ಹರುಷ ಸೂಚ್ಯಂಕ ಹಾಗೂ ನೆಮ್ಮದಿಯ ಭಾವ

Update: 2023-06-30 06:16 GMT

ಮೂರು ತಿಂಗಳ ಹಿಂದೆ ವಿಶ್ವ ಹರುಷ ವರದಿ-ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2017 ಹೊರ ಬಿತ್ತು. ಪಟ್ಟಿಮಾಡಿದ 155 ದೇಶಗಳಲ್ಲಿ ಭಾರತಕ್ಕೆ 122ನೆ ಸ್ಥಾನ! ‘‘ನಗುವುದೋ ಅಳುವುದೋ ನೀವೇ ಹೇಳಿ’’ ಎಂಬ ವಿಷಣ್ಣ ಭಾವ. ಇಂತಹ ವರದಿಗಳನ್ನೆಲ್ಲ ಯಾಕಾದರೂ ಸಿದ್ಧಪಡಿಸುತ್ತಾರೋ ಎಂಬ ಮುಜುಗರ. ಅದ್ಯಾವ ತಳಹದಿಯ ಮೇಲೆ? ಗಂಟಿಕ್ಕಿದ ಹುಬ್ಬುಗಳ ನಡುವೆ ರೂಪುಗೊಳ್ಳುವ ಪ್ರಶ್ನಾರ್ಥಕ ಚಿಹ್ನೆ. ಇದಕ್ಕೆಲ್ಲ ಹಣ ವಿನಿಯೋಗಿಸಬೇಕೆ... ಸಣ್ಣನೆ ಸಿನಿಕತೆ. ಎಲ್ಲವನ್ನೂ ಒತ್ತಟ್ಟಿಗೆ ಇಟ್ಟು ನೋಡಿದರೆ, ವಿಶ್ವಸಂಸ್ಥೆಯ ವರಿಷ್ಠ ಸಭೆ ಲೋಕದ ಹರುಷ ಹಾಗೂ ಕಲ್ಯಾಣ-ವೆಲ್ ಬಿಯಿಂಗ್ ಕುರಿತು ನಡೆಸಿದ ಚಿಂತನೆಯ ಫಲವಾಗಿ ಪ್ರಪ್ರಥಮ ಹರುಷ ವರದಿ ಎಪ್ರಿಲ್ 2012ರಲ್ಲಿ ಬಿಡುಗಡೆಯಾಯಿತು.

ಸುಖಸಂಪನ್ನತೆಯ ಹೊಸ ವ್ಯಾಖ್ಯಾನ ಎಂದು ಅದನ್ನು ಕರೆಯಲಾಯಿತು. ಜಿಡಿಪಿ-ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಬದಲಿಗೆ ಜಿಎನ್‌ಎಚ್-ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಅನ್ನು ಅಭಿವೃದ್ಧಿಯ ಅಳತೆಗೋಲಾಗಿ ಬಳಸಿದ, ಬಳಸುವ ಏಕಮೇವಾದ್ವಿತೀಯ ದೇಶ ಭೂತಾನ್ ಪ್ರಧಾನಿ ಜಿಗ್ಮೆ ಥಿನ್ಲೆ ಸಭೆಯ ಅಧ್ಯಕ್ಷತೆ ವಹಿಸಿದರು. ‘ವರ್ಲ್ಡ್ ಹ್ಯಾಪಿನೆಸ್ ಡೇ’ ಎಂದು ನಿಗದಿಯಾದ ಮಾರ್ಚ್ 20ರ ವೇಳೆಗೆ, ಪ್ರಸಕ್ತ ವರ್ಷ, ಮತ್ತೊಮ್ಮೆ ವರದಿ ತಯಾರಿಸಲು ಯುಎನ್ ಮುಂದಾಯಿತು. ಅದರ ಫಲವೇ ಈ ಯಾದಿ. ಅಮೆರಿಕ, ಇಂಗ್ಲೆಂಡ್ ಬಿಡಿ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾಗಿಂತಲೂ ಕಡಿಮೆ ಶ್ರೇಯಾಂಕ ನಮಗೆ.

