ಮೌಢ್ಯಗಳ ಮರೆಯಲ್ಲಿ ಅಪರಾಧ

Update: 2017-08-04 06:11 GMT

ಈ ದೇಶದಲ್ಲಿ ಗೋವಿನ ಹೆಸರಿನಲ್ಲಿ ಕ್ರಿಮಿನಲ್‌ಗಳು ಹೇಗೆ ಸಮಾಜವನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ ಎನ್ನುವುದನ್ನು ದಿನನಿತ್ಯ ನೋಡುತ್ತಿದ್ದೇವೆ. ಒಂದು ಕಾಲದಲ್ಲಿ ಭೂಗತ ರೌಡಿಗಳೆಂದು ಸಮಾಜದಲ್ಲಿ ಅಸ್ಪಶ್ಯರಾಗಿದ್ದವರೆಲ್ಲ, ಸಂಸ್ಕೃತಿ ರಕ್ಷಕರ ವೇಷದಲ್ಲಿ ಸಮಾಜವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಈ ಹಿಂದೆ ಪೊಲೀಸರನ್ನು ಕಂಡರೆ ಬೆದರುತ್ತಿದ್ದವರು ಇಂದು ಪೊಲೀಸರನ್ನೇ ಬೆದರಿಸುವ ಶಕ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರೆಲ್ಲರೂ ಹೆಸರಿಗೆ ಗೋಮಾತೆ, ಹಿಂದುತ್ವ, ಸಂಸ್ಕೃತಿ ಎಂದೆಲ್ಲ ಜಪಿಸುತ್ತಿದ್ದರೂ, ವಾಸ್ತವದಲ್ಲಿ ರಾಜಕೀಯ ಗೂಂಡಾಗಳೇ ಆಗಿದ್ದಾರೆ.

ಸಾರ್ವಜನಿಕ ಪ್ರದೇಶಗಳಲ್ಲಿ ಇವರು ನಡೆಸುವ ಗುಂಪು ಹಿಂಸೆಗಳಿಗೆ, ಹತ್ಯೆಗಳಿಗೆ ಗೋವು, ಸಂಸ್ಕೃತಿ ಇತ್ಯಾದಿ ಮುಖವಾಡಗಳನ್ನು ಹಾಕಿಕೊಂಡ ಕಾರಣ, ಸುಲಭದಲ್ಲಿ ಕಾನೂನಿನ ಕುಣಿಕೆಯಿಂದ ಪಾರಾಗಬಲ್ಲರು. ಸಾಧಾರಣವಾಗಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ನೇರವಾಗಿ ಕೊಂದರೆ ನಮ್ಮ ಕಾನೂನಿನಲ್ಲಿ ಅಪರಾಧವಾಗುತ್ತದೆ. ಆದರೆ ಒಂದು ತಂಡ ಆ ಕೃತ್ಯವನ್ನು ಎಸಗಿದರೆ, ಸಂವಿಧಾನವಾಗಲಿ, ಕಾನೂನಾಗಲಿ ಅಸಹಾಯಕವಾಗುತ್ತದೆ. ಈ ದೌರ್ಬಲ್ಯಗಳನ್ನು ಕ್ರಿಮಿನಲ್‌ಗಳು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ, ಸರಕಾರ ಅದೆಷ್ಟೇ ಎಚ್ಚರಿಕೆಯನ್ನು ನೀಡಿದರೂ ಗೋವುಗಳ ಹೆಸರಲ್ಲಿ ದಾಳಿಗಳು ಮುಂದುವರಿಯುತ್ತಲೇ ಇವೆ. ಮುಖ್ಯವಾಗಿ ಇಲ್ಲಿ ದಾಳಿ ನಡೆಯುತ್ತಿರುವುದು ಗೋರಕ್ಷಣೆಗಾಗಿ ಅಲ್ಲವೇ ಅಲ್ಲ. ಇತರ ವೈಯಕ್ತಿಕ ಕಾರಣಗಳಿಗಾಗಿ. ತಮ್ಮ ದುರುದ್ದೇಶ ಸಾಧನೆಗಾಗಿ ಅವರು ಗೋವುಗಳನ್ನು ನೆಪವಾಗಿಯಷ್ಟೇ ಬಳಸಿಕೊಂಡು, ಗುಂಪಾಗಿ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಪಾರಾಗುತ್ತಿದ್ದಾರೆ.

