ಆ.5: ಕುಡಿಯುವ ನೀರಿಗಾಗಿ ತುಮಕೂರು ನಗರ ಬಂದ್

Update: 2017-08-03 11:01 GMT

ತುಮಕೂರು,ಆ.3: ತುಮಕೂರು ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಒತ್ತಾಯಿಸಿ ಆಗಸ್ಟ್ 05ರ ಶನಿವಾರದಂದು ತುಮಕೂರು ಬಂದ್ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸತತ ಬರದಿಂದ ಇಡೀ ಜಿಲ್ಲೆಯಲ್ಲಿ ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ತುಮಕೂರು ನಗರದಲ್ಲಿ ಅತ್ಯಂತ ದುಸ್ತರವಾಗಿದೆ. ನಗರಕ್ಕೆ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಮತ್ತು ಹೆಬ್ಬಾಕ ಕೆರೆ ಬತ್ತಿಗೆ ಹೋಗಿ ಆರು ತಿಂಗಳೇ ಕಳೆದಿದ್ದು, ಇಡೀ ನಗರಕ್ಕೆ ಕೊಳವೆ ಬಾವಿ ನೀರೇ ಗತಿಯಾಗಿದೆ. ದಿನಕ್ಕೆ 40-50 ಎಂ.ಎಲ್.ಡಿ. ನೀರಿನ ಬದಲು 10-12 ಎಂ.ಎಲ್.ಡಿ. ನೀರು ಮಾತ್ರ ಸರಬರಾಜಾಗುತಿದ್ದು, ಬಹುದಿನಗಳ ಕಾಲ ಇದನ್ನೇ ಮುಂದುವರೆಸಲು ಸಾಧ್ಯವಿಲ್ಲ. ಅಲ್ಲದೆ ನೀರಿನ ಕೊರತೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಹೆಚ್ಚಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ತುರ್ತಾಗಿ ಕುಡಿಯುವ ನೀರಿನ ಅಗತ್ಯವಿದೆ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ನೀರು ತರಲು ಪ್ರಯತ್ನಿಸಬೇಕು ಎಂದರು. 

ಪ್ರಸ್ತುತ ಹೇಮಾವತಿ ಜಲಾಶಯದಲ್ಲಿ 16 ಟಿ.ಎಂ.ಸಿ.ನೀರಿದ್ದು, ಹಾಗಾಗಿ ತುಮಕೂರು ಜಿಲ್ಲೆಗೆ ಅಗತ್ಯವಿರುವ ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ. ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಸರಕಾರ ಸ್ಪಂದಿಸುತ್ತಿಲ್ಲ. ಕಳೆದ ಸೋಮವಾರ ಪಾದಯಾತ್ರೆ, ಬೈಕ್‌ ರ್ಯಾಲಿಗಳ ಮೂಲಕ ಸರಕಾರವನ್ನು ಎಚ್ಚರಿಸಿದರೂ ಇದುವರೆಗೂ ನೀರು ಹರಿಸುವ ಪ್ರಯತ್ನ ಮಾಡಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಆಗಸ್ಟ್ 05 ರ ಶನಿವಾರದಂದು ತುಮಕೂರು ನಗರ ಬಂದ್‌ಗೆ ಹಲವಾರು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಿಜೆಪಿ ಕರೆ ನೀಡಿದೆ ಎಂದು ಜೋತಿ ಗಣೇಶ್ ತಿಳಿಸಿದರು.

ತುಮಕೂರು ನಗರ ಬಂದ್‌ಗೆ ಹೊಟೇಲ್, ಉಪಹಾರ ಮಂದಿರಗಳ ಮಾಲೀಕರ ಸಂಘ, ಧಾನ್ಯ ವರ್ತಕರ ಸಂಘ, ಕೃಷಿ ಮಾರುಕಟ್ಟೆ ವ್ಯಾಪಾರಿಗಳ ಸಂಘ, ಲಾರಿ ಚಾಲಕರು ಮತ್ತು ಮಾಲೀಕರ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಕನ್ನಡ ಸೇನೆ, ಭಗತ್ ಕ್ರಾಂತಿ ಸೇನೆ, ಕನ್ನಡ ರಕ್ಷಣಾ ವೇದಿಕೆ, ಜಯಕರ್ನಾಟಕ, ಮಯೂರ ಯುವವೇದಿಕೆ, ಚಿನ್ನದ ವ್ಯಾಪಾರಿಗಳ ಸಂಘ, ಎಂ.ಜಿ.ರಸ್ತೆ ಜವಳಿ ವ್ಯಾಪಾರಿಗಳ ಸಂಘ, ಹಮಾಲಿಗಳ ಸಂಘ, ವಚಿದೇ ಮಾತರಂ ಯೂತ್‌ಕ್ಲಬ್, ಪೆಟ್ರೋಲ್ ಬಂಕ್ ಮಾಲೀಕರ ಸಂಘ, ಸಪ್ತಗಿರಿ ನಾಗರಿಕ ವೇದಿಕೆ, ಖಾಸಗಿ ಅನುದಾನರಹಿತ ಶಾಲಾ, ಕಾಲೇಜುಗಳ ಒಕ್ಕೂಟ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಪ್ರತಿಭಟನೆಗೆ ಸ್ವಯಂ ಪ್ರೇರಿತ ಬೆಂಬಲ ನೀಡುತ್ತಿದ್ದು, ನಾಗರಿಕರು ಸ್ವ ಇಚ್ಚೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್‌ಗೆ ಸಹಕಾರ ನೀಡುವಂತೆ ಜೋತಿಗಣೇಶ್ ಮನವಿ ಮಾಡಿದರು.

ಪ್ರತಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಹೆಬ್ಬಾಕ, ಬಿ.ಎಸ್.ನಾಗೇಶ್, ಗೋಪಾಲಕೃಷ್ಣೇಗೌಡ, ಧನಿಯ ಕುಮಾರ್, ಪಾಲಿಕೆ ಸದಸ್ಯ ಕರುಣಾರಾಧ್ಯ, ಹಾಲೆನೂರು ಲೇಪಾಕ್ಷ, ನಗರಾಧ್ಯಕ್ಷ ರಮೇಶ್, ಕೊಪ್ಪಲ್ ನಾಗರಾಜು, ಕೆ.ಜಿ.ರುದ್ರಪ್ಪ, ಆರ್.ಎ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News