ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲಭಾಗ್ಯ : ಟಿ.ಬಿ.ಜಯಚಂದ್ರ

Update: 2017-07-27 11:43 GMT

ತುಮಕೂರು,ಜು.27:ಕರ್ನಾಟಕ ರಾಜ್ಯ ಸರಕಾರವೂ ರಾಜ್ಯದಲ್ಲಿರುವ ಸುಮಾರು 10 ಲಕ್ಷ ಬಿ.ಪಿ.ಎಲ್ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯನ್ನು ಆರಂಭಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಒಂದು ಕುಟುಂಬಕ್ಕೆ ಅಡುಗೆ ಅನಿಲ ಸಂಪರ್ಕ,ಸಿಲಿಂಡರ್,ಸ್ಟೌವ್ ಒಳಗೊಂಡ 3 ಸಾವಿರ ರೂ.ಗಳ ಪ್ಯಾಕೇಜ್‍ನ್ನು ನೀಡುತ್ತಿದ್ದು,ಇದಕ್ಕಾಗಿ 300 ಕೋಟಿ ರೂ.ಗಳನ್ನು ಮೀಸಲಿರಿಸಲು ಮುಂದಾಗಿದೆ ಎಂದರು.

ಕೇಂದ್ರದ ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಸಂಪರ್ಕ ನೀಡಿ, ಸಾಲದ ಬಾಂಡ್ ನೀಡಿ,ಕುಟುಂಬಕ್ಕೆ ಸರಕಾರ ನೀಡುವ ಸಬ್ಸಿಡಿ ಹಣವನ್ನು ಸಾಲಕ್ಕೆ ಕಡಿತ ಮಾಡಿಕೊಳ್ಳಲಾಗುತ್ತಿದೆ.ಆದರೆ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕುಟುಂಬಗಳ ಮೇಲೆ ಯಾವುದೇ ಸಾಲ ಹೊರಿಸದೆ, ಸರಕಾರ ಇಡೀ ಸಂಪರ್ಕಕ್ಕೆ ತಗಲುವ 3 ಸಾವಿರ ರೂ. ಖರ್ಚನ್ನು ಭರಿಸಿ, ಸಂಪೂರ್ಣವಾಗಿ ಉಚಿತವಾಗಿ ಗ್ಯಾಸ್ ಸಂಪರ್ಕ ವಿತರಿಸಲಾಗುತ್ತಿದೆ.ಶೀಘ್ರದಲ್ಲಿಯೇ ಈ ಬಗ್ಗೆ ಸರಕಾರಿ ಆದೇಶ ಹೊರಬೀಳಲಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.

ತುಮಕೂರು ಜಿಲ್ಲೆಗೆ ಹೇಮಾವತಿ ಅಣೆಕಟ್ಟೆಯಿಂದ ಕುಡಿಯುವ ನೀರನ್ನು ಹರಿಸುವ ಬಗ್ಗೆ ಮುಖ್ಯ ಅಭಿಯಂತರರೊಂದಿಗೆ ಮಾತುಕತೆ ನಡೆಸಲಾಗಿದ್ದು, ಇನ್ನು 8.10 ಟಿ.ಎಂ.ಸಿ ನೀರು ಲಭ್ಯವಿದೆ. ಶೀಘ್ರವೇ ಸಭೆ ಕರೆದು, ಮಂಡ್ಯ, ತುಮಕೂರು ಮತ್ತು ಹಾಸನದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಡಿಯುವ ಉದ್ದೇಶಕ್ಕಾಗಿ ನಾಲೆಗಳಿಗೆ ನೀರು ಹರಿಸಲಾಗುವುದು ಎಂದರು.

ಲಿಂಗಾಯಿತ- ವೀರಶೈವ ಕಿತ್ತಾಟಕ್ಕೆ ಸರಕಾರ ಕಾರಣವಲ್ಲ: ಲಿಂಗಾಯಿತ ಮತ್ತು ವೀರಶೈವ ಬೇರೆ ಬೇರೆ ಧರ್ಮಗಳು ಎಂಬ ವಿಚಾರದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಕಿತ್ತಾಟಕ್ಕೆ ಸರಕಾರ ಕಾರಣವಲ್ಲ.ಇದುವರೆಗೂ ಸರಕಾರಕ್ಕೆ ಈ ರೀತಿಯ ಯಾವುದೇ ಬೇಡಿಕೆ ಸಹ ಬಂದಿಲ್ಲ.ಸಚಿವ ಸಂಪುಟದ ಕೆಲ ಸಹದ್ಯೋಗಿಗಳು ಅವರವರ ಧರ್ಮದ ಪರವಾಗಿ ಸಮೀಕ್ಷೆ ಮತ್ತಿತರರ ಪ್ರಕ್ರಿಯೆಗಳಲ್ಲಿ ತೊಡಗಿದ್ದಾರೆ. ಇದು ಸರಕಾರದ ಕೆಲಸವಲ್ಲ. ಸರಕಾರ ಎಂದಿಗೂ ಒಡೆದು ಆಳುವ ನೀತಿ ಅನುಸರಿಸದು ಎಂದು ಸರಕಾರದ ನಿಲುವನ್ನು ಕಾನೂನು ಸಚಿವರು ಸ್ಪಷ್ಟ ಪಡಿಸಿದರು.

ಶ್ರದ್ಧಾಂಜಲಿ:ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರ ಅಕಾಲಿಕ ನಿಧನಕ್ಕೆ ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಸಂತಾಪವನ್ನು ಸೂಚಿಸಿದ್ದಾರೆ.

ಧರಂಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹಾಗೂ ನೀರಾವರಿ ಸಚಿವರಾಗಿದ್ದಾಗ ತುಮಕೂರು ಜಿಲ್ಲೆಯ ಶಿರಾ ಮತ್ತು ಕಳ್ಳಂಬೆಳ್ಳ ಭಾಗದ ರೈತರಿಗೆ ಅನುಕೂಲವಾಗುವಂತೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿದ್ದರು ಎಂದು ಸ್ಮರಿಸಿ, ನಾಡುಕಂಡ ಅಪರೂಪದ ಮೇರು ವ್ಯಕ್ತಿತ್ವದ ರಾಜಕಾರಣಿ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News