ಎಸೆಸೆಲ್ಸಿ ಫಲಿತಾಂಶ ಬಯಲಾದಾಗ ಅತಿ ಕಡಿಮೆ ವಿದ್ಯಾರ್ಥಿಗಳು ಉತ್ತೀರ್ಣರಾದ ಜಿಲ್ಲೆಗಳಿಗೆ ಪಾಪ ಎಷ್ಟು ಕೆಡುಕೆನಿಸಿರಬೇಕು ಎಂಬುದು ಬಹುಶಃ ಈಗ ಗೊತ್ತಾಗುತ್ತೆೆ; ಸ್ವಾನುಕಂಪ ಉಕ್ಕಿ ಉಕ್ಕಿ ಹರಿಯುತ್ತೆ! ಕಂಡಾಪಟ್ಟೆ ನಿರಾಶೆ ಅನುಭವಿಸಿದಾಗ ಬರುವ ಒಣ-ಭಣ ಹಾಸ್ಯವೇ ಎಮ್ಮನು ತೇಲಿಸಿ, ದಡ ಸೇರಿಸುತ್ತದೆ. ಪ್ರತೀ ವ್ಯಕ್ತಿಯ ವಾರ್ಷಿಕ ನಿವ್ವಳ ಉತ್ಪನ್ನ, ಆರೋಗ್ಯವಂತನಾಗಿ ಇರಬಲ್ಲ ಆಯುಷ್ಯ, ಕಷ್ಟಕಾರ್ಪಣ್ಯ ಎದುರಾದಾಗ ಸಿಗಬಹುದಾದ ಸಾಮಾಜಿಕ ಬೆಂಬಲ, ಬದುಕಿನ ಆಯ್ಕೆಗಳಲ್ಲಿ ತಮ್ಮ ಒಲವು-ನಿಲುವಿಗೆ ಹೊಂದುವಂತಹವನ್ನು ಆರಿಸಿಕೊಳ್ಳುವ ಮುಕ್ತತೆ ಹಾಗೂ ಸುತ್ತಲಿನ ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರ ಪ್ರಮಾಣ-ಇವೆಲ್ಲವನ್ನೂ ಅಳತೆಗೋಲಾಗಿ ಹೊಂದಿರುವ ಈ ಗಣನೆ-ಲೆಕ್ಕಾಚಾರಗಳು ಭಾರತದ ಸನ್ನಿವೇಶಕ್ಕೆ ಅದೆಷ್ಟು ಸಮರ್ಪಕ? ಬಿಡಿ, ಅದನ್ನು, ನಮ್ಮದೇನಿದ್ದರೂ ‘ರೋಟಿ, ಕಪಡಾ ಔರ್ ಮಕಾನ್’ ಕ್ರೈಟೀರಿಯಾ ಎಂದು ತಳ್ಳಿಹಾಕುವವರೂ ಇದ್ದಾರೆ.

ಆಹಾರ, ಬಟ್ಟೆ, ವಸತಿ ಯುಗ ದಾಟಿ ಹುಟ್ಟಿರುವ ಕನಸುಗಾರರು ಶುದ್ಧ ಕುಡಿಯುವ ನೀರು, ಶೌಚಾಲಯ, ಕಡ್ಡಾಯ ಪ್ರಾಥಮಿಕ ಶಿಕ್ಷಣ, ಅಂತರ್ಜಾಲ ಸಂಪರ್ಕ ಸೌಲಭ್ಯಗಳನ್ನೂ ‘ಅತ್ಯಗತ್ಯ’ ಪಟ್ಟಿಗೆ ಸೇರಿಸದೆ ಹೇಗಿದ್ದಾರು? ಅದು ಹೇಗೋ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಾಡಳಿತಗಳು ಈ ಸೂಚ್ಯಂಕದ ಸಮ್ಮೋಹನೆಗೆ ಒಳಗಾದವು. ಮೊದಲ ಬಾರಿಗೆ ಹರುಷ ಸಚಿವಾಲಯ ಸ್ಥಾಪಿಸಿ, ಬರುವ 2018ಕ್ಕೆ ವರದಿ ರೆಡಿ ಎಂದು ಘೋಷಿಸಿದ್ದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್. ಅದಾಗಲೇ ಜಾಗತಿಕ ಸರ್ವೇಗೆ ತಮ್ಮ ರಾಜ್ಯವನ್ನು ಒಳಪಡಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಸಹೋದ್ಯೋಗಿ ಶಿವರಾಜರನ್ನು ಅನುಸರಿಸಿ ಒಂದು ಸರಕಾರಿ ವಿಭಾಗವನ್ನು ‘ಸಂತಸ ವೃದ್ಧಿ’ಗೆ ರಚಿಸಿದರು.

ಸುಖ ಸಮೃದ್ಧಿ ನಿರ್ಧರಿಸುವ ಅಂಶಗಳನ್ನು ಒಳಗೊಂಡ ಪ್ರಶ್ನಾವಳಿಗೆ ಪ್ರಜೆಗಳು ಉತ್ತರಿಸಿ, ಅದರಿಂದ ತಮಗೆ ಅಂಕಿಸಂಖ್ಯೆಗಳಲ್ಲಿ ಸಿಗುವ ಫೀಡ್‌ಬ್ಯಾಕ್ ನೀತಿ ನಿರೂಪಣೆಗೆ, ಆಡಳಿತ ಉತ್ತಮಪಡಿಸಲು ನೆರವಾಗುತ್ತದೆ ಎಂಬ ಇರಾದೆ ಈ ಇಬ್ಬರದು. ಆತ್ಮವನ್ನು ಬಾಟಲಿಯಲ್ಲಿ ಹಿಡಿಯುವ ಅಸಂಗತ ಕ್ರಿಯೆಯಂತೆ ಭಾಸವಾಗಬಹುದು, ಈ ಹರುಷ ಸೂಚ್ಯಂಕ ಇತ್ಯಾದಿ ಕಸರತ್ತುಗಳು. ಅಸಂಗತ ತಾತ್ವಿಕ ದರ್ಶನವನ್ನು ತಮ್ಮ ಅಪ್ಪಟ ಸಾವಯವ ಕತೆ-ಕಾದಂಬರಿಗಳಲ್ಲಿ ಕಾಣಿಸಿರುವುದು ವಿಖ್ಯಾತ ಬಂಗಾಲಿ ಸಾಹಿತಿ ಮಾಣಿಕ್ ಬಂದ್ಯೋಪಾಧ್ಯಾಯರ (1908-1956) ಹೆಚ್ಚುಗಾರಿಕೆ. ಭಾವಗೀತಾತ್ಮಕ ‘ಪಥೇರ್ ಪಾಂಚಾಲಿ’ ಪ್ರಕಟವಾಗಿ ದಶಕ ಕಳೆದ ಮೇಲೆ ಬೆಳಕು ಕಂಡ ಅವರ ‘ಪುತುಲ್ ನಾಚೇರ್ ಇತಿಕಥಾ’-‘ಬೊಂಬೆಯ ಕುಣಿತದ ಕಥಾಪ್ರಸಂಗ’ (ಅನು: ಅಹೋಬಲ ಶಂಕರ) ಕಾದಂಬರಿಯಲ್ಲಿ ಬರುವ ಸುಖ-ನೆಮ್ಮದಿಗಳ ಮಾರ್ಮಿಕ ವ್ಯಾಖ್ಯಾನಗಳು ಬೆರಗುಗೊಳಿಸುತ್ತವೆ.

