ರೈತರಿಗೆ ಭರವಸೆ ನೀಡುವವರು ಯಾರು?

Update: 2017-08-04 18:22 GMT

ಸತತ ಮೂರು ವರ್ಷ ಬರಗಾಲದಿಂದ ತತ್ತರಿಸಿರುವ ಕರ್ನಾಟಕಕ್ಕೆ ಈ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಆರಂಭದಲ್ಲಿ ಭಾರೀ ಅಬ್ಬರ ಮಾಡಿ ಸುರಿದ ಮಳೆ, ರೈತರು ಬಿತ್ತನೆ ಮಾಡಿದ ಬಳಿಕ ಕೈಕೊಟ್ಟಿದೆ. ಬಿತ್ತನೆ ಅವಧಿಯಲ್ಲಿ ಬರಗಾಲ ಛಾಯೆ ಆವರಿಸಿದೆ. ರಾಜ್ಯದ 126 ತಾಲೂಕುಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ಬಿತ್ತನೆ ಮಾಡಿದ ಬೀಜಗಳು ಕಮರಿ ಹೋಗುತ್ತಿವೆ. ಮಳೆಯ ದರ್ಶನವಿಲ್ಲದೆ ಕೆಲ ತಾಲೂಕುಗಳಲ್ಲಿ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ.

ಜೂನ್ ತಿಂಗಳಲ್ಲಿ ಸುರಿದ ಮಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಆದರೆ ಜುಲೈ ತಿಂಗಳಲ್ಲಿ ಭರವಸೆಯ ನಿರೀಕ್ಷೆ ಹುಸಿಯಾಯಿತು. ಜುಲೈ 31ರವರೆಗಿನ ಅಂಕಿ ಅಂಶಗಳ ಪ್ರಕಾರ, 126 ತಾಲೂಕಿನ 447 ಹೋಬಳಿಗಳಲ್ಲಿ ಅಗತ್ಯ ಪ್ರಮಾಣದಷ್ಟು ಮಳೆಯಾಗಿಲ್ಲ. ಜುಲೈ ತಿಂಗಳಲ್ಲಿ ಸಂಚಿತ ಮಳೆ ಪ್ರಮಾಣ ಒಟ್ಟು 25 ಜಿಲ್ಲೆಗಳಲ್ಲಿ ಕೊರತೆಯಾಗಿದೆ. 5 ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಿದೆ.

ಈ ವರ್ಷದ ಮುಂಗಾರಿನ ಅಚ್ಚರಿ ಅಂದರೆ ಕಲಬುರಗಿ, ಬೀದರ್, ಕೊಪ್ಪಳದಂತಹ ಬಿಸಿಲು ನಾಡಲ್ಲಿ ಮಳೆ ಸಾಕಷ್ಟು ಆಗಿದೆ. ಆದರೆ ಇನ್ನಷ್ಟು ಮಳೆ ಆಗಬೇಕು ಎಂಬುದು ಆಯಾ ಜಿಲ್ಲೆಗಳ ಜನರ ನಿರೀಕ್ಷೆ. ಉಳಿದಂತೆ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೂಡ ಮಳೆಯಾಗಿದೆ. ಆದರೆ 25 ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಕಾಡುತ್ತಿದೆ.

ಈ ವರ್ಷ ರೈತರು ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಂತೆಯೇ ಬರಗಾಲ ಆವರಿಸಿದೆ. ಜೂನ್ ತಿಂಗಳಲ್ಲಿ ರಾಜ್ಯದ ಒಟ್ಟು 13 ಜಿಲ್ಲೆಗಳ 86 ತಾಲೂಕುಗಳಲ್ಲಿ ಮಳೆ ಕೊರತೆ ಇತ್ತು. 6 ಜಿಲ್ಲೆಗಳಲ್ಲಿ ಮಾತ್ರ ಮಳೆ ಆರ್ಭಟಿಸಿತ್ತು.

ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದ ಆಲಮಟ್ಟಿಯ ಬಸವಸಾಗರ ಜಲಾಶಯವೇನೋ ತುಂಬಿದೆ. ಆದರೆ ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ಮತ್ತು ಸೂಪಾ ಜಲಾಶಯಗಳು ಭರ್ತಿಯಾಗಿಲ್ಲ. ಈ ವರ್ಷವೂ ಈ ಜಲಾಶಯಗಳು ಭರ್ತಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಧಾರವಾಡ, ಬೆಳಗಾವಿ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಾಡಿಕೆಯ ಮಳೆಯಾಗಿಲ್ಲ. ಈ ಎಲ್ಲದರ ಪರಿಣಾಮ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿದೆ.