ಕಳೆದ ಒಂದು ದಶಕದಿಂದ ದೇಶದ ಕುಖ್ಯಾತ ರೌಡಿಗಳು, ಗೂಂಡಾಗಳು ಇಂತಹ ಗುಂಪುಗಳ ಒಳಗೆ ಬಚ್ಚಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹಿಂದುತ್ವದ ಮುಖವಾಡದಲ್ಲಿ ರಾಜಕಾರಣ ಮತ್ತು ಅಪರಾಧ ಎರಡರ ಅನೈತಿಕ ಸಂಬಂಧ ಇಂದು ದೇಶವನ್ನು ಪರೋಕ್ಷವಾಗಿ ಆಳುವುದಕ್ಕೆ ಯತ್ನಿಸುತ್ತಿದೆ. ತಮ್ಮ ದುರುದ್ದೇಶವನ್ನು ಸಾಧಿಸುವುದಕ್ಕಾಗಿ ರಾಜಕಾರಣಿಗಳು ಹುಲಿ ಸವಾರಿಯ ಸಾಹಸಕ್ಕಿಳಿದಿದ್ದಾರೆ. ಆದರೆ ಈ ಸವಾರಿ ಎಲ್ಲಿಯವರೆಗೆ ಎನ್ನುವುದು ಮಾತ್ರ ಊಹಿಸುವುದಕ್ಕೆ ಅಸಾಧ್ಯ. ಯಾಕೆಂದರೆ, ಈ ಸವಾರಿಯಿಂದ ಇಳಿದರೆ ಅದೇ ಹುಲಿ ಅವರನ್ನು ತಿಂದು ಹಾಕುತ್ತದೆ.

 ದುರ್ಬಲರನ್ನು ಹಣಿಯಲು, ತುಳಿಯಲು ಗುಂಪು ಹತ್ಯೆಯನ್ನು ಒಂದು ತಂತ್ರವಾಗಿ ನಮ್ಮ ಸಮಾಜ ಬಳಸುತ್ತಾ ಬಂದಿದೆ. ಈ ಹಿಂದೆ ಖೈರ್ಲಾಂಜಿಯಲ್ಲಿ ದಲಿತರ ಮೇಲೆ ನಡೆದ ಬರ್ಬರ ಹತ್ಯೆಯನ್ನು ನೂರಾರು ಜನರ ಗುಂಪು ನಡೆಸಿತು. ಇದನ್ನು ಒಬ್ಬರು ಅಥವಾ ಇಬ್ಬರು ನಡೆಸಿದ್ದೇ ಆಗಿದ್ದರೆ ಇಷ್ಟರಲ್ಲಿ ಅವರು ಗಲ್ಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತಿತ್ತು. ಹತ್ಯೆಯನ್ನು ನಡೆಸುವ ಉದ್ದೇಶವಿರುವವರು ಒಂದು ಗುಂಪಿನ ಮರೆಯಲ್ಲಿ ನಿಂತು ತಮ್ಮ ಉದ್ದೇಶವನ್ನು ಈಡೇರಿಸಿಕೊಂಡರು. ದಲಿತರ ಮೇಲೆ ನಡೆಯುವ ಗುಂಪು ದೌರ್ಜನ್ಯಗಳು, ಗುಂಪಿನಿಂದ ನಡೆದಿರುವ ಹತ್ಯೆಗಳು ಕಾನೂನಿನಿಂದ ಸುಲಭವಾಗಿ ನುಣುಚಿಕೊಂಡಿವೆ. ಈ ಹಿನ್ನೆಲೆಯಲ್ಲಿಯೇ ಒಂದು ಮಾತಿದೆ; ‘ಈ ದೇಶದಲ್ಲಿ ಸಾಮೂಹಿಕ ಹತ್ಯಾಕಾಂಡದ ಸಂದರ್ಭದಲ್ಲಿ ಸಂವಿಧಾನ ರಜೆಯಲ್ಲಿರುತ್ತದೆ’.

