ಆದಾಯ ತೆರಿಗೆ ಮರುಪಾವತಿ ದಾಖಲಿಸಲು ದಿನಾಂಕ ವಿಸ್ತರಣೆ

Update: 2017-07-31 13:22 GMT

ಹೊಸದಿಲ್ಲಿ,ಜು.31: 2016-17ನೇ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್)ಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು ಜು.31 ರಿಂದ ಆ.5ಕ್ಕೆ ವಿಸ್ತರಿಸ ಲಾಗಿದೆ.

ಆದಾಯ ತೆರಿಗೆ ಇಲಾಖೆಯು ಈಗಾಗಲೇ ಇ-ಫೈಲಿಂಗ್ ಮೂಲಕ ಎರಡು ಕೋಟಿಗೂ ಅಧಿಕ ಐಟಿಆರ್‌ಗಳನ್ನು ಸ್ವೀಕರಿಸಿದೆ. ತೆರಿಗೆಗೆ ಅರ್ಹ ಮಿತಿಗಿಂತ ಹೆಚ್ಚಿನ ಒಟ್ಟು ಆದಾಯ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ.

ಕೊನೆಯ ಕ್ಷಣಗಳಲ್ಲಿ ಐಟಿಆರ್ ಸಲ್ಲಿಸಲು ದಟ್ಟಣೆಯಿಂದಾಗಿ ಆದಾಯ ತೆರಿಗೆ (ಐಟಿ)ಇಲಾಖೆಯ ಇ-ಫೈಲಿಂಗ್ ಜಾಲತಾಣದ ಮೇಲೆ ಹೆಚ್ಚಿನ ಕಾರ್ಯಭಾರ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.

ಜು.1ರಿಂದ ಐಟಿಆರ್ ಸಲ್ಲಿಕೆಗೆ ತೆರಿಗೆದಾರರ ಆಧಾರ್ ಸಂಖ್ಯೆಯೊಂದಿಗೆ ಪಾನ್ ಜೋಡಣೆಯನ್ನೂ ಕಡ್ಡಾಯಗೊಳಿಸಲಾಗಿದೆ. ಆಧಾರ್-ಪಾನ್ ಜೋಡಣೆಯನ್ನು ಆ.31ರವರೆಗೂ ಮಾಡಬಹುದಾಗಿದೆ ಮತ್ತು ಈ ಜೋಡಣೆಯ ಬಳಿಕ ಐಟಿಆರ್‌ನ್ನು ಸಂಸ್ಕರಿಸಲಾಗುವುದು ಎಂದು ಐಟಿ ಇಲಾಖೆ ಹೇಳಿದೆ.

ಕಳೆದ ವರ್ಷ ನೋಟು ಅಮಾನ್ಯದ ಬಳಿಕ ನ.9ರಿಂದ ಡಿ.30ರ ನಡುವೆ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ಎರಡು ಲ.ರೂ. ಮತ್ತು ಅದಕ್ಕೂ ಹೆಚ್ಚಿನ ಠೇವಣಿಗಳ ವಿವರಗಳನ್ನು ತಮ್ಮ ಐಟಿಆರ್‌ಗಳಲ್ಲಿ ಘೋಷಿಸುವಂತೆಯೂ ಐಟಿ ಇಲಾಖೆಯು ತೆರಿಗೆದಾರರಿಗೆ ಸೂಚಿಸಿದೆ.

ತಮ್ಮ ಐಟಿಆರ್‌ಗಳನ್ನು ಇ-ಫೈಲ್ ಮಾಡುವುದು ಅಗತ್ಯವಾಗಿರುವ ನಿರ್ದಿಷ್ಟ ತೆರಿಗೆದಾರರನ್ನೂ ಇಲಾಖೆಯು ಉಲ್ಲೇಖಿಸಿದೆ. ಐದು ಲಕ್ಷ ರೂ.ಗಿಂತ ಅಧಿಕ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಹಿಂದು ಅವಿಭಕ್ತ ಕುಟುಂಬಗಳು ಅಥವಾ ರಿಟರ್ನ್‌ನಲ್ಲಿ ಹಣ ವಾಪಸಾತಿಯನ್ನು ಕೋರುವವರು(ಫಾರ್ಮ್ ಐಟಿಆರ್-1 ಅಥವಾ ಫಾರ್ಮ್ ಐಟಿಆರ್-2ರಲ್ಲಿ ರಿಟರ್ನ್‌ಗಳನ್ನು ಸಲ್ಲಿಸುವ 80 ವರ್ಷ ಮತ್ತು ಹೆಚ್ಚಿನ ವಯೋಮಾನ ದವರನ್ನು ಹೊರತುಪಡಿಸಿ) ಮತ್ತು ಯಾವುದೇ ವಿದೇಶಿ ಆಸ್ತಿ/ಆದಾಯ ಹೊಂದಿರುವ ಅಥವಾ ವಿದೇಶಿ ತೆರಿಗೆ ಪರಿಹಾರವನ್ನು ಕೋರುವ ವ್ಯಕ್ತಿಗಳು ಮತ್ತು ಹಿಂದು ಅವಿಭಕ್ತ ಕುಟುಂಬಗಳು ಈ ವರ್ಗದಲ್ಲಿ ಬರುತ್ತವೆ.

ಅಲ್ಲದೆ ಫಾರ್ಮ್ ನಂ.3,4,5ಮತ್ತು 7ನ್ನು ಸಲ್ಲಿಸುವ ವ್ಯಕ್ತಿಗಳೂ ತಮ್ಮ ರಿಟರ್ನ್‌ಗಳನ್ನು ಸಲ್ಲಿಸುವುದು ಅಗತ್ಯವಾಗಿದೆ ಎಂದು ಇಲಾಖೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News