ಕನ್ನಡ ಸಂಸ್ಕೃತಿಯ ಹಿರಿಮೆ-ಗರಿಮೆ

Update: 2017-08-07 18:15 GMT

ಕನ್ನಡದ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿಯವರ ಕೃತಿ ‘ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆ’. ಈ ಕೃತಿಯ ಕುರಿತಂತೆ ಸ್ವತಃ ಚಿದಾನಂದಮೂರ್ತಿಯವರು ಹೀಗೆ ಹೇಳುತ್ತಾರೆ ‘‘ಹಲವು ಆವೃತ್ತಿಗಳನ್ನು ಕಂಡಿರುವ ಈ ಕಿರುಕೃತಿಯು ಕನ್ನಡಿಗರ ಕಣ್ದೆರೆಯಿಸಿ ಅಭಿಮಾನವನ್ನು ಹೆಚ್ಚಿಸಿ ನಾಡಪ್ರೇಮ, ರಾಷ್ಟ್ರಪ್ರೇಮವನ್ನು ವರ್ಧಿಸುವ ಕೆಲಸವನ್ನು ತಕ್ಕಮಟ್ಟಿಗೆ ಮಾಡಿದೆ. ಇದು ವಿದ್ವತ್ ಕೃತಿ ಅಲ್ಲ, ಜನಪ್ರಿಯ ಕೃತಿ. ಇದರಲ್ಲಿನ ನಿರೂಪಣೆ ಒಂದು ಸ್ಥೂಲ ಸಮೀಕ್ಷೆ’. ಲೇಖಕರ ಮಾತುಗಳೇ ಈ ಕೃತಿಯ ಇತಿಮಿತಿಗಳನ್ನು ಹೇಳುತ್ತದೆ. 2009ರಲ್ಲಿ ಮೊದಲ ಮುದ್ರಣ ಕಂಡಿರುವ ಈ ಕೃತಿ ಸುಮಾರು 9 ಮುದ್ರಣಗಳನ್ನು ಕಂಡಿದೆ ಎನ್ನುವುದೇ ಕೃತಿಯ ಯಶಸ್ವಿಗೆ, ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಹುಶಃ ಒಂದು ಅಗಾಧ ಗ್ರಂಥ ಹೇಳುವ ಇತಿಹಾಸವನ್ನು ಸರಳವಾಗಿ, ಸಂಕ್ಷಿಪ್ತವಾಗಿ ನಿರೂಪಿಸಿದ ಕಾರಣಕ್ಕಾಗಿ ಈ ಕೃತಿ ಓದುಗರಿಗೆ ಇಷ್ಟವಾಗಿರಬಹುದು. ಆದರೆ ಈ ಸಂಕ್ಷಿಪ್ತತೆ ಕೃತಿಯ ದೌರ್ಬಲ್ಯವೂ ಹೌದು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ವಿಷಯದ, ಸಂಶೋಧನೆಯ ಆಳಕ್ಕೆ ಈ ಕೃತಿ ಇಳಿಯುವುದಿಲ್ಲ. ತಿಳಿಯಾದ, ತೆಳುವಾದ ಇತಿಹಾಸದ ಪರಿಚಯವನ್ನಷ್ಟೇ ಮಾಡಿಕೊಡುವುದು ಕೃತಿಯ ಉದ್ದೇಶ. ಮೊದಲ ಅಧ್ಯಾಯದಲ್ಲಿ ಕರ್ನಾಟಕ, ಈ ಹೆಸರಿನ ಹಿನ್ನೆಲೆ, ಪ್ರಾಚೀನತೆಯನ್ನು ಅವರು ಚರ್ಚಿಸುತ್ತಾರೆ. ಇತಿಹಾಸ ಪೂರ್ವ ಯುಗದಲ್ಲಿ ಕರ್ನಾಟಕದ ಅಸ್ತಿತ್ವವನ್ನು ಅವರು ತಡಕಾಡುತ್ತಾರೆ. ಭಾರತದಲ್ಲಿ ಕಬ್ಬಿಣದ ಯುಗ ಆರಂಭವಾದುದು ಕರ್ನಾಟಕದಲ್ಲಿ ಎಂದು ಅವರು ಅಭಿಪ್ರಾಯಪಡುತ್ತಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಾಚೀನತೆಯನ್ನೂ ಈ ಅಧ್ಯಾಯದಲ್ಲಿ ಚರ್ಚಿಸುತ್ತಾರೆ. ನಾಲ್ಕನೆ ಅಧ್ಯಾಯದಲ್ಲಿ ಕರ್ನಾಟಕದ ಮೊದಲ ದೊರೆಗಳ ಹಿನ್ನೆಲೆಗಳನ್ನು ಅವರು ಬರೆಯುತ್ತಾರೆ. ಕರ್ನಾಟಕವನ್ನು ಆಳಿದ ಮೊದಲ ಅಚ್ಚ ಕನ್ನಡ ದೊರೆಗಳು ಕದಂಬರು ಎಂದು ಅವರು ಅಭಿಪ್ರಾಯಪಡುತ್ತಾರೆ. ಬನವಾಸಿ, ಕದಂಬರ ಬಗ್ಗೆ ಹೇಳುವಾಗ ಚಿದಾನಂದ ಮೂರ್ತಿಯವರು ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಜನಪ್ರಿಯ ಇತಿಹಾಸವನ್ನೇ ಇಲ್ಲಿ ಮುಂದಿಡುತ್ತಾರೆ. ಹಾಗೆಯೇ ಗಂಗರು, ಆತಕೂರು ವೀರಗಲ್ಲು, ಬಾದಾಮಿ ಚಾಲುಕ್ಯರು, ಇಮ್ಮಡಿ ಪುಲಿಕೇಶಿ, ಮೊದಲಾದವರ ಬಗ್ಗೆ ಇಲ್ಲಿ ಸರಳ ವಿವರಗಳಿವೆ. ರಾಷ್ಟ್ರಕೂಟರ ಕಾಲ ಕರ್ನಾಟಕದ ವೈಭವದ ಕಾಲ ಎಂದು ಅವರು ಅಭಿಪ್ರಾಯ ಪಡುತ್ತಾರೆ. ತದನಂತರ ಕರ್ನಾಟಕ ಬೆಳೆದು ಬಗೆಯನ್ನು ವಿಜಯನಗರ ಸಾಮ್ರಾಜ್ಯದವರೆಗೂ ಅವರು ನಿರೂಪಿಸುತ್ತಾರೆ. ಹೈದರಲಿ ಮತ್ತು ಟಿಪ್ಪುವನ್ನು ತಮ್ಮ ಎಂದಿನ ದಾಟಿಯಲ್ಲಿ ಪೂರ್ವಾಗ್ರಹ ಪೀಡಿತರಾಗಿಯೇ ಚಿದಾನಂದಮೂರ್ತಿ ಕಟ್ಟಿಕೊಡುತ್ತಾರೆ. ಅವರ ವೀರ, ಶೌರ್ಯಗಳನ್ನು ವರ್ಣಿಸುವ ಚಿದಾನಂದ ಮೂರ್ತಿ, ಟಿಪ್ಪುವಿನ ಪ್ರಗತಿಪರ ಆಡಳಿತದ ಬಗ್ಗೆ, ಸಾಮಾಜಿಕ ಕ್ರಾಂತಿಯ ಬಗ್ಗೆ ವೌನವಾಗುತ್ತಾರೆ. ಕರ್ನಾಟಕ ಏಕೀಕರಣದ ಕುರಿತಂತೆಯೂ ಅವರು ಈ ಕೃತಿಯಲ್ಲಿ ಬೆಳಕು ಚೆಲ್ಲುತ್ತಾರೆ. ಕನ್ನಡ ಗೆಳೆಯರ ಬಳಗ ಕತ್ರಿಗುಪ್ಪೆ ಬೆಂಗಳೂರು ಇವರು ಕೃತಿಯನ್ನು ಹೊರತಂದಿದ್ದಾರೆ. ಆಸಕ್ತರು 080-26794508 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News