ಜಿಎಸ್‌ಟಿಯಿಂದ ಜನಸಾಮಾನ್ಯರಿಗೆ ಹೊರೆ: ವರಲಕ್ಷ್ಮಿ

Update: 2017-08-03 11:04 GMT

ತುಮಕೂರು,ಆ.3: ಸಾಮಾನ್ಯ ಜನರನ್ನು ಆರ್ಥಿಕವಾಗಿ ಬಲಪಡಿಸುವ ಬದಲು ದೇಶಕ್ಕೆ ಒಂದೇ ತೆರಿಗೆ ಹೆಸರಿನಲ್ಲಿ ಸಾಮಾನ್ಯ ಜನರಿಗೆ ಮತ್ತಷ್ಟು ತೆರಿಗೆ ಹೊರೆಯನ್ನು ನೀಡುವ ಮೂಲಕ, ಕಾರ್ಪೋರೆಟ್ ಕಂಪನಿಗಳಿಗೆ ಕೇಂದ್ರ ಸರಕಾರ ಲಾಭ ಮಾಡಿಕೊಡಲು ಹೊರಟಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷ ಎಸ್. ವರಲಕ್ಷ್ಮೀ ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

ಚಿಕ್ಕಬಳ್ಳಾಪುರದ ವಿಧುರಾಶ್ವಥದಿಂದ ಹೊರಟ ಸಮೃದ್ಧ ಸೌಹಾರ್ದ ಕರ್ನಾಟಕ ಜಾಗೃತಿ ಜಾಥ ತುಮಕೂರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಟೌನ್‌ಹಾಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಾಮಾನ್ಯ ಜನರಿಂದ ವಸೂಲಿಮಾಡುವ ತೆರಿಗೆಯ ಹಣವನ್ನು ದೊಡ್ಡ ದೊಡ್ಡ ಬಂಡವಾಳಿಗರ ಅಂಬಾನಿ, ಅದಾನಿಗಳ ಕೊಟ್ಟಿಗಟ್ಟಲೆ ಸಾಲವನ್ನು ಮನ್ನಾ ಮಾಡಲು ಬಳಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರು ದುಡಿಯುವ ಜನರ ಹಕ್ಕುಗಳನ್ನು ಕಸಿಯಲು ಹೊರಟಿದ್ದಾರೆ.
ತಮ್ಮ ರಾಜಕೀಯಲಾಭಕ್ಕಾಗಿ ಸಿಬಿಐ, ಐಟಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಮಾತನಾಡಿ, ಸಿಐಟಿಯು ಅಸಂಘಟಿತ ಕಾರ್ಮಿಕರು ಜನ ಜೀವನ ಸಾಗಿಸಲು ಕನಿಷ್ಠ 18 ಸಾವಿರ ಕೂಲಿ ನಿಗದಿಯಾಗಬೇಕು. ಸಾಮಾಜಿಕ ಭದ್ರತೆೆ ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವ ಪ್ರಮುಖ ಅಂಶಗಳ ಆಧಾರದಲ್ಲಿ ಸಿಐಟಿಯು ರಾಜ್ಯಾಧ್ಯಂತ ಜಾಥ ಹಮ್ಮಿಕೊಂಡಿದೆ. ಕೋಟಿಗಟ್ಟಲೆ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ ನರೇಂದ್ರಮೋದಿಯವರು ತುಮಕೂರು ನಗರದಲ್ಲಿ ಉದ್ಘಾಟನೆ ಮಾಡಿದ ಫುಡ್‌ಪಾರ್ಕ್‌ನಲ್ಲೂ ಸ್ಥಳಿಯರಿಗೆ ಉದ್ಯೋಗ ಸೃಷ್ಠಿಸದೆ ಇರುವುದು ಮೋದಿಯವರ ಯುವಜನ ಪ್ರೀತಿಯನ್ನು ತೋರಿಸುತ್ತದೆ ಎಂದರು.

ಸಿಐಟಿಯುನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಂತೇಶ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್, ಜಿ.ಕಮಲ, ಷಣ್ಮುಖಪ್ಪ, ಎ.ಲೋಕೇಶ್, ಗುಲ್ಜಾರ್‌ಭಾನು ಉಪಸ್ಥಿತರಿದ್ದರು ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ವಹಿಸಿದ್ದರು. ಬಹಿರಂಗ ಸಭೆಗೂ ಮುನ್ನ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News