ಕೇಂದ್ರದ ವಿವಿಧ ಇಲಾಖೆಗಳಲ್ಲಿ ಹಿಂದಿ ಹೇರಿಕೆ ತಡೆಗೆ ಕರವೇ ಒತ್ತಾಯ

Update: 2017-07-28 11:25 GMT

ಚಿಕ್ಕಮಗಳೂರು , ಜು.27: ನಮ್ಮ ಮೆಟ್ರೋ ಸೇರಿದಂತೆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ನಡೆದಿರುವ ಹಿಂದಿ ಹೇರಿಕೆಯನ್ನು ತಡೆಗಟ್ಟುವಂತೆ ಕರವೇ(ಶಿವರಾಮೇಗೌಡ ಬಣ)ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ವೇದಿಕೆಯ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ಗಳು, ರೈಲ್ವೆ, ಅಂಚೆ, ದೂರವಾಣಿ, ತೆರಿಗೆ, ಹೆದ್ದಾರಿ, ನಮ್ಮ ಮೆಟ್ರೋ ಸೇರಿದಂತೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಇತ್ತೀಚೆಗೆ ಕನ್ನಡವನ್ನು ಮೂಲೆಗುಂಪು ಮಾಡಿ ಬಲವಂತವಾಗಿ ಹಿಂದಿಯನ್ನು ಹೇರಲಾಗುತ್ತಿದೆ. ಹಿಂದಿ ಬಾರದ ಗ್ರಾಹಕರನ್ನು ತುಚ್ಚವಾಗಿ ಕಾಣಲಾಗುತ್ತಿದೆ. ಇದರಿಂದಾಗಿ ಕನ್ನಡಿಗರಿಗೆ ಆ ಇಲಾಖೆಗಳಲ್ಲಿ ವ್ಯವಹರಿಸಲು ಕಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಕನ್ನಡದ ನೆಲದಲ್ಲಿ ಕನ್ನಡವನ್ನು ಕಡೆಗಣಿಸಿ ಹಿಂದಿ ಭಾಷೆಯನ್ನು ಹೇರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪದಾಧಿಕಾರಿಗಳು, ಹಿಂದಿ ಹೇರಿಕೆಯಿಂದಾಗಿ ಕನ್ನಡದ ಅಂತಃ ಸತ್ವಕ್ಕೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ದೂರಿರುವ ಅವರು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಮುಖ್ಯಮಂತ್ರಿಗಳು ಹಿಂದಿ ಹೇರಿಕೆಯನ್ನು ನಿಲ್ಲಿಸಿ ಕನ್ನಡ ಭಾಷೆಯನ್ನು ಬಳಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಈ ಸಮಯದಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಗಣೇಶ್‌ಗೌಡ, ಸಖರಾಯಪಟ್ಟಣ ಹೋಬಳಿ ಅಧ್ಯಕ್ಷ ಸಂದೀಪ್, ಕಡೂರು ತಾಲ್ಲೂಕು ಉಪಾಧ್ಯಕ್ಷ ರುತೀಶ್‌ಗೌಡ, ಸಮರಸೇನೆ ಅಧ್ಯಕ್ಷ ನಂದೀಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News