ಉತ್ತರ ಭಾರತದಲ್ಲಿ ದಲಿತರನ್ನು ಅದರಲ್ಲೂ ಮಹಿಳೆಯರನ್ನು ಮಟ್ಟ ಹಾಕುವುದಕ್ಕೆ ಇನ್ನೊಂದು ನೆಪವನ್ನು ಅಲ್ಲಿನ ಜನರು ಬಳಸಿಕೊಳ್ಳುತ್ತಿದ್ದಾರೆ. ಜನರನ್ನು ಮೌಢ್ಯದಲ್ಲಿ ಕೆಡವಿ, ಅವರನ್ನು ತಮ್ಮ ದುರುದ್ದೇಶಕ್ಕೆ ಬಳಸಿಕೊಳ್ಳುವ ಘಟನೆಗಳು ತೀವ್ರವಾಗುತ್ತಿವೆ. ಉತ್ತರ ಭಾರತದಲ್ಲಿ ಅದರಲ್ಲೂ ಈಶಾನ್ಯ ಭಾರತದಲ್ಲಿ ‘ಮಾಟಗಾತಿ’ ಎಂಬ ನೆಪದಲ್ಲಿ ಗುಂಪಾಗಿ ಮಹಿಳೆಯರ ಮೇಲೆ ದಾಳಿ ನಡೆಸಿ ಹತ್ಯೆಗೈಯುವ ಪ್ರಕರಣ ಪದೇ ಪದೇ ಘಟಿಸುತ್ತಿದೆ. ಆಗ್ರಾದಲ್ಲಿ ಮಾನ್‌ದೇವಿ ಎಂಬ ದಲಿತ ಮಹಿಳೆಯನ್ನು ಇಂತಹದೇ ಆರೋಪದಲ್ಲಿ ಗುಂಪೊಂದು ಬರ್ಬರವಾಗಿ ಹತ್ಯೆಗೈದಿದೆ. ಬೆಳಗಿನ ಜಾವ ಬಹಿರ್ದೆಸೆಗೆಂದು ಗದ್ದೆಯತ್ತ ತೆರಳಿದ್ದ ಮಾನ್‌ದೇವಿಯನ್ನು ಕಂಡು ಬಾಲಕಿಯೊಬ್ಬಳು ಬೆದರಿ ಚೀರಿದ್ದಾಳೆ. ಅದಷ್ಟಕ್ಕೇ ಜನರು ಮಹಿಳೆಯ ವಿರುದ್ಧ ಮುಗಿ ಬಿದ್ದು ಥಳಿಸಿ ಕೊಂದಿದ್ದಾರೆ.

ಒಂದೆಡೆ ಮೌಢ್ಯ, ಇನ್ನೊಂದೆಡೆ ದ್ವೇಷ, ಮಗದೊಂದೆಡೆ ಕ್ರೌರ್ಯ. ಇವೆಲ್ಲದರ ಸಂಗಮದ ಫಲವೇ ಇಂತಹ ಪ್ರಕರಣಗಳು ಹೆಚ್ಚುವುದಕ್ಕೆ ಕಾರಣ. ಅನೇಕ ಸಂದರ್ಭದಲ್ಲಿ ಇಂತಹ ಗುಂಪು ಹತ್ಯೆಗಳಿಗೆ ಬರೇ ವೌಢ್ಯವಷ್ಟೇ ಕಾರಣವಾಗಿರುವುದಿಲ್ಲ. ಜಾತೀಯತೆಯೂ ಈ ಕೃತ್ಯಗಳಿಗೆ ನಿಜವಾದ ಕಾರಣವಾಗಿ ಬಿಡುವುದಿದೆ. ಇಂತಹ ಹತ್ಯೆಗೆ ಬಲಿಯಾದವರಲ್ಲಿ ದಲಿತಮಹಿಳೆಯರೇ ಅತ್ಯಧಿಕ ಎನ್ನುವುದನ್ನು ನಾವು ಗಮನಿಸಿದರೆ ಇದರ ಹಿಂದಿರುವ ಇತರ ಜಾತಿ, ವರ್ಗ ರಾಜಕೀಯಗಳು ಬಯಲಿಗೆ ಬರುತ್ತವೆ. ಯಾವುದೇ ದಲಿತ ಮಹಿಳೆ ಮೇಲ್ವರ್ಗದ ವಿರುದ್ಧ ಧ್ವನಿಯೆತ್ತಿದರೆ ಆಕೆಯ ತಲೆಗೆ ಮಾಟಗಾತಿ ಎಂಬ ಬಿರುದನ್ನು ಅಂಟಿಸಿ ಇಡೀ ಗ್ರಾಮವನ್ನು ಆಕೆಯ ವಿರುದ್ಧ ಎತ್ತಿ ಕಟ್ಟಲಾಗುತ್ತದೆ.

