ಹಳೆ ಸ್ನೇಹಿತೆಗೆ ಈತ ನೀಡಿದ ಉಡುಗೊರೆ ಏನು ಗೊತ್ತೇ?

Update: 2017-08-03 04:11 GMT

ಹೊಸದಿಲ್ಲಿ, ಆ.3: ಗೆಳೆತನ ತನ್ನ ಜೀವ ಉಳಿಸುತ್ತದೆ ಎಂಬ ಕಲ್ಪನೆಯೂ ಪೂಜಾ ಭಟ್ನಾಗರ್‌ಗೆ ಇರಲಿಲ್ಲ. ಹದಿನೇಳು ವರ್ಷಗಳಿಂದ ಲಿವರ್ ರೋಗದಿಂದ ಬಳಲಿ ಸಾವಿನ ಅಂಚು ತಲುಪಿದ್ದ 44 ವರ್ಷದ ಮಹಿಳೆಗೆ ಚಿಕಿತ್ಸೆ ನೀಡುವ ವೈದ್ಯರು, ಇನ್ನು ಯಾವ ಔಷಧಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಕೈಚೆಲ್ಲಿದರು. ಕೇವಲ ಲಿವರ್ ಕಸಿಯಿಂದಷ್ಟೇ ಜೀವ ಉಳಿಸಲು ಸಾಧ್ಯ ಎಂದು ವೈದ್ಯರು ಸ್ಪಷ್ಟಪಡಿಸಿದರು. ದಾನಿಗಳಿಗಾಗಿ ಸಂಬಂಧಿಕರು ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. ಈ ಹಂತದಲ್ಲಿ ಪ್ರವೇಶಿಸಿದ್ದು ಪ್ರಸನ್ನ ಗೋಪಿನಾಥ್ ಎಂಬ ಹಳೆ ಸ್ನೇಹಿತ!

ಫೇಸ್‌ಬುಕ್ ಪೇಜ್‌ನಲ್ಲಿ ಪೂಜಾ ಮನವಿಯನ್ನು ನೋಡಿದ ಗೋಪಿನಾಥ್ ಚೆನ್ನೈನಿಂದ ದಿಲ್ಲಿಗೆ ವಿಮಾನದಲ್ಲಿ ತೆರಳಿ ಆಕೆಯ ಜೀವ ಉಳಿಸಲು ತಮ್ಮ ಲಿವರ್ ದಾನ ಮಾಡಲು ಮುಂದಾದರು. ಕ್ರೌಡ್‌ಫಂಡಿಂಗ್ ಸಂಸ್ಥೆ, ಲಿವರ್ ಕಸಿಗೆ ಅಗತ್ಯವಿದ್ದ ಧನಸಂಗ್ರಹಕ್ಕೆ ಸಹಕರಿಸಿತು. ಜುಲೈ 21ರಂದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯೂ ನಡೆಯಿತು. ಇದೀಗ ದಾನಿ ಹಾಗೂ ರೋಗಿ ಸುಧಾರಿಸಿಕೊಳ್ಳುತ್ತಿದ್ದಾರೆ.
ಆದರೆ ಅಂಗಾಂಗದಾನ ಕಾಯ್ದೆಯಡಿ ಸಂಬಂಧಿಗಳಲ್ಲದವರು ಅಂಗಾಂಗ ದಾನ ಮಾಡುವುದು ನಿಷಿದ್ಧ. ಆಸ್ಪತ್ರೆಯ ನೈತಿಕ ಸಮಿತಿ ಸಣ್ಣಪುಟ್ಟ ವಿವರಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿತು. "ಅಧಿಕಾರಿಗಳು, ರೋಗಿ ಹಾಗೂ ದಾನಿ ನಡುವಿನ ಭದ್ರವಾದ ಸ್ನೇಹಬಂಧವನ್ನು ಪರಿಗಣಿಸಿ ಅವಕಾಶ ನೀಡಿದರು" ಎಂದು ಮುಖ್ಯ ಲಿವರ್ ಕಸಿ ತಜ್ಞ ಡಾ.ಸುಭಾಷ್ ಗುಪ್ತ ಬಹಿರಂಗಪಡಿಸಿದ್ದಾರೆ

"ಹತ್ತು ವರ್ಷ ಹಿಂದೆ ವೇಲ್ಸ್‌ನ ಗ್ಲಮೋರ್ಗನ್ ವಿವಿಯಲ್ಲಿ ಅಧ್ಯಯನ ಮಾಡುತ್ತಿದ್ದಾಗ ಅಂದರೆ 2007ರಲ್ಲಿ ಪೂಜಾ ಹಾಗೂ ಅವರ ಪತಿ ಇದ್ದ ಫ್ಲ್ಯಾಟ್ ಹಂಚಿಕೊಳ್ಳುವ ಮೂಲಕ ನಮ್ಮ ಸ್ನೇಹ ಆರಂಭವಾಗಿತ್ತು. ಪೂಜಾ ನಮ್ಮ ಕುಟುಂಬದ ಸದಸ್ಯೆ ಇದ್ದಂತೆ. ದಾನಿಗಳಿಲ್ಲದೇ ಆಕೆ ಸಾಯುವುದನ್ನು ನೋಡುತ್ತಾ ಕೂರಲು ಹೇಗೆ ಸಾಧ್ಯ?" ಎಂದು ಗೋಪಿನಾಥ್ ಪ್ರತಿಕ್ರಿಯಿಸಿದ್ದಾರೆ.

34 ವರ್ಷದ ಗೋಪಿನಾಥ್, ಚೆನ್ನೈನಲ್ಲಿ ಶ್ವಾನ ತರಬೇತಿದಾರ. 2009ರಲ್ಲಿ ಭಾರತಕ್ಕೆ ವಾಪಸ್ಸಾದ ಬಳಿಕವೂ ಭಟ್ನಾಗರ್ ಕುಟುಂಬದ ಜತೆಗಿನ ಸ್ನೇಹ ಮುಂದುವರಿಸಿದ್ದರು. ಇಂಗ್ಲೆಂಡಿನಿಂದ ವಾಪಸ್ಸಾದ ಭಟ್ನಾಗರ್ ಕುಟುಂಬ ಗುರ್‌ಗಾಂನಲ್ಲಿ ನೆಲೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News