ನೆರೆಮನೆಯವನಿಗೆ ಮರಣದಂಡನೆ ವಿಧಿಸಬೇಕು ಎಂದು ದೂರು ನೀಡಿದ ಮಹಿಳೆ

Update: 2017-07-28 07:27 GMT

ಗುವಹಾಟಿ,ಜು.28 :  ತನ್ನ ಮೊಟ್ಟೆಯಿಡುವ  ಬಾತುಕೋಳಿಯನ್ನು ಕೊಂದ ನೆರೆಮನೆಯಾತನಿಗೆ ಮರಣದಂಡನೆ ವಿಧಿಸಬೇಕೆಂದು  ಆಗ್ರಹಿಸಿ  ಅಸ್ಸಾಂ ರಾಜ್ಯದ ಗುವಹಾಟಿಯ  ಕಂಚನ ನಗರ ನಿವಾಸಿ ಮಹಿಳೆಯೊಬ್ಬಳು ಪೊಲೀಸ್ ದೂರು ನೀಡಿದ್ದಾಳೆ.

 ತನ್ನ ಬಾತುಕೋಳಿಯು ನೆರೆಮನೆಯ ಕುಸುಂಬಾರ್ ಬರುವಾ ಎಂಬಾತನ ಮನೆಯ ಕಂಪೌಂಡಿನೊಳಗೆ ಪ್ರವೇಶಿಸಿ ಮಲ ವಿಸರ್ಜಿಸಿದೆಯೆಂಬ ನೆಪವೊಡ್ಡಿ ಅದನ್ನು ಆತ ಕೋಲಿನಿಂದ ಹೊಡೆದು ಸಾಯಿಸಿದ್ದಾನೆಂದು ರೇಣು ರಭಾ ಎಂಬ ಮಹಿಳೆ ತನ್ನ ದೂರಿನಲ್ಲಿ ಹೇಳಿದ್ದಾಳೆ.

ಎರಡೂ ಕುಟುಂಬಗಳ ನಡುವೆ ಈ ವಿಚಾರದಲ್ಲಿ ಜಗಳವುಂಟಾದ ನಂತರ ರಭಾ ನೂನ್ ಮತಿ ಪೊಲೀಸ್ ಠಾಣೆಗೆ ತನ್ನ ಸತ್ತ ಬಾತುಕೋಳಿಯೊಂದಿಗೆ ಆಗಮಿಸಿ ಎಫ್ ಐ ಆರ್ ದಾಖಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ.

ಕಳೆದ ಕೆಲ ದಿನಗಳಿಂದ ಮೊಟ್ಟೆಯಿಡುತ್ತಿರುವ ತನ್ನ ಪ್ರೀತಿಯ ಬಾತುಕೋಳಿಯನ್ನು ಕೊಂದವನಿಗೆ ಮರಣದಂಡನೆ ವಿಧಿಸಬೇಕೆಂದು ಆಕೆ ಅಳುತ್ತಾ ಪೊಲೀಸರಲ್ಲಿ ವಿನಂತಿಸಿದ್ದಾಳೆ. ಪ್ರಾಣಿ ಹತ್ಯೆಗೆ ಸಂಬಂಧಿಸಿದಂತೆ ಸೆಕ್ಷನ್ 429 ಅನ್ವಯ ಮತ್ತು ಇತರ ಸೆಕ್ಷನ್ ಗಳನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನೇ ಆದರೂ ಮರಣದಂಡನೆ ವಿಧಿಸಬೇಕೆಂಬ ರಭಾ ಇಚ್ಛೆ ನೆರವೇರಲಿಕ್ಕಿಲ್ಲ. ಪ್ರಾಣಿ ಹತ್ಯೆಗಾಗಿ ಸೆಕ್ಷನ್ 429 ಅನ್ವಯ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ಯಾ ದಂಡ ಇಲ್ಲವೇ ಎರಡನ್ನೂ ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News