ಅಸ್ತಿತ್ವವಾದದ ತೀಕ್ಷ್ಣರುಚಿ ಅವುಗಳದು. ಕೆಳಗಿನ ಉದ್ಧರಣೆಯಲ್ಲಿ, ಪಂಡಿತ, ಹುಚ್ಚತ್ತೆ ಎಂಬ ವೃದ್ಧ ದಂಪತಿ ಹಾಗೂ (ಕಥಾನಾಯಕ) ಶಶಿ ಹೆಸರಿನ ಪಾತ್ರಗಳಿವೆ: ‘‘ಬಾಯಲ್ಲಿ ಒಂದು ಹಲ್ಲೂ ಇಲ್ಲ. ಸುಕ್ಕುಸುಕ್ಕಾಗಿ ಗುಳಿಬಿದ್ದ ಗಲ್ಲಗಳು. ನರೆತ ಕೂದಲು...ಹುಚ್ಚತ್ತೆ ಯಾದವ ಪಂಡಿತನಿಗಿಂತಲೂ ಮುದಿಯಾಗಿ ಕಾಣುತ್ತಾಳೆ...ಬೆನ್ನೂ ಕೂಡ ಗೂನಾಗಿ ಹೋಗಿದೆ. ಆದರೂ ಜೀರ್ಣ, ಬಡಕು, ಮುದಿ ಮೈಯೊಳಗೆಲ್ಲೋ ಕ್ಷೀಣವಾದ ಪ್ರಾಣವೊಂದಷ್ಟನ್ನು ಹುದುಗಿಸಿಟ್ಟುಕೊಂಡು ಹುಚ್ಚತ್ತೆ ಬೊಚ್ಚು ಬಾಯಲ್ಲೇ ನಗುತ್ತಿರುತ್ತಾಳೆ, ಸದಾ.

ಈ ಹಾಳುಬಿದ್ದ ಮನೆ, ಈ ಕುರುಚಲು ಕಾಡು ತುಂಬಿದ ಗಾವೋದಿಯಾ ಗ್ರಾಮ, ಅಲ್ಲಿ ಈಕೆಯ ಮುದಿತನದ ಬಾಳುವೆ... ಎಲ್ಲಾ ಏನೋ ಹಾಸ್ಯಾಸ್ಪದವಾಗಿ ತೋರುತ್ತದೆ. ಎದುರಿಗೆ ಕಾದಿರುವ ಸಾವಿನ ಮುನ್ಸೂಚನೆಯ ಸ್ವಾದದಿಂದಲೇ ಹುಚ್ಚತ್ತೆ ಚೇಷ್ಟೆ ಮಾಡಿ ನಗುತ್ತಿರುತ್ತಾಳೆ.’’ ‘‘ಶಶಿ ಕೂತೊಡನೆ ಗಲ್ಲವನ್ನು ಮುಟ್ಟಿ ಮುದ್ದಿಟ್ಟು, ‘ಯಾಕೋ ಬರಲಿಲ್ಲ ಶಶೀ? ಚೀಟಿಸೀರೆ ಉಡಿಸಿ, ಜಡೆ ಹಾಕಿ ಹೆರಳು ಕಟ್ಟಿ, ಸಿಂಗಾರ ಮಾಡಿ ಕೂಡಿಸಿಟ್ಟಿದ್ದೆನಲ್ಲೋ ನಿನಗೊಂದು ಮದುವಣಗಿತ್ತಿಯನ್ನು, ರಾಜಕುಮಾರ ಬರುತ್ತಾನೆ ಅಂತಾ!’’ ಎಂದಳು ನಗುತ್ತಾ, ಸ್ನೇಹ, ಅಂತಃಕರಣಗಳನ್ನು ಸುರಿಸುತ್ತ.’’

