ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಯುವಕನನ್ನು ಥಳಿಸಿ ಕೊಂದರು!

Update: 2017-07-29 11:08 GMT

ಹೊಸದಿಲ್ಲಿ,ಜು.29 : ಇಲ್ಲಿನ ಆದರ್ಶ ನಗರ ರೈಲು ನಿಲ್ದಾಣದಲ್ಲಿ 20 ವರ್ಷದ ಯುವಕನೊಬ್ಬನನ್ನು ಹಿಂಬಾಲಿಸಿ ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಆತನನ್ನು ಮೂವರು ವ್ಯಕ್ತಿಗಳು ಹೊಡೆದು ಸಾಯಿಸಿದ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿದ್ದವರೊಬ್ಬರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ ಕಾರಣ ಮೂವರು ಆರೋಪಿಗಳನ್ನೂ ಸೆರೆ ಹಿಡಿಯಲಾಗಿದೆ.

ಮೃತಪಟ್ಟ ಯುವಕನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಉತ್ತರ ದೆಹಲಿಯ ಜಹಾಂಗೀರಪುರಿ ನಿವಾಸಿಯಾದ ರಾಹುಲ್, ಆಜಾದ್‍ಪುರದ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ  ಲೋಡರ್ ಆಗಿ ಕೆಲಸ ಮಾಡುತ್ತಿದ್ದ. ತನಗೆ ಸಿಗುತ್ತಿದ್ದ ಅಲ್ಪ ವೇತನದಲ್ಲಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದ ರಾಹುಲ್ ಗೆ ತುರ್ತಾಗಿ ಹಣದ ಅಗತ್ಯವಿದ್ದುದರಿಂದ ಆತ ಗುರುವಾರ ಟ್ರಕ್ ಮಾಲಕನಾಗಿದ್ದ ತನ್ನ ಗೆಳೆಯನೊಬ್ಬನನ್ನು ಸಂಪರ್ಕಿಸಿದ್ದ. ಆತನ ಬಳಿ  ರೂ 20,000 ಇರುವುದನ್ನು ಗಮನಿಸಿದ ರಾಹುಲ್ ತನಗೆ ಸಾಲ ನೀಡುವಂತೆ ಕೇಳಿಕೊಂಡಾಗ ಆತನ ಗೆಳೆಯ ನಿರಾಕರಿಸಿದ್ದೇ ತಡ ಉಪಾಯವಿಲ್ಲದೆ ಆ ಹಣವನ್ನು ಎಗರಿಸಿ ರಾಹುಲ್ ಓಡಲಾರಂಭಿಸಿದ್ದ. ಆ ಟ್ರಕ್ ಮಾಲಿಕ ಬೇರಿಬ್ಬರು ಲೋಡರ್ ಗಳನ್ನು ಕರೆದು ತಾನೂ ಅವರ ಜತೆ ಸೇರಿ ರಾಹುಲ್ ನನ್ನು ಹಿಂಬಾಲಿಸಲು ಆರಂಭಿಸಿದ್ದ. ರಾಹುಲ್ ಗೋಡೆಯೊಂದನ್ನು ಹಾರಿ ರೈಲು ನಿಲ್ದಾಣ ಪ್ರವೇಶಿಸಿ ಅಲ್ಲಿನ ಜನಜಂಗುಳಿಯಲ್ಲಿ ತಾನು ಸುರಕ್ಷಿತ ಎಂದುಕೊಂಡರೂ ಆ ಮೂವರೂ ಆತನನ್ನು ಅಲ್ಲಿ ಪತ್ತೆ ಹಚ್ಚಿ ಆತನಿಗೆ ಚೆನ್ನಾಗಿ ತದಕಿ ಬಿಟ್ಟಿದ್ದರು. ಅಲ್ಲಿದ್ದವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ನಂತರ ಮೂವರನ್ನೂ ಸೆರೆ ಹಿಡಿಯಲಾಯಿತು. ಆರೋಪಿಗಳನ್ನು ರವಿ, ಲಲಿತ್ ಹಾಗೂ ರಾಜಿಂದರ್ ಎಂದು ಗುರುತಿಸಲಾಗಿದೆ.

ರಾಹುಲ್ ನಿಜವಾಗಿಯೂ ಹಣ ಸೆಳೆದು ಓಡಿದ್ದನೇ ಇಲ್ಲವೇ ಬೇರೆ ಯಾವುದೋ ಇತರ ಕಾರಣಕ್ಕೆ ಆತನ ಹತ್ಯೆ ನಡೆಸಲಾಗಿದೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News