ಮಳೆಯಾಗದೆ ಬಿಜಾಪುರ, ಧಾರವಾಡ, ಗದಗ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಮುಂಗಾರು ಬೆಳೆ ಬಾಡಿ ಹೋಗುತ್ತಿದೆ. ಬಿತ್ತಿದ ಬಳಿಕ ಒಮ್ಮೆ ಸುರಿದ ಮಳೆಗೆ ಬೆಳೆ ಚೆನ್ನಾಗಿ ಬಂದಿತ್ತು. ಆದರೆ ತಿಂಗಳಿನಿಂದ ಮಳೆಯಾಗದೆ ಬೆಳೆ ನೆಲಕಚ್ಚುತ್ತಿದೆೆ. ಇದರಿಂದ ರೈತರ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ರೂಪದಲ್ಲಿ ರಾಜ್ಯ ಸರಕಾರವು ಮೋಡ ಬಿತ್ತನೆ ಯೋಜನೆ ರೂಪಿಸಿದೆ. 30 ಕೋಟಿ ರೂಪಾಯಿ ವೆಚ್ಚದಲ್ಲಿ 60 ದಿನ ಬಿತ್ತನೆ ಮಾಡುವ ಜವಾಬ್ದಾರಿಯನ್ನು ಖಾಸಗಿ ಕಂಪೆನಿಗೆ ವಹಿಸಲಾಗಿದೆ. ಆದರೆ ಮೋಡ ಬಿತ್ತನೆ ಪ್ರಕ್ರಿಯೆಗೆ ವಿವಿಧೆಡೆಯಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದು ಪ್ರಕೃತಿ ನಿಯಮಗಳಿಗೆ ವಿರುದ್ಧವಾದುದು. ಈ ಕ್ರಮದಿಂದ ಮನುಷ್ಯನ ನಿಸರ್ಗದ ನಿಯಮಗಳಲ್ಲಿ ಮೂಗು ತೂರಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ವರೂಪದ ಸಮಸ್ಯೆಗಳು ಕಾಡಬಹುದು.

ಗಂಭೀರ ಸ್ವರೂಪದ ಪರಿಣಾಮಗಳು ತಲೆದೋರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿವೆೆ. ಮೋಡ ಬಿತ್ತನೆಗೆ ರಾಸಾಯನಿಕ ಅಂಶಗಳು ಬಳಕೆಯಾಗುವುದರಿಂದ ಭವಿಷ್ಯದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ರಾಸಾಯನಿಕ ಅಂಶವುಳ್ಳ ಮಳೆಯು ಬೆಳೆಗಳಿಗೆ ಅಷ್ಟೇ ಅಲ್ಲ, ಭೂಮಿಗೂ ಒಳ್ಳೆಯದಲ್ಲ. ಸಹಜವಾಗಿ ಸುರಿಯುವ ಮಳೆಯಿಂದ ಬೆಳೆ ಚೆನ್ನಾಗಿ ಬೆಳೆಯುವುದಲ್ಲದೆ ಭೂಮಿಯಲ್ಲಿ ಹಸಿರೀಕರಣಕ್ಕೂ ಪೂರಕವಾಗುತ್ತದೆ. ಸಹಜ ಮಳೆಯಾಗಿಸಲು ಪೂರಕವಾದ ಉಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕೇ ಹೊರತು ಪ್ರಕೃತಿ ನಿಯಮ ಉಲ್ಲಂಘಿಸುವಂತಹ ಅಥವಾ ಧಕ್ಕೆ ಉಂಟು ಮಾಡುವಂತಹ ಕಾರ್ಯಕ್ಕೆ ಮುಂದಾಗಬಾರದು.

