ಗುಜರಾತ್ ನಾಶಗೊಳಿಸಿದ್ದ ಮೋದಿ ಈಗ ದೇಶ ನಾಶಗೊಳಿಸುತ್ತಿದ್ದಾರೆ : ಅಹ್ಮದ್ ಪಟೇಲ್

Update: 2017-08-11 11:17 GMT

ಹೊಸದಿಲ್ಲಿ,ಆ.11 : "ಗುಜರಾತ್ ರಾಜ್ಯವನ್ನು ನಾಶ ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ದೇಶವನ್ನು ನಾಶಗೈಯ್ಯುತ್ತಿದ್ದಾರೆ," ಎಂದು  ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಇತ್ತೀಚೆಗೆ ರಾಜ್ಯಸಭೆಗೆ ಮರು ಆಯ್ಕೆಗೊಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.

ಈ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುಣ್ಣಲಿದೆ ಎಂದು ಐದನೇ ಬಾರಿ ರಾಜ್ಯಸಭೆ ಪ್ರವೇಶಿಸುತ್ತಿರುವ ಪಟೇಲ್  ಭವಿಷ್ಯ ನುಡಿದಿದ್ದಾರೆ. ``ಈ ದೇಶವನ್ನು ಮತ್ತು  ಆ ಪಕ್ಷವನ್ನು (ಬಿಜೆಪಿ) ಕೇವಲ ಇಬ್ಬರು ವ್ಯಕ್ತಿಗಳು ಆಳುತ್ತಿದ್ದಾರೆ. ಅವರ್ಯಾರೆಂದು ನಿಮಗೆ ಗೊತ್ತು. ಬಿಜೆಪಿಯವರಿಗೇ ನಿರಾಸೆಯಾಗಿದೆ. ಒಬ್ಬರು ಸಂವಿಧಾನಾತ್ಮಕವಾಗಿ ಆಯ್ಕೆಯಾದವರೆ ಇನ್ನೊಬ್ಬರು ಸಂವಿಧಾನೇತರ   ಅಧಿಕಾರಸ್ಥರಾಗಿದ್ದಾರೆ (ಅಮಿತ್ ಶಾ),'' ಎಂದು ಜಂತರ್ ಮಂತರ್ ನಲ್ಲಿ ಆಯೋಜಿಸಲಾಗಿದ್ದ  ಯುವ ಕಾಂಗ್ರೆಸ್ ಕಾರ್ಯಕರ್ತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಹೇಳಿದರು.

``ಎಲ್ಲಾ ಸರಕಾರಿ ಏಜನ್ಸಿಗಳನ್ನು ದುರಪಯೋಗ ಪಡಿಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಅವರು ಅಧಿಕಾರಕ್ಕೆ ಬಂದಾಗ ದೊಡ್ಡ ದೊಡ್ಡ ಆಶ್ವಾಸನೆ ನೀಡಿದ್ದರು. ಅವರು ಯುವಜನತೆಯನ್ನು ದಾರಿಪತಪ್ಪಿಸಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದೆಂದು ಹೇಳಿದರು. ಆದರೆ ಒಂದೇ ಒಂದು ಉದ್ಯೋಗ ಸೃಷ್ಟಿಯಾಗಿಲ್ಲ,'' ಎಂದು ಪಟೇಲ್ ಆಪಾದಿಸಿದರು.

``ರೈತರಿಗೆ ನೀಡಲಾದ ಆಶ್ವಾಸನೆಗಳನ್ನೂ ಈಡೇರಿಸಲಾಗಿಲ್ಲ. ಅವರು ಆತ್ಮಹತ್ಯೆ ಮಾಡುತ್ತಿದ್ದಾರೆ. ಹಣದುಬ್ಬರವನ್ನು ಹಾಗೂ  ಭ್ರಷ್ಟಾಚಾರವನ್ನು ನಿಯಂತ್ರಿಸುವುದಾಗಿ ಹೇಳಿದ್ದರು. ಆದರೆ ಮಹಿಳೆಯರನ್ನು ಶೋಷಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಯೇ ಇಲ್ಲ'' ಎಂದರು ಅಹ್ಮದ್ ಪಟೇಲ್.

``75 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಆಯೋಜಿಸುವಾಗ `ಅಂಗ್ರೇಝೋ ಭಾರತ್ ಛೋಡೋ' ಎಂದು ಘೋಷಿಸಿದ್ದರು ಈಗ ನಾವು `ಬಿಜೆಪಿ ಗದ್ದಿ ಛೋಡೋ' ಎಂದು ಹೇಳಬೇಕಾಗಿದೆ,'' ಎಂದರು.

``ನನ್ನ ವಿಜಯ ಕಾಂಗ್ರೆಸ್ ಪಕ್ಷದ ಆತ್ಮಬಲವನ್ನು ವೃದ್ಧಿಸಿದೆ. ಅದನ್ನು ಉಪಯೋಗಿಸಬೇಕದೆ. ನನಗೆ ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು. ಅವರಿಗೆ ರೂ. 15 ಕೋಟಿಯ ಆಮಿಷ ನೀಡಲಾಗಿತ್ತು, ಆದರೆ ಅವರು ಅದಕ್ಕೆ ಜಗ್