ಪರಸ್ಪರ ಸೆಗಣಿ ಎರಚಿಕೊಳ್ಳುವುದೇ ಈ ಹಬ್ಬದ ವೈಶಿಷ್ಟ!

Update: 2017-07-31 05:57 GMT

ಗದಗ, ಜು.31: ಸಾಧಾರಣವಾಗಿ ಸೆಗಣಿ ಎಂದರೆ ಮೂಗು ಮುಚ್ಚಿಕೊಳ್ಳುವುದು ತೀರಾ ಸಹಜ. ಆದರೆ ಗದಗದಲ್ಲಿ ‘ಸೆಗಣಿ ಹಬ್ಬ’ ಎಂಬ ವಿಚಿತ್ರ ಆಚರಣೆ ಜಾರಿಯಲ್ಲಿದೆ. ಸೆಗಣಿಯನ್ನು ಪರಸ್ಪರ ಎರಚಿಕೊಳ್ಳುವ ಈ ‘ಹಬ್ಬ’ ನಾಗರ ಪಂಚಮಿಯ ಮರುದಿನ ಇಲ್ಲಿ ನಡೆಯುತ್ತದೆ. ಗದಗ ನಗರದ ಒಂದು ವರ್ಗದ ಜನ ಸೆಗಣಿಗೆ ವಿಶೇಷ ಮಹತ್ವ ಕಲ್ಪಿಸುತ್ತಾರೆ.

ಕೃಷಿಯ ಜೀವಾಳವಾಗಿರುವ ಸೆಗಣಿಗೆ ಇಲ್ಲಿ ಚಿನ್ನದ ಸ್ಥಾನಮಾನ. ಈ ಹಿನ್ನೆಲೆಯಲ್ಲಿ ನಾಗರ ಪಂಚಮಿಯ ಮರುದಿನ ಸೆಗಣಿ ಹಬ್ಬವನ್ನೇ ಇಲ್ಲಿ ಆಚರಿಸಲಾಗುತ್ತದೆ. ಸೆಗಣಿಯನ್ನು ಗುಡ್ಡೆ ಹಾಕಿ ಅದನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ರೈತನ ಬಂಗಾರದ ಬೆಳೆಗೆ ಕಾರಣವಾಗುವ ಸೆಗಣಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

ನಾಗರ ಪಂಚಮಿ ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬ. ಅಂದು ಬೆಳಗ್ಗೆ ಹುತ್ತಕ್ಕೆ ಹಾಲೆರೆಯಲಾಗುತ್ತದೆ. ಅದರ ಮಾರನೆ ದಿನ ಸಗಣಿ ಆಟದ ವಿಶಿಷ್ಟ ಆಚರಣೆ ಇಲ್ಲಿನ ಗಂಗಾಪುರ ಪೇಟೆಯಲ್ಲಿ ನಡೆಯುತ್ತದೆ. ಈ ಹಬ್ಬಕ್ಕಾಗಿ ಒಂದು ತಿಂಗಳ ಮುಂಚೆಯಿಂದಲೇ ಯುವಕರ ಗುಂಪೊಂದು ನಿತ್ಯವು ನಗರದಲ್ಲಿ ಸೆಗಣಿ ಸಂಗ್ರಹ ಮಾಡುತ್ತಾರೆ. ಯುವಕರು ತಂಡ-ತಂಡವಾಗಿ ಮನೆಗೆ ತೆರಳಿ ಸೆಗಣಿಯನ್ನು ಸಂಗ್ರಹಿಸಿ ತರುತ್ತಾರೆ.

ನಾಗರ ಪಂಚಮಿಯ ಹುತ್ತ ಮುರಿಯುವ ದಿನ ಗಂಗಾಪೂರ ಪೇಟೆಯ ಯುವಕರು ಎರಡು ತಂಡ ರಚಿಸಿಕೊಂಡು ದೈವದರ ಅವರ ತೋಟದಲ್ಲಿ ಸೇರುತ್ತಾರೆ. ಅಲ್ಲಿ ಕೊರಳಲ್ಲಿ ಬದನೆಕಾಯಿ, ಸೌತೆಕಾಯಿ, ಈರುಳ್ಳಿ, ಟೊಮಾಟೋ ಸೇರಿದಂತೆ ವಿವಿಧ ತರಕಾರಿಗಳ ಮಾಲೆ ಮಾಡಿ ಧರಿಸಿ, ಮೈ ತುಂಬಾ ಸಿಂಗಾರ ಮಾಡಿಕೊಳ್ಳುತ್ತಾರೆ. ಬಳಿಕ ಆರು ಜನ ಗಂಡು ಹಾಗೂ ಆರು ಜನ ಹೆಣ್ಣು ವೇಷಧಾರಿಗಳಾಗಿ ನಗರದಲ್ಲಿರುವ ಹನಮಂತದೇವರ, ದುರ್ಗಾದೇವಿ ಗುಡಿಯಲ್ಲಿ ಪೂಜೆ ನೆರವೆರಿಸುತ್ತಾರೆ.

