ಹಿಂದಿ ಹೇರಿಕೆ ವಿರುದ್ಧ ಕರವೇ ಪ್ರತಿಭಟನೆ

Update: 2017-07-28 11:45 GMT

ಹಾಸನ, ಜು.28: ಕೇಂದ್ರ ಸರಕಾರವು ಅನವಶ್ಯಕವಾಗಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು  ಕನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಿಂದ ಪ್ರತಿಭಟನೆ ಮಾಡಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಕನ್ನಡಿಗರ ಮೇಲೆ ಹಿಂದಿ ಹೇರಿಕೆಗೆ ಮುಂದಾಗಿರುವುದನ್ನು ಕೂಡಲೇ ನಿಲ್ಲಿಸಬೇಕು. ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನವಿದೆ. ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರ, ಅಂಚೆ ಕಛೇರಿ, ಬ್ಯಾಂಕಿಂಗ್ ಕ್ಷೇತ್ರ, ರೈಲ್ವೆ ಇಲಾಖೆಗಳಲ್ಲಿ ಕನ್ನಡವನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ದೂರಿದರು.

ಕರ್ನಾಟಕ ಕನ್ನಡ ರಾಜ್ಯವೂ ಸೇರಿ ಭಾರತ ರಾಷ್ಟ್ರವಾಗಿದೆ ಎಂಬುದನ್ನು ಮರೆತು ಕಡೆಗಣಿಸಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಉದ್ಯೋಗದಲ್ಲಿಯೂ ಕೂಡ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಇದನ್ನು ಕೇಂದ್ರ ಸರಕಾರ ಕೂಡಲೇ ಸ್ಥಗಿತಗೊಳಿಸಿ ಕನ್ನಡ ಭಾಷೆಯನ್ನು ಎಲ್ಲಾ ಕ್ಷೇತ್ರದಲ್ಲಿಯೂ ಉಳಿಸಿ ಬೆಳೆಸಬೇಕು ಎಂದು ಕೇಂದ್ರ ಸರಕಾರಕ್ಕೆ ಕರವೇಯಿಂದ ಸೂಚಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಅಧ್ಯಕ್ಷ ಎಸ್.ಜೆ. ಶಂಕರೇಗೌಡ, ಕಾನೂನು ಸಲಹೆಗಾರ ಲಿಂಗರಾಜು, ನಗರ ಸಂಘಟನಾ ಕಾರ್ಯದರ್ಶಿ ಬಸವರಾಜು, ನಗರ ಅಧ್ಯಕ್ಷ ಉಮೇಶ್, ಕಸಬಾ ಹೋಬಳಿ ಅಧ್ಯಕ್ಷ ಆನಂದ್‌ಗೌಡ, ಪ್ರದೀಪ್, ಮನೋಜ್ ಗೌಡ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News