ಚಾರ್ಮಾಡಿ ಅಪಾಯಕಾರಿ ರಸ್ತೆಯಲ್ಲಿ ಕಬ್ಬಿಣದ ಸರಳು ಅಳವಡಿಸಲು ಒತ್ತಾಯ

Update: 2017-07-28 11:15 GMT

ಬಣಕಲ್, ಜು.28: ಚಾರ್ಮಾಡಿ ಘಾಟ್ ರಸ್ತೆಯು ಮಳೆಗಾಲದಲ್ಲಿ ಹಲವು ಕಡೆ ಹೊಂಡಗಳು ಬಿದ್ದು ಅಪಾಯಕಾರಿಯಾಗಿವೆ. ಇಲ್ಲಿನ ಸಂಚಾರಿಗಳು ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕುಸಿತದ ಜಾಗದಲ್ಲಿ ಕಬ್ಬಿಣದ ಸರಳುಗಳನ್ನು ಅಳವಡಿಸಬೇಕೆಂದು ಕೊಟ್ಟಿಗೆಹಾರದ ಸಂಜಯ್ ಗೌಡ ಹೆದ್ದಾರಿ ಪ್ರಾಧಕಾರದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಅವರು ಈ ಕುರಿತು ಶುಕ್ರವಾರ ಹೇಳಿಕೆ ನೀಡಿದ್ದು, ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಟ್ಟಿಗೆಹಾರದಿಂದ 4 ಕಿ.ಮಿ. ದೂರದ ತಿರುವುಗಳಲ್ಲಿ ರಸ್ತೆ ಬದಿಗಳು ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿರುವುಗಳಿಗೆ ಟೇಪ್ ಸುತ್ತಿ ವಾಹನ ಚಾಲಕರನ್ನು ಎಚ್ಚರಿಸಿದ್ದರೂ ಮಂಜು ಮುಸುಕಿನ ವಾತಾವರಣದಿಂದ ಟೇಪುಗಳು ಕಾಣಿಸುತ್ತಿಲ್ಲ. ಪ್ರಪಾತ ಸೂಚಿಸುವ ರಸ್ತೆ ಬದಿಗಳಲ್ಲಿಯೇ ತಿರುವುಗಳು ಕುಸಿತ ಕಂಡಿದ್ದು ಮಳೆಗಾಲದ ಮಳೆಗೆ ಮಣ್ಣು ಮೆದುವಾಗಿದ್ದು ವಾಹನ ಸವಾರರಿಗೆ ಅಪಾಯದ ಸೂಚನೆಗಳಿವೆ.

ಪ್ರವಾಸಿ ತಾಣವಾಗಿರುವ ಚಾರ್ಮಾಡಿ ಘಾಟ್‌ನಲ್ಲಿ ವಾಹನದ ಓಡಾಟಗಳು ಹೆಚ್ಚಿದೆ. ಈ ರಸ್ತೆಯ ತಿರುವಿನ ಕುಸಿತವಾದ ಭಾಗಕ್ಕೆ ಕಬ್ಬಿಣದ ಸಲಾಕೆ ಹಾಕುವುದರಿಂದ ವಾಹನ ಅಪಾಯದಿಂದ ತಡೆಯಲು ಸಾಧ್ಯವಾಗಿದೆ. ಆಲೇಖಾನ್ ಜಲಪಾತದ ಸಮೀಪ ಮಣ್ಣಿನ ರಾಶಿ ಹಾಕಿ ತೆರದ ಕಂದಕಕ್ಕೆ ಅಡ್ಡ ಇರಿಸಲಾಗಿದೆ. ಆದರೆ ಮಂಜು ಮುಸುಕಿನ ವಾತಾವರಣದಲ್ಲಿ ಕಬ್ಬಿಣದ ಸರಳುಗಳಿದ್ದರೆ ವಾಹನಗಳು ಅಪಾಯದಿಂದ ಪಾರಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಹೆದ್ದಾರಿ ಪ್ರಾಧಿಕಾರದವರು ತೆರೆದ ಕಂದಕವನ್ನು ಮುಚ್ಚಬೇಕು. ಟೇಪು ಸುತ್ತಿರುವುದು ವಾಹನ ಸವಾರರಿಗೆ ಎಚ್ಚರಿಕೆ ಗಂಟೆಯಾದರೂ ವಾಹನ ಆಕಸ್ಮಿಕವಾಗಿ ದಾರಿ ಕಾಣದೇ ಹೋದರೆ ಮಣ್ಣು ಹತ್ತಿ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಅಧಿಕಾರಿಗಳು ಈ ಭಾಗದಲ್ಲಿ ಮಳೆ ಬಿಡುವು ಕೊಟ್ಟಿರುವುದರಿಂದ ಕುಸಿತದ ಭಾಗಕ್ಕೆ ಕಬ್ಬಿಣದ ಸರಳುಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News