ಇದೇ ಸಂದರ್ಭದಲ್ಲಿ ಒಂಟಿ ಮಹಿಳೆಯ ಆಸ್ತಿ, ಮನೆಯನ್ನು ದೋಚುವುದಕ್ಕಾಗಿಯೂ ಅನೇಕ ಸಂದರ್ಭದಲ್ಲಿ ಆಕೆಯನ್ನು ಮಾಟಗಾತಿ ಎಂದು ಬಿಂಬಿಸಿ, ಜನರಲ್ಲಿ ಆತಂಕವನ್ನು ಬಿತ್ತಲಾಗುತ್ತದೆ. ಅಂತಿಮವಾಗಿ ಜನರ ಮೂಲಕವೇ ಆಕೆಯನ್ನು ಕೊಂದು, ದುಷ್ಕರ್ಮಿಗಳು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾರೆ. ಆದುದರಿಂದ ಮಾಟ, ಮಂತ್ರ ಇತ್ಯಾದಿಗಳ ಹೆಸರಲ್ಲಿ ನಡೆಯುವ ಕೊಲೆ, ಹಲ್ಲೆಗಳ ಹಿಂದಿರುವ ಬೇರೆ ಬೇರೆ ರಾಜಕೀಯಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಆಗ್ರಾದಲ್ಲಿ ಮಹಿಳೆಯನ್ನು ‘ಮಾಟಗಾತಿ’ ಎಂಬ ಹೆಸರಲ್ಲಿ ಕೊಂದು ಹಾಕಿದ್ದಾರಾದರೂ ನಿಜವಾದ ಕಾರಣ ಏನು? ಈ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷಗಳಿವೆಯೇ? ಜಾತಿ ರಾಜಕಾರಣ ಅಡಗಿದೆಯೇ? ಎಂಬ ಕುರಿತು ತನಿಖೆ ನಡೆಸುವುದು ಈ ಕಾರಣಕ್ಕಾಗಿಯೇ ಅತ್ಯಗತ್ಯವಾಗಿದೆ.

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ, ಹರ್ಯಾಣದಂತಹ ರಾಜ್ಯಗಳಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತಿವೆ. ರಾತ್ರಿ ನಿದ್ದೆ ಹೋಗಿದ್ದ ಮಹಿಳೆಯರ ಜಡೆಗಳನ್ನು ಕತ್ತರಿಸಲಾಗುತ್ತಿದೆ ಎಂಬ ವದಂತಿ ಆ ಪ್ರದೇಶದ ಜನರನ್ನು ಭಯ ಭೀತಗೊಳಿಸಿದೆ. ಇಂತಹ ಭೀತಿಯೂ ಈ ಮಹಿಳೆಯ ಕೊಲೆಗೆ ಕಾರಣವಾಗಿರಬಹುದು. ಆದರೆ ಈ ಜಡೆ ಕತ್ತರಿಸುವುದರ ಹಿಂದಿರುವ ಶಕ್ತಿಯನ್ನು ಪತ್ತೆ ಹಚ್ಚುವುದು ಮಂತ್ರವಾದಿಗಳ ಕೆಲಸವಲ್ಲ, ಪೊಲೀಸರ ಕೆಲಸವಾಗಿದೆ. ಇದರ ಹಿಂದೆ ದೆವ್ವದ ಕೆಲಸವಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಅಥವಾ ಕೆಲವು ಹಿತಾಸಕ್ತಿಗಳು ಜನರನ್ನು ನಂಬಿಸಿರುವ ಸಾಧ್ಯತೆಯಿದೆ.

ಇಂತಹ ವದಂತಿಗಳು ಅಂತಿಮವಾಗಿ ಗುಂಪು ಹತ್ಯೆಯಲ್ಲೇ ಕೊನೆಯಾಗುತ್ತದೆ ಎನ್ನುವ ಎಚ್ಚರಿಕೆ ಕಾನೂನು ವ್ಯವಸ್ಥೆಗೆ ಇರಬೇಕಾಗಿದೆ. ಇದೇ ಸಂದರ್ಭದಲ್ಲಿ, ಮೌಢ್ಯಗಳನ್ನು ಬಿತ್ತಿ ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿರುವ ಜನರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸರಕಾರ ಸ್ಪಷ್ಟ ಮೌಢ್ಯ ವಿರೋಧಿ ಕಾನೂನನ್ನು ಜಾರಿಗೊಳಿಸುವುದು ಹಿಂದೆಂದಿಗಿಂತ ಅಗತ್ಯವಾಗಿದೆ. ಯಾಕೆಂದರೆ, ಇಂದು ವೌಢ್ಯ ಬೇರೆ ಬೇರೆ ರೂಪಗಳಲ್ಲಿ ಸುಶಿಕ್ಷಿತರನ್ನೇ ಬಲಿ ಹಾಕುತ್ತಿವೆ. ಮಾಧ್ಯಮಗಳೂ ಇಂತಹ ವೌಢ್ಯಗಳನ್ನು ಬಳಸಿಕೊಂಡು ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಹವಣಿಸುತ್ತಿರುವ ಹೊತ್ತಿನಲ್ಲಿ, ಮೌಢ್ಯವೆನ್ನುವ ಅಪರಾಧವನ್ನು ತಡೆಯಲು ಪ್ರತ್ಯೇಕ ಇಲಾಖೆಯನ್ನೇ ತೆರೆಯಬೇಕಾದಂತಹ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News