ಲಿಂಗಾಯತರು ಹಿಂದೂಗಳಲ್ಲ

Update: 2017-08-10 18:16 GMT

ಲಡಾಯಿ ಪ್ರಕಾಶನ ಹೊರತರುತ್ತಿರುವ ‘ಲಿಂಗಾಯತ ದರ್ಶನ ಮಾಲೆ’ಯ ಇನ್ನೊಂದು ಕೊಡುಗೆ ಡಾ. ಎನ್. ಜಿ. ಮಹಾದೇವಪ್ಪ ಅವರು ಬರೆದಿರುವ ‘‘ಲಿಂಗಾಯತರು ಹಿಂದೂಗಳಲ್ಲ’’ ಎನ್ನುವ ಕೃತಿ. ವಿರೂಪಗೊಂಡಿರುವ ಲಿಂಗಾಯತ ಧರ್ಮವನ್ನು ಗುರುತಿಸುವ ಲೇಖಕರು, ಅದಕ್ಕೆ ಕಾರಣವಾಗಿರುವ ಅಂಶಗಳ ಕಡೆಗೆ ಗಮನ ಹರಿಸುತ್ತಾರೆ. ಲಿಂಗಾಯತರು ಯಾಕೆ ಹಿಂದೂಗಳಲ್ಲ ಎನ್ನುವುದನ್ನು ಹೇಳುತ್ತಾ ಲಿಂಗಾಯತರಿಗೂ ಇತರ ಹಿಂದೂ ಧರ್ಮೀಯರಿಗಿರುವ ವ್ಯತ್ಯಾಸಗಳನ್ನು ತಿಳಿಸಿಕೊಡುತ್ತಾರೆ. ಲಿಂಗಾಯತರು ಹಿಂದೂಗಳಲ್ಲ ಎನ್ನುವುದಷ್ಟೇ ಅಲ್ಲ, ವೀರಶೈವರಿಗಿಂತಲೂ ಅವರು ಭಿನ್ನರು ಎಂದು ಈ ಪುಸ್ತಕ ವಾದಿಸುತ್ತದೆ. ವೀರಶೈವ ಹಿಂದೂಧರ್ಮದ ಶಾಖೆಯಾದರೆ, ಲಿಂಗಾಯತ ಎನ್ನುವುದು ಸ್ವತಂತ್ರ ಜಂಗಮ ಧರ್ಮ ಎನ್ನುವುದನ್ನು ಸಾಕ್ಷ ಸಮೇತ ನಿರೂಪಿಸುತ್ತಾರೆ.

ಈ ಕೃತಿಯಲ್ಲಿ ಆರು ಅಧ್ಯಾಯಗಳಿವೆ. ‘ಲಿಂಗಾಯತರು ಹಿಂದೂಗಳಲ್ಲ’ ಎನ್ನುವ ಅಧ್ಯಾಯದಲ್ಲಿ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎನ್ನುವ ವಾದ ಇಂದು ನಿನ್ನೆಯದಲ್ಲ ಎಂದು ಲೇಖಕರು ಹೇಳುತ್ತಾರೆ. ಇಪ್ಪತ್ತನೆ ಶತಮಾನದ ಆರಂಭದಿಂದಲ್ಲೇ ಲಿಂಗಾಯತ ಧರ್ಮ ಮತ್ತು ಅದರೊಳಗೆ ನುಸುಳಿಕೊಂಡಿರುವ ವೀರಶೈವ ಧರ್ಮದ ನಡುವೆ ಸಂಘರ್ಷಗಳು ಕಾನೂನು ಮೂಲಕ ಏರ್ಪಟ್ಟಿವೆ. ‘‘...ಮಾನವವಾದ ಹಾಗೂ ಸಮಾಜ ಜೀವನಕ್ಕೆ ಲಿಂಗಾಯತದ ವಿಶೇಷಕೊಡುಗೆಗಳಾದ ನಿಜಾತ್ಮದ ಅರಿವಿನ ಅಧಿಕಾರ ನಿರಾಕರಣೆಯ ವಿರುದ್ಧ ಮಾಡಿದ ಚಳವಳಿ, ಮುಕ್ತ ವಿಚಾರ ವಿನಿಮಯ, ಸರ್ವ ಸಮಾನತೆ, ಇಷ್ಟಲಿಂಗ, ಕಾಯಕ ದಾಸೋಹ ಮುಂತಾದ ಶ್ರೇಷ್ಠ ಆದರ್ಶಗಳನ್ನು ಕೆಲವರು ವೈದಿಕ ಧರ್ಮದಲ್ಲಿ ಲೀನ ಮಾಡಹೊರಟಿರುವುದು ನಿಜಕ್ಕೂ ಲಿಂಗಾಯತಕ್ಕೆ ಆಗುತ್ತಿರುವ ಅಪಚಾರ ಮತ್ತು ಅಪಾಯ. ಈ ಅಪಾಯದಿಂದ ಪಾರಾಗಬೇಕೆಂದರೆ ಲಿಂಗಾಯತವನ್ನು ಮತ್ತೆ ಹಿಂದೂ ಧರ್ಮದೊಳಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವ ವೀರಶೈವರಿಂದ ಅದನ್ನು ರಕ್ಷಿಸಬೇಕಾಗುತ್ತದೆ’’ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

ಎರಡನೆಯ ಅಧ್ಯಾಯದಲ್ಲಿ ವೀರಶೈವ ಮತ್ತು ಲಿಂಗಾಯತ ಧರ್ಮಕ್ಕಿರುವ ಭಾರೀ ವ್ಯತ್ಯಾಸಗಳನ್ನು ಉಲ್ಲೇಖಿಸುತ್ತಾರೆ. ಲಿಂಗಾಯತ ವಚನೋಕ್ತವಾಗಿದ್ದರೆ ವೀರಶೈವ ಆಗಮೋಕ್ತ ಎಂದು ಅವರು ಹೇಳುತ್ತಾರೆ. ಮೂರನೆ ಅಧ್ಯಾಯದಲ್ಲಿ ವೀರಶೈವಕ್ಕಿರುವ ವೇದಗಳ ನಂಟನ್ನು ಲೇಖಕರು ಹೇಳಿದರೆ, ಲಿಂಗಾಯತ ಧರ್ಮ ವೇದಗಳ ನಂಟು ಮುರಿದು ಹುಟ್ಟಿಕೊಂಡ ಧರ್ಮ ಎನ್ನುವುದನ್ನು ಉಲ್ಲೇಖಿಸುತ್ತಾರೆ. ಬಸವಣ್ಣನವರ ಜಾತಿ ತಾರತಮ್ಯ ನಿರಾಕರಣೆಯನ್ನು ಐದನೆ ಅಧ್ಯಾಯದಲ್ಲಿ ವಿಶ್ಲೇಷಿಸುತ್ತಾರೆ. ಆರನೆ ಅಧ್ಯಾಯದಲ್ಲಿ ಕೆಲವು ಬಸವೋತ್ತರ ಶರಣರ ಸ್ತ್ರೀಧೋರಣೆಯನ್ನು ಬರೆಯುತ್ತಾರೆ. ವಚನಗಳು ಮತ್ತು ಲಿಂಗಾಯತ ಧರ್ಮದ ಸಾರಸರ್ವವನ್ನು ಹಿಡಿದುಕೊಂಡಿರುವ ಕೃತಿ ಇದಾಗಿದೆ. ವೀರಶೈವ ಮತ್ತು ಲಿಂಗಾಯತರ ಕುರಿತಂತೆ ಇರುವ ಹಲವು ಗೊಂದಲಗಳನ್ನು ಇದು ಪರಿಹರಿಸುತ್ತದೆ. ಲಿಂಗಾಯತ ಧರ್ಮ ಕರ್ನಾಟಕದಲ್ಲಿ ಹುಟ್ಟಿಕೊಂಡ ಜಗತ್ತಿನ ಶ್ರೇಷ್ಠ ಸ್ವತಂತ್ರ ಧರ್ಮವಾಗಿದೆ ಎನ್ನುವುದನ್ನು ಈ ಕೃತಿ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ. ಕೃತಿಯ ಮುಖಬೆಲೆ 80 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News