ಆರ್ಥಿಕವಾಗಿ ಹೆಚ್ಚೇನೂ ಲಾಭಕಾರಿಯಲ್ಲದ ದುಬಾರಿ ವೆಚ್ಚದ ಇಂತಹ ಯೋಜನೆಯ ಬದಲು ಸರಕಾರ ಪರ್ಯಾಯ ಮಾರ್ಗದತ್ತ ಮೊರೆ ಹೋಗಬೇಕಿದೆ. ದುಬಾರಿ ವೆಚ್ಚದ ಬದಲು ಸರಕಾರ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಪ್ರೋತ್ಸಾಹಿಸಬೇಕು.ನೀರು ಪೋಲಾಗುವುದು ತಡೆಗಟ್ಟಬೇಕು. ಅಲ್ಲಲ್ಲಿ ಒತ್ತುವರಿ ಭೀತಿ ಎದುರಿಸುತ್ತಿರುವ ನದಿ, ಕೆರೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಕು. ಮಿತವಾದ ನೀರಿನ ಬಳಕೆಯಲ್ಲೇ ಕೃಷಿ ಚಟುವಟಿಕೆಗಳಲ್ಲಿ ಹೇಗೆ ಯಶಸ್ವಿಯಾಗಬಹುದು ಎಂಬುದರ ಬಗ್ಗೆ ಕೃಷಿ ವಿಜ್ಞಾನಿಗಳು ಮತ್ತು ರೈತರೊಂದಿಗೆ ಚರ್ಚಿಸಬೇಕು.

ಇಂತಹ ಸ್ಥಿತಿಯಲ್ಲಿ ಸರಕಾರವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಾಸ್ತವ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಬೇಕು. ಕಬ್ಬು, ಭತ್ತ ಮೊದಲಾದ ಅಧಿಕ ನೀರು ಬೇಡುವ ಬೆಳೆಗಳನ್ನು ಕೈ ಬಿಟ್ಟು ಅಲ್ಪಾವಧಿ ಬೆಳೆಗಳನ್ನು ಬೆಳೆದು ಲಾಭ ಗಳಿಸುವಂತೆ ಉತ್ತೇಜಿಸಬೇಕು. ಅವುಗಳನ್ನೇ ಲಾಭದಾಯಕವಾಗಿ ಬೆಳೆಸುವಂತೆ ಮನವೊಲಿಸಬೇಕು. ಈ ಪ್ರಕ್ರಿಯೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು ಮಹತ್ತರ ಪಾತ್ರ ನಿರ್ವಹಿಸಬಹುದು.

ಮೋಡ ಬಿತ್ತನೆಯಂತಹ ಉಪಯೋಗವಲ್ಲದ ಯೋಜನೆಯನ್ನು ಸರಕಾರ ಕೈಬಿಡಬೇಕು. ಮೋಡ ಬಿತ್ತನೆ ಯೋಜನೆಯು ದೇಶ-ವಿದೇಶಗಳಲ್ಲಿ ಯಶಸ್ವಿಯಾದ ಉದಾಹರಣೆ ತುಂಬಾ ಕಡಿಮೆ ಇದೆ. ಮೋಡ ಬಿತ್ತನೆ ಮಾಡಿದ ನಂತರವೂ ಇಂತಹದ್ದೇ ಪ್ರದೇಶದಲ್ಲಿ ಇಂತಿಷ್ಟು ದಿನ ಮಳೆಯಾಗುವುದು ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ರೈತರಲ್ಲಿ ಭರವಸೆ ಮೂಡಿಸುವ ಏಕಮಾತ್ರ ಉದ್ದೇಶದಿಂದ ಖಚಿತ ಮಾಹಿತಿ ಇರದ ಮತ್ತು ನಿಖರವಾಗಿ ಏನನ್ನೂ ಸ್ಪಷ್ಟಪಡಿಸದ ಇಂತಹ ಯೋಜನೆ ಜಾರಿಗೊಳಿಸಲು ಸರಕಾರ ಮುಂದಾಗಬಾರದು. ಹಿಂದೊಮ್ಮೆ ಮೋಡ ಬಿತ್ತನೆಯಾದಾಗ ಆಂಧ್ರಪ್ರದೇಶಕ್ಕೆ ಮಳೆಯಾದ ಉದಾಹರಣೆ ಇದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಕೇಂದ್ರ ಸರಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆತಿಲ್ಲ. ಅಗತ್ಯವಿದ್ದಷ್ಟು ನೆರವನ್ನೂ ನೀಡಿಲ್ಲ. ಕೇಂದ್ರದಲ್ಲಿ ಈಗಿರುವ ಮೋದಿ ಸರಕಾರಕ್ಕೆ ಇರುವ ಒಂದೇ ಒಂದು ಕಾರ್ಯಕ್ರಮವೆಂದರೆ, ಪ್ರತಿಪಕ್ಷ ಮುಕ್ತ ಭಾರತ ನಿರ್ಮಾಣ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ನಾಶಪಡಿಸಿ, ದೇಶದ ಮೇಲೆ ಫ್ಯಾಶಿಸ್ಟ್ ಸರ್ವಾಧಿಕಾರ ಹೇರುವುದು. ಈ ಷಡ್ಯಂತ್ರದ ಭಾಗವಾಗಿ ಐಟಿ ದಾಳಿಗಳು ನಡೆಯುತ್ತಿವೆ. ರಾಜ್ಯ ಸರಕಾರ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪರದಾಡುತ್ತಿದೆ.