‘‘ಚೀಲದ ತುಂಬ ದ್ರಾಕ್ಷಿಹಣ್ಣು ತಂದಿದ್ದ ಪಂಡಿತ. ಹೊರಗೆ ತೆಗೆದು ನೋಡಿದಾಗ ಪ್ರಯಾಣದಲ್ಲಿ ಪೆಟ್ಟುಬಿದ್ದು ಅರ್ಧದಷ್ಟು ಹಿಚುಕಲ್ಪಟ್ಟು ಹಾಳಾಗಿಹೋಗಿದೆ. ಚೀಲದಲ್ಲಿದ್ದ ಆತನ ಕುಡತಾ, ಮಡಿಸಿಟ್ಟಿದ್ದ ಎರಡು ಧೋತರ, ಒಂದು ಸ್ನಾನದ ಚೌಕ...ಎಲ್ಲಾ ದ್ರಾಕ್ಷಿರಸದಿಂದ ಒದ್ದೆಯಾಗಿವೆ. ಪಂಡಿತ ಅಚ್ಚರಿಯಿಂದ ನೋಡಿ ನಕ್ಕ. ಹುಚ್ಚತ್ತೆಯೂ ಗಟ್ಟಿಯಾಗಿ ನಕ್ಕು, ನೋಡೋ, ನೋಡು ಶಶಿ, ಮುದುಕರ ಬುದ್ಧೀ! ಚೀಲದಲ್ಲಿ ತುಂಬಿಸಿಕೊಂಡು ಬಂದಿದಾರೆ ದ್ರಾಕ್ಷಿ ಹಣ್ಣು! ಯಾಕೆ ಟವಲಿನಲ್ಲಿ ಸುತ್ತಿ ತರಬಾರದಿತ್ತೆ? ಅಂದಾಗ ನಗು ತುಂಬಿರುವ ಅವರ ಸುಕ್ಕು ತುಂಬಿರುವ ಚರ್ಮ ಸಂಕುಚಿತವಾಗಿ ಸಾವಿರಾರು ಗೆರೆಗಳು ಸೃಷ್ಟಿಯಾಗುತ್ತವೆ ಅದರ ಮೇಲೆ.

ದ್ರಾಕ್ಷಿಹಣ್ಣನ್ನು ಮೆಲ್ಲುತ್ತ ಮೆಲ್ಲುತ್ತ, ಶಶಿ, ಹುಚ್ಚತ್ತೆಯ ಮುಖವನ್ನೇ ನೀರವವಾಗಿ ನೋಡುತ್ತಾ ಕೂಡುತ್ತಾನೆ...ಪ್ರಾಯದಲ್ಲಿ ಹೇಗಿತ್ತೋ ಹುಚ್ಚತ್ತೆಯ ಜೀವನ? ಶಶಿ ಆಗಿನ್ನೂ ಹುಟ್ಟೇ ಇರಲಿಲ್ಲ. ಈ ಗೂನು ಬೆನ್ನಿನ ಬಡಕಲು ದೇಹ, ಒಂದು ಕಾಲದಲ್ಲಿ ಮಾಂಸಲವಾಗಿ ತುಂಬಿಕೊಂಡು ಬಳ್ಳಿಯಂತೆ ಬಳುಕುತ್ತಿದ್ದಾಗ, ಸುಕ್ಕುಸುಕ್ಕಾಗಿರುವ ಮುಖದ ಚರ್ಮ ಪ್ರಾಯದ ಹೊಗರಿನಿಂದ ಹೊಳೆಯುತ್ತಿದ್ದಾಗ, ಲಾವಣ್ಯದಿಂದ ಮೆರೆಯುತ್ತಿದ್ದಾಗ ಹೇಗೆ ಕಾಣುತ್ತಿದ್ದಳೋ ಹುಚ್ಚತ್ತೆ? ಮುಖದ ಮೇಲಿನ ಈ ಸಾವಿರ ರೇಖೆಗಳ ಮಧ್ಯೆ ಅದನ್ನು ಓದಲು ಆದೀತೆ?’’

