿಗೆ ಪಾತ್ರರಾಗುವರು.

ಗುಜರಾತ್ ಹಾಗೂ ಪಶ್ಚಿಮಬಂಗಾಳದ ಒಂಬತ್ತು ಮಂದಿಯ ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಆಗಸ್ಟ್ 18ರಂದು ಮುಗಿಯಲಿದೆ. ಇವರಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಲ್ಕು, ಕಾಂಗ್ರೆಸ್ ಹಾಗೂ ಬಿಜೆಪಿಯ ತಲಾ ಇಬ್ಬರು ಮತ್ತು ಸಿಪಿಎಂನ ಒಬ್ಬರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News