ಮಾನನಷ್ಟ ಮೊಕದ್ದಮೆ: ಮೇಧಾ ಪಾಟ್ಕರ್‌ಗೆ 10 ಸಾವಿರ ರೂ. ದಂಡ

Update: 2017-08-03 12:31 GMT

ಹೊಸದಿಲ್ಲಿ, ಆ.3: ಮಾನನಷ್ಟ ಮೊಕದ್ದಮೆ ಪ್ರಕರಣವೊಂದರ ವಿಚಾರಣೆಗೆ ನಿರಂತರ ಗೈರು ಹಾಜರಾದ ಹಿನ್ನೆಲೆಯಲ್ಲಿ ‘ನರ್ಮದಾ ಬಚಾವೊ ಆಂದೋಲನ’ದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ದಿಲ್ಲಿಯ ನ್ಯಾಯಾಲಯವೊಂದು 10,000 ರೂ. ದಂಡ ವಿಧಿಸಿದೆ.

ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾಗಲು ಮೇಧಾಗೆ ಅಂತಿಮ ಅವಕಾಶ ನೀಡಿದ ನ್ಯಾಯಾಧೀಶರು, ಇದಕ್ಕೆ ತಪ್ಪಿದರೆ ಪ್ರಕರಣವನ್ನು ವಜಾಗೊಳಿಸುವುದಾಗಿ ಎಚ್ಚರಿಸಿದರು.

  ಅಹ್ಮದಾಬಾದ್ ಮೂಲದ ಎನ್‌ಜಿಒ ಸಂಸ್ಥೆ ‘ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್’ (ಎನ್‌ಸಿಸಿಎಲ್)ನ ಅಧ್ಯಕ್ಷ ವಿ.ಕೆ.ಸಕ್ಸೇನಾ ಮತ್ತು ಮೇಧಾ ಪಾಟ್ಕರ್ ಪರಸ್ಪರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 2000ನೇ ಇಸವಿಯಲ್ಲಿ ತನ್ನ ಮತ್ತು ನರ್ಮದಾ ಬಚಾವೊ ಆಂದೋಲನದ ವಿರುದ್ಧ ಸಕ್ಸೇನಾ ಜಾಹೀರಾತೊಂದನ್ನು ಪ್ರಕಟಿಸಿದ್ದನ್ನು ಖಂಡಿಸಿ ಮೇಧಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸಕ್ಸೇನಾ ಕೂಡಾ ಮೇಧಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ವಿಚಾರಣೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ 2015ರ ಜನವರಿಯಲ್ಲಿ ಮೇಧಾಗೆ 3,000 ರೂ. ದಂಡ ವಿಧಿಸಲಾಗಿತ್ತು ಮತ್ತು ನ್ಯಾಯಾಲಯದೆದುರು ಹಾಜರಾಗಲು ‘ಕೊನೆಯ ಮತ್ತು ಅಂತಿಮ ಅವಕಾಶ’ ನೀಡಲಾಗಿತ್ತು. ಆದರೂ ಹಾಜರಾಗಲು ವಿಫಲವಾದ ಮೇಧಾ ವಿರುದ್ಧ 2017ರ ಮೇ ತಿಂಗಳಲ್ಲಿ ಜಾಮೀನುರಹಿತ ವಾರಂಟ್ ಜಾರಿಗೊಳಿಸಲಾಗಿತ್ತು. ಬಳಿಕ ಜೂನ್ 26ರಂದು ವಾರಂಟನ್ನು ರದ್ದುಗೊಳಿಸಿ ಭವಿಷ್ಯದಲ್ಲಿ ಎಚ್ಚರಿಕೆಯಿಂದ ವರ್ತಿಸುವಂತೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News