‘‘ಅಚ್ಚುಕಟ್ಟಾಗಿರುವ ಸಂಸಾರ ಹುಚ್ಚತ್ತೆಯದು. ಚೊಕ್ಕಟವಾಗಿ ತೊಳೆದು ಬೋರಲು ಹಾಕಿದ್ದ ಪಾತ್ರೆಗಳು ಸಾಲಾಗಿ ಜೋಡಿಸಲ್ಪಟ್ಟಿವೆ. ನೀರು ತುಂಬಿಸಿಟ್ಟಿದ್ದ ಪಾತ್ರೆ, ಕೊಡಗಳ ಮೇಲೆಲ್ಲ ತಟ್ಟೆ ಮುಚ್ಚಿದೆ. ಮಾವಿನ ಹಲಗೆಯ ಪೆಟ್ಟಿಗೆಯ ಮೇಲ್ಭಾಗವೂ ಚೆನ್ನಾಗಿ ಧೂಳೊರೆಸಲ್ಪಟ್ಟು ಶುಭ್ರವಾಗಿ ಕಾಣುತ್ತದೆ. ನಿಲುವು ದೀಪದ ಭತ್ತಿ ಉಜ್ಚಲವಾಗಿ ಉರಿಯುತ್ತಿದೆ. ಮನೆಯೊಳಗಿನ್ನೂ ಸಾಂಬ್ರಾಣಿಯ ಮೃದುವಾದ ಕಂಪು ಆವರಿಸಿದೆ. ಮೃದುವಾದ ಶಾಂತತೆಯೊಂದು, ಮೈಮರೆಸುವ ಮೆರುಗೊಂದು ಹರಡಿದೆ ಮನೆಯೊಳಗೆಲ್ಲಾ...ಏನೋ ಒಂದು ನಿಶ್ಯಬ್ದತೆ, ಒಂದು ನೆಮ್ಮದಿಯ ಭಾವ ತುಂಬಿದೆ. ಇಲ್ಲಿ ಒಂದು ಕ್ಷಣ ಕೂತು ಹಾಯಾಗಿ ಕಾಲ ಕಳೆಯೋಣವೆನ್ನಿಸುತ್ತದೆ. ಇಲ್ಲಿನ ಮೌನ, ಇಲ್ಲಿನ ನಿಶ್ಯಬ್ದತೆ, ಸಂತೆ ಕೂಡಿದ ಮಾರನೆ ದಿನದ ಸ್ಥಳದಂತೆ ಒಡಕೊಡಕಾಗಿ, ವಿಷಣ್ಣವಾದುದಲ್ಲ. ಈ ಮನೆಯಲ್ಲಿ ಯುಗಾಂತರಗಳಿಂದ ಸಂಕಟಪಟ್ಟ ಜನರು ಉರಿಸಿಹೋದ ವೇದನೆಯು ಮುತ್ತಿಗೆ ಹಾಕಿ ಹೊಕ್ಕಿಲ್ಲ. ಈ ಮನೆಯಲ್ಲಿ, ಯಾರೂ ಬಾಳುವೆಯನ್ನು ಕುರಿತು ಯಾವತ್ತೂ, ರಗಳೆ, ರಾದ್ದಾಂತ ಮಾಡಿ ಕಳೆದುಹೋಗಿಲ್ಲ. ಇಡೀ ಬದುಕೆಲ್ಲ ನಿದ್ದೆ ಮಾಡಿ, ನಿದ್ದೆ ಮಾಡಿಸಿಯೇ ಇಟ್ಟುಹೋಗಿದ್ದಂತೆ ಇದೆ...’’

‘‘ಮನಸ್ಸಿಗೆ ಬಹಳ ನೆಮ್ಮದಿಯೆನಿಸುತ್ತದೆ ಶಶಿಗೆ. ಅವನಂತೂ ಡಾಕ್ಟರು-ಗಾಸಿ ಹೊಂದಿದ ರೋಗಿಗಳೊಂದಿಗೆ, ಅವನ ಇಡೀ ದಿನದ ಸಹವಾಸ. ಹಗಲೆಲ್ಲಾ ಮಣ್ಣಿಗೇ ಅಂಟಿಕೊಂಡಂಥ ವಾಸ್ತವಿಕತೆ...ನೊಂದು, ಬೇಸತ್ತ ಮನಸ್ಸಿಗೆ ಸಂಜೆಯ ಹೊತ್ತು ನಿರ್ಜನ, ನಿಶ್ಯಬ್ದವಾದ ಗುಡಿಯಲ್ಲಿ ಕೂತಂತೆ ಈ ಮುದಿ ಗಂಡ ಹೆಂಡಿರ ಗೂಡಿನಲ್ಲಿ ಕೂತು ಅವನಿಗೆ ಅತ್ಯಂತ ಹಾಯಾಗಿ ತೋರುತ್ತದೆ. ಇವತ್ತೇ ಅಲ್ಲ, ಇಲ್ಲಿ ಬಂದು ಕೂತರೆ ಸಾಕು, ಅವನ ಮನಸ್ಸು ಸದಾ ಹಗುರವಾಗಿ ಹೋಗಿಬಿಡುತ್ತದೆ. ಒಂದು ಆಶ್ಚರ್ಯವೆಂದರೆ, ಈ ಮನೆಯ ಯೋಗ್ಯತೆ, ಇಲ್ಲಿನ ಆಕರ್ಷಣೆ ಅವನಿಗೆ ಹೊರಗೆ ಹೋದರೆ ತೋಚುವುದೇ ಇಲ್ಲ...ತಾನು ಇಲ್ಲಿಗೆ ಬಂದು ಕಳೆದುಕೊಳ್ಳುವ ಸಂತಾಪದ ಹೊರೆ ಹೊತ್ತಿರುವುದೇ ತೋಚುವುದಿಲ್ಲ ಅವನಿಗೆ, ಹೊರಗಡೆ. ತನ್ನೊಳಗಡೆ ಇಷ್ಟೊಂದು ಬೆಂಕಿ, ಇಷ್ಟೊಂದು ಯಾತನೆ ಇದೆ ಎನ್ನುವುದೇ ತೋಚುವುದಿಲ್ಲ. ಈ ಮನೆಯ ಹೊರಗಡೆ ಇರುವಾಗ ದಿನವೇಕೆ, ವಾರ, ತಿಂಗಳುಗಟ್ಟಲೆ ತನ್ನೊಳಗೆ ಅಂತಹ ಸಂಕಟ, ಸಂತಾಪಗಳೇನೂ ಇಲ್ಲದೇ ಇರುವ ಹಾಗೆ ಅವುಗಳೊಂದಿಗೆ ಹೊಂದಿಕೊಂಡೇ, ಸೇರಿಕೊಂಡೇ ಇದ್ದುಬಿಡುತ್ತಾನೆ.’’
* * *
ಎಂಬತ್ತರ ದಶಕದಲ್ಲಿ ಎಲ್‌ಟಿಟಿಇ ಮುಖಂಡ ಪ್ರಭಾಕರನ್ ಸಂದರ್ಶನವನ್ನು ಮೊತ್ತ ಮೊದಲ ಬಾರಿಗೆ ಮಾಡಿದ ಖ್ಯಾತಿಯ ಪತ್ರಕರ್ತೆ ಅನಿತಾ ಪ್ರತಾಪ್ ತಮ್ಮ ಇತ್ತೀಚಿನ ಅಂಕಣದಲ್ಲಿ ಪ್ರಸ್ತಾಪಿಸಿರುವ ಪ್ರಕರಣ ಮಾನವತೆಯ ಸುಖದ ಹುಡುಕಾಟದ ನ್ಯಾನೊ ಕತೆಯಂತಿದೆೆ: ‘‘ತನ್ನ ಯುರೋಪ್ ತಲುಪುವ ಕನಸು ಈಡೇರಿಸಿಕೊಳ್ಳಲು, ಶಾಲೆಗೆ ಹೋಗುವ ಬದಲು ಕಲ್ಲು ಒಡೆದು ನಾಲ್ಕು ಕಾಸು ಸಂಪಾದಿಸಿ, ಸತತ ಆರು ತಿಂಗಳು ಏಕಾಂಗಿಯಾಗಿ ನಡೆದ ನಿರಾಶ್ರಿತ ಬಾಲಕ ಅಂತೂ ಗುರಿ ತಲುಪುತ್ತಾನೆ. ಆ ವೇಳೆಗೆ ಅವನ ಮಂಡಿಗಳು ಛಿದ್ರಛಿದ್ರವಾಗಿರುತ್ತವೆ. ಚಿಕಿತ್ಸೆ ಹೇಗೆ? ಆತನ ಪರಿಸ್ಥಿತಿಯಲ್ಲಿ ಒಂದೆಡೆ ವಿರಮಿಸಿ ಕೂರುವುದೇ ಚಿಕಿತ್ಸೆ. ಈಗ, ಕೂತು ಓದಿ ಒಂದಷ್ಟು ಅಕ್ಷರ ಜ್ಞಾನ-ಕಾರ್ಯ ಕೌಶಲ ಬೆಳೆಸಿಕೊಂಡು ಹೊಸ ಬದುಕು ರೂಪಿಸಿಕೊಳ್ಳುತ್ತಾನೆ.’’

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News