ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ

Update: 2017-07-31 10:37 GMT

ಹಾಸನ, ಜು31: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಧರಣಿ ಸತ್ಯಗ್ರಹ ನಡೆಸುತ್ತಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ತಿಳಿಸಿದರು.
     

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ,  ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲದೆ ತತ್ತಕ್ಷಣಕ್ಕೆ ರಾಜ್ಯ ಸರ್ಕಾರ ಕನಿಷ್ಠ ವೇತನ ಕಾಯ್ದೆಯನ್ನು ನಮಗೂ ವಿಸ್ತರಿಸಬೇಕು. ರಾಜ್ಯದಲ್ಲಿ 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿದ್ದು, ಜಿಲ್ಲೆಯಲ್ಲಿ 4 ಸಾವಿರ ಜನರಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಅನೇಕ ಕಿರಿಕಿರಿ ಹಾಗೂ ಇಲಾಖೆಯಿಂದ ಮತ್ತು ರಾಜ್ಯ ಸರ್ಕಾರದಿಂದ ಸಹಯೋಗದ ಕೊರತೆಯನ್ನು ಅನುಭವಿಸುತ್ತಿದ್ದು, ಅನೇಕ ಕುಂದು ಕೊರೆತಗಳನ್ನು ಅನುಭವಿಸುವಂತಾಗಿದೆ ಎಂದರು. ಅಂಗನವಾಡಿ ಕೇಂದ್ರಗಳಿಗೆ ಬೇಡಿಕೆಗೆ ತಕ್ಕಂತೆ ಆಹಾರ ದಾಸ್ತಾನುಗಳು ಸರಬರಾಜಾಗುತ್ತಿಲ್ಲ. ಕಳಪೆ ಗುಣಮಟ್ಟದ ಹಾಗೂ ತೂಕದಲ್ಲಿ ವ್ಯತ್ಯಾಸಗಳು ಉಂಟಾಗುತ್ತಿದ್ದು, ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಎಲ್ಲಾ ಹೊರೆ ಕಾರ್ಯಕರ್ತೆಯರ ಮೇಲೆ ಬೀಳುತ್ತಿರುವುದರಿಂದ ಕೆಲಸ ನಿರ್ವಹಿಸಲು ಬಹಳ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಖಾಲಿ ಉಳಿದಿರುವ ಸಹಾಯಕಿಯರ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು. ಪ್ರತಿ ತಿಂಗಳು ಗೌರವಧನವನ್ನು 5ನೇ ತಾರೀಕಿನೋಳಗೆ ನೀಡಬೇಕು ಎಂಬ ಸರ್ಕಾರಿ ಆದೇಶವಿದ್ದರೂ ಸಹ ಗೌರವಧನ ವಿಳಂಬವಾಗುತ್ತಿದೆ ಎಂದು ದೂರಿದರು.

 ದೇಶದಲ್ಲಿ ಸಮಗ್ರ ಶಿಶು ಯೋಜನೆಯು ಜಾರಿಗೆ ಬಂದು 42 ವರ್ಷಗಳು ಆಗಲಿದೆ. ಇದರಿಂದ ಕೋಟ್ಯಾಂತರ ಫಲಾನುಭವಿ ಮಕ್ಕಳು, ಗರ್ಭಿಣಿ, ಬಾಣಾಂತಿಯರು ಹಾಗೂ ಕಿಶೋರಿಯರು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ಯೋಜನೆಯ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ ಗಣನೀಯ ಮಟ್ಟದಲ್ಲಿ ಯಶಸ್ಸು ಕಂಡಿದೆ. ಪರಿಣಾಮವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಆಶಾದಾಯಕವಾಗಿದೆ. ಆದರೇ ಯೋಜನೆಯ ಯಶಸ್ಸಿಗೆ ಮೂಲ ಕಾರಣಕರ್ತರಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಾತ್ರ ನಾಲ್ಕು ದಶಕಗಳ ನಂತರವೂ ಕಾರ್ಮಿಕ ಎಂಬ ಪದವ್ಯಾಪ್ತಿಗೆ ಬಾರದೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಇಲ್ಲದೆ ಶೋಷಣೆಗೆ ಒಳಗಾಗುತ್ತಿರುವುದು ಒಂದು ದುರಂತ ಎಂದು ದೂರಿದರು.

ಕೇಂದ್ರದ ಆಡಳಿತದಲ್ಲಿರುವ ಎನ್‌ಡಿಎ ಸರಕಾರವಂತೂ ಕಳೆದ ಮೂರು ವರ್ಷಗಳಿಂದಲೂ ಗೌರವ ಧನ ಹೆಚ್ಚಳ ಮಾಡದೆ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಅವಧಿಯಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕ್ರಮವಾಗಿ 3500 , 1750 ಹಾಗೂ 500 ರೂಗಳ ಗೌರವ ಧನ ಹೆಚ್ಚಳ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹೋರಾಟದ ಫಲವಾಗಿ ಅಂಗನವಾಡಿ ಕಾರ್ಯಕರ್ತೆಯವರಿಗೆ ಮಾಸಿಕ 8 ಸಾವಿರ ಮತ್ತು ಸಹಾಯಕಿಯರಿಗೆ ಮಾಸಿಕ 4 ಸಾವಿರ ರೂಗಳಿಗೆ ಏರಿಕೆ ಮಾಡಲಾಗಿದೆ. ಅಲ್ಲದೆ ಮಿನಿ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ವೇತನ 4,250 ರು.ಗೆ ಹೆಚ್ಚಿಸಲಾಗಿದೆ. ಅಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುವರ್ಣ ಟ್ರಸ್ಟ್ ಯೋಜನೆಯ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ 1.5 ಲಕ್ಷ ರು.ವರೆಗೆ ಮತ್ತು ಕುಟುಂಬದವರಿಗೆ 50 ಸಾವಿರ ರು.ವರೆಗೆ ರಾಜ್ಯದ 183 ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಸರ್ಕಾರ ಮಂಜೂರು ಮಾಡಿದೆ. ಜೊತೆಗೆ ಉಳಿದ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಜುಲೈ 31 ರಂದು ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಧರಣಿ ಸತ್ಯಗ್ರಹ ನಡೆಸಲಾಗುವುದು. ಇದಾದ ನಂತರ ಸೆಪ್ಟೆಂಬರ್ 4 ರಂದು ಬೆಂಗಳೂರು ವಿಧಾನ ಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 2017ರಲ್ಲಿ ದೆಹಲಿ ಪಾರ್ಲಿಮೆಂಟ್ ಚಲೋ ಹೋರಾಟವನ್ನು ಮಾಡುವುದಾಗಿ ಇದೆ ಸಂದರ್ಭದಲ್ಲಿ ಎಚ್ಚರಿಸಿದರು.

ಇದೆ ವೇಳೆ ಸ್ಥಳದಲ್ಲಿಯೇ ಅಡುಗೆ ಮಾಡುವ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ, ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, ಚನ್ನರಾಯಪಟ್ಟ ತಾಲೂಕು ಅಧ್ಯಕ್ಷೆ ಜಯಲಕ್ಷ್ಮಿ, ಜಿಲ್ಲಾಧ್ಯಕ್ಷೆ ನೇತ್ರಾವತಿ ಹಾಗೂ ಸೌಭಾಗ್ಯ, ನಾಗರತ್ನ, ಶಾಂತಮ್ಮ, ಲೀನಾಡಯಾಸ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News