 ರಾಜ್ಯವು ಬರಗಾಲಕ್ಕೆ ತುತ್ತಾಗಿದೆಯೆಂದು ರಾಜ್ಯ ಸರಕಾರಕ್ಕಷ್ಟೇ ಅಲ್ಲ ,ವಿರೋಧ ಪಕ್ಷದವರಿಗೂ ಗೊತ್ತಿದೆ. ಅದನ್ನೇ ನೆಪವಾಗಿಸಿಕೊಂಡು ವಿರೋಧ ಪಕ್ಷದ ಕೆಲ ನಾಯಕರು ರಾಜ್ಯದಾದ್ಯಂತ ಪ್ರವಾಸ ಕೈಗೊಂಡರು. ರಾಜ್ಯ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಆದರೆ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಕೇಂದ್ರ ಸರಕಾರದಿಂದ ಬರ ಪರಿಹಾರ ಕೊಡಿಸುವ ಬಗ್ಗೆ ಮತ್ತು ರೈತರ ಸಾಲ ಮನ್ನಾ ಮಾಡಿಸುವ ಬಗ್ಗೆ ಕನಿಷ್ಠ ಭರವಸೆಯನ್ನೂ ನೀಡಲಿಲ್ಲ. ಕೇಂದ್ರ ಸರಕಾರವು ಬರ ಪರಿಹಾರ ಒದಗಿಸುತ್ತಿಲ್ಲ ಎಂದು ರಾಜ್ಯ ಸರಕಾರ ಪದೇ ಪದೇ ದೂರಿದರೂ ವಿರೋಧ ಪಕ್ಷದವರು ಬರ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡಲು ಬಯಸಲಿಲ್ಲ. ಕೇಂದ್ರ ಸರಕಾರ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದ ಸದ್ಬಳಕೆ ಮಾಡಿಕೊಳ್ಳದೆ ಸರಕಾರ ಕೈಕಟ್ಟಿ ಕೂತಿದೆ ಎಂದು ವಿರೋಧ ಪಕ್ಷದವರು ವಾದಿಸಿದರೇ ಹೊರತು ಇಂತಿಷ್ಟು ಅಂಕಿ ಅಂಶ ಆಧರಿಸಿ ಖಚಿತ ಮಾಹಿತಿ ನೀಡಲಿಲ್ಲ. ರಾಜ್ಯದ ರೈತರ ಬವಣೆ ನೀಗಿಸಲು ವಿರೋಧ ಪಕ್ಷ ತಮ್ಮ ಸಂಸದರು ಮತ್ತು ಕೇಂದ್ರ ಸಚಿವರ ಮುಖಾಂತರ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಬದಲು ಬೇರೆಯದ್ದೇ ವಿಷಯಗಳತ್ತ ಜನರ ಯೋಚನಾ ದಿಕ್ಕನ್ನು ಹೊರಳಿಸಲು ಪ್ರಯತ್ನಿಸುತ್ತಿದೆ.

ಇಂಥ ಸ್ಥಿತಿಯಲ್ಲಿ ಬರಗಾಲದಿಂದ ಕಂಗಾಲಾದ ರೈತರ ನೆರವಿಗೆ ಬರಬೇಕಾದವರು ಯಾರು? ಪರ್ಯಾಯ ಬೆಳೆ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಬೇಕಾದವರು ಯಾರು? ಕೇಂದ್ರ ಮತ್ತು ರಾಜ್ಯ ಸರಕಾರಗಳು ಇನ್ನಾದರೂ ಈ ವಿಷಯದ ಬಗ್ಗೆ ಗಮನಹರಿಸಲಿ. ಬರ ಪರಿಹಾರದ ವಿಷಯದಲ್ಲಿ ವಿನಾಕಾರಣ ರಾಜಕಾರಣ ಮಾಡುವ ಬದಲು ರೈತರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಬೇಕು. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರ ಸಂಕಷ್ಟಗಳನ್ನು ನಿವಾರಿಸಿ, ಬರದ ಛಾಯೆಯ ಮಧ್ಯೆಯೂ ನೆಮ್ಮದಿಯಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಮಾರ್ಗದರ್ಶನ ನೀಡಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News