ಪ್ರಾಧಿಕಾರದ ವತಿಯಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ: ಆರ್.ನರೇಂದ್ರ

Update: 2017-08-08 14:35 GMT

ಹನೂರು, ಆ,8; ಪ್ರಸಿದ್ದ ಯಾತ್ರಾ ಸ್ಥಳವಾದ ಮ.ಬೆಟ್ಟಕ್ಕೆಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಠಿಯಿಂದ ಪ್ರಾಧಿಕಾರದ ವತಿಯಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಹನೂರು ಕ್ಷೇತ್ರ ವ್ಯಾಪ್ತಿಯ ಮಲೈಮಹದೇಶ್ವರ ಬೆಟ್ಟದ ನಾಗುಮಲೈ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮಾದೇಶ್ವರನ ದರ್ಶನ ಪಡೆಯಲು ರಾಜ್ಯ ಹಾಗೂ ನೆರೆ ರಾಜ್ಯ ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಜಾತ್ರಾ ವಿಶೇಷ ದಿನಗಳಲ್ಲಿ ಆಗಮಿಸುವ ಹಿನ್ನಲೆಯಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅದರ ಪರಿಹಾರಕ್ಕಾಗಿ ಪ್ರಾಧಿಕಾರ ಭಕ್ತರಿಗೆ ಹಾಗೂ ಕ್ಷೇತ್ರದಲ್ಲಿ ಆಗುವತೊಂದರೆಗಳನ್ನು ನೀಗಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದು, ಇನ್ನು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಕಡೆಗೆ ಗಮನಹರಿಸಲಾಗಿದೆ ಎಂದು ತಿಳಿಸಿದರು.

ಭಕ್ತರು ದೇವಸ್ಥಾನಕ್ಕೆ ಹರಕೆ ಕಾಣಿಕೆಯಾಗಿ ನೀಡುವ ಗೋವುಗಳನ್ನು ಪ್ರಾಧಿಕಾರ ತೆಗದುಕೊಳ್ಳುತ್ತಿಲ್ಲ, ಆದ್ದುರಿಂದ ಗೋವುಗಳನ್ನು ಭಕ್ತರು ತಮ್ಮ ಗ್ರಾಮಗಳಲ್ಲಿ ಸಾಕಾಣಿಕೆ ಮಾಡುವವರಿಗೆ ಮಾರಾಟ ಮಾಡಿ ಬಂದ ಹಣವನ್ನು ದೇವಸ್ಥಾನಕ್ಕೆ ತಂದು ನೀಡಿ ರಶೀದಿ ಪಡೆಯಬಹುದು. ಇಲ್ಲದಿದ್ದರೇ ಹುಂಡಿಗೆ ಹಾಕಿ.  ಯಾವುದೇ ಕಾರಣಕ್ಕೂ ಗೋವುಗಳನ್ನು ದೇವಸ್ಥಾನದ ಆವರಣದಲ್ಲಿ ಭಕ್ತರು ತಂದು ಬಿಡಬೇಡಿ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.

ನಂತರ ಮಾತನಾಡಿದ ಪ್ರಾಧಿಕಾರದ ಕಾರ್ಯದರ್ಶಿ ಅಫಾರ ಜಿಲ್ಲಾಧಿಕಾರಿ ಗಾಯತ್ರಿ, ಜಾತ್ರಾ ಸಂಧರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಭಕ್ತರಿಗೆ ಆನ್‌ಲೈನ್ ವ್ಯವಸ್ಥೆ ಕಲ್ಲಿಸಿದೆ. ಇದರಲ್ಲಿ ಭಕ್ತರು ಸೇವಾ ಕಾರ್ಯ, ದರ್ಶನ, ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷ ಬಸವರಾಜು, ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಎ.ಇ.ಇ ಕುಮಾರ್, ವೃತ್ತ ನಿರೀಕ್ಷಕ ಷಣ್ಮುಗ ವರ್ಮ, ಇನ್ನಿತರರು ಹಾಜರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News