​ಪಾಕ್ ರೋಗಿಗೆ ವೀಸಾ ನೀಡಲು ಸುಷ್ಮಾ ಸೂಚನೆ

Update: 2017-07-28 05:53 GMT

ಹೊಸದಿಲ್ಲಿ, ಜು.28: ಪಾಕಿಸ್ತಾನಿ ರೋಗಿಯೊಬ್ಬರಿಗೆ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ತಕ್ಷಣ ವೀಸಾ ನೀಡುವಂತೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಸೂಚನೆ ನೀಡಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನರ್ ಆಗಿರುವ ಗೌತಮ್ ಬಂಬಾವಾಲೆ ಅವರಿಗೆ ಸುಷ್ಮಾ ಈ ಸಂಬಂಧ ಸೂಚನೆ ನೀಡಿದ್ದಾರೆ. ಪಾಕಿಸ್ತಾನಿ ಮಹಿಳೆ ಹಿಜಾಬ್ ಆಸೀಫ್ ಅವರು ಸಚಿವರ ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸುಷ್ಮಾ ಆಕೆಯ ಮನವಿಗೆ ಸ್ಪಂದಿಸಿದ್ದಾರೆ.

ಮಹಿಳೆಗೆ ವೀಸಾ ನೀಡುವ ಸಂಬಂಧ ಸುಷ್ಮಾ ಮಾಡಿದ ಟ್ವೀಟ್‌ಗೆ ತಕ್ಷಣ ಸ್ಪಂದಿಸಿರುವ ಭಾರತೀಯ ಹೈಕಮಿಷನರ್, ಅರ್ಜಿದಾರ ಮಹಿಳೆ ಜತೆ ಸಂಪರ್ಕದಲ್ಲಿದ್ದೇವೆ ಎಂದು ಉತ್ತರಿಸಿದ್ದಾರೆ.

ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ ಸುಷ್ಮಾ, ಪಾಕಿಸ್ತಾನದ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ, ಸರ್ತಾಝ್ ಅಝೀಝ್ ಅವರು, ಮಹಿಳೆಗೆ ವೀಸಾ ನೀಡುವಂತೆ ಶಿಫಾರಸು ಪತ್ರ ನೀಡಲು ನಿರಾಕರಿಸಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಚಿಕಿತ್ಸೆಗಾಗಿ ಆಗಮಿಸಲು ಇಚ್ಛಿಸುವ ಪಾಕಿಸ್ತಾನಿ ರೋಗಿಗಳಿಗೆ ವೀಸಾ ನೀಡಬೇಕಾದರೆ, ಅಝೀಝ್ ಅವರಿಂದ ಶಿಫಾರಸು ಪತ್ರ ಕಡ್ಡಾಯ ಎಂದು ಇತ್ತೀಚೆಗೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದರು. ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ, ವಿದೇಶಾಂಗ ಸಚಿವರ ಮಧ್ಯಪ್ರವೇಶ ಕೋರಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News