ನಾಗರ ಪಂಚಮಿ ಮೂರನೆ ದಿನವಾದ ‘ಕೆರೆಕಟ್ಟಂಬಲಿ’ಯಂದು ಈ ಹಬ್ಬ ಆಚರಿಸುವುದು ಇಲ್ಲಿನ ಸಂಪ್ರದಾಯ. ಅಂದು ಮೈ ತುಂಬಾ ಸೆಗಣಿ ಎರಚಿದರೂ ಬೇಸರದ ಬದಲು ಯುವಕರಲ್ಲಿ ಸಂಭ್ರಮವೇ ಕಂಡುಬರುತ್ತದೆ. ಈ ವಿಶಿಷ್ಟ ಸೆಗಣಿಯಾಟದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಳ್ಳುವುದು ನೋಡುಗರಿಗೆ ಖುಷಿ ನೀಡುತ್ತದೆ. ಈ ವಿಶಿಷ್ಟ ಆಚರಣೆಗಾಗಿ ಗಂಗಾಪುರ ಪೇಟೆಯ ಉದ್ದದ ರಸ್ತೆಯಲ್ಲಿ ಅಲ್ಲಲ್ಲಿ ಸೆಗಣಿಯನ್ನು ಗುಡ್ಡೆ ಹಾಕಿರುತ್ತಾರೆ. ಬಳಿಕ ಯುವಕರು ತಮ್ಮ ಬೀದಿ ತುಂಬೆಲ್ಲ ಓಡಾಡಿ ಸೆಗಣಿ ಎರಚುತ್ತಾರೆ. ಇದರಿಂದ ಬಟ್ಟೆ, ಮುಖವೆಲ್ಲ ಸೆಗಣಿಮಯವಾಗುತ್ತದೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಯುವಕರು, ಸಂಗ್ರಹಿಸಿದ ಸಗಣಿ ಮುಗಿಯುವವರೆಗೂ ಎರಚಾಡಿ ಸಂಭ್ರಮಿಸ್ತಾರೆ.

ನಗರದಲ್ಲಿನ ಈ ಓಣಿಯಲ್ಲಿ ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಈ ಮೋಜಿನ ಆಟ ನಡೆದುಕೊಂಡು ಬರುತ್ತಿರುವ ಪ್ರತೀತಿ ಇದಕ್ಕಿದೆ. ಪ್ರತೀವರ್ಷ ತಪ್ಪದೇ ವರ್ಷದಿಂದ ವರ್ಷಕ್ಕೆ ಈ ಆಚರಣೆ ವಿಜೃಂಭಣೆ ಪಡೆಯುತ್ತಲೆ ಇದೆ. ಕೇವಲ ಯುವಕರು, ಮಕ್ಕಳು ಮಾತ್ರವಲ್ಲದೇ ಹಿರಿಯರು ಸಹ ಈ ಮೋಜಿನಾಟದಲ್ಲಿ ತೊಡಗಿ ಸಂಭ್ರಮಿಸುತ್ತಾರೆ.

ಈ ವಿಶಿಷ್ಟ ಆಚರಣೆಗೆ ಇಲ್ಲಿನ ಜನರು ಈ ಆಟಕ್ಕೆ ತಮ್ಮದೇ ಅರ್ಥವಿವರಣೆ ನೀಡುತ್ತಾರೆ. ರೈತನ ಪಾಲಿಗೆ ಸಗಣಿಗೆ ಬಂಗಾರ. ಹಾಗಾಗಿ ಸೆಗಣಿಯನ್ನು ಪಾವಿತ್ರತೆ ಭಾವದಿಂದ ಕಾಣಬೇಕೆಂಬ ಉದ್ದೇಶದಿಂದ ಈ ಹಬ್ಬ ಆಚರಿಸಲಾಗುತ್ತಿದೆಯಂತೆ. ಮುಖ್ಯವಾಗಿ ಇಲ್ಲಿ ಸಂಗ್ರಹಿಸುವ ಸೆಗಣಿ ಆಕಳು ಮತ್ತು ಎತ್ತುಗಳದ್ದು ಮಾತ್ರ. ಅದರಿಂದ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯನ್ನು ಇಲ್ಲಿನ ಜನರು ಹೊಂದದಿದ್ದು, ಆಕಳು ಮತ್ತು ಎತ್ತುಗಳ ಸೆಗಣಿಯನ್ನು ಅರಸಿ ಯುವಕರು ಮನೆ-ಮನೆ ಅಲೆಯುತ್ತಾರೆ.


ಇಲ್ಲಿನ ಸಗಣೆಯಾಟ ನೋಡಿದವರಿಗೆಲ್ಲ ಹೋಳಿ ಹುಣ್ಣಿಮೆ ನೆನಪಾಗುತ್ತದೆ. ಹೋಳಿ ಹುಣ್ಣಿಮೆಯ ಕಾಮದಹನದ ನಂತರ ರಂಗಿನಾಟವಾಡಿದಂತೆ ಇಲ್ಲಿನ ನಿವಾಸಿಗಳು ಸೆಗಣಿಯನ್ನು ಬಣ್ಣದಂತೆ ಪರಸ್ಪರ ಎರಚಾಡಿಕೊಳ್ಳುವುದು ಪದ್ಧತಿ.

-ಮಲ್ಲೇಶ್ ಬಿಂಗಿ, ಸ್ಥಳೀಯ ಮುಖಂಡ

Writer - ಫಾರೂಕ್ ಮಕಾನದಾರ

contributor

Editor - ಫಾರೂಕ್ ಮಕಾನದಾರ

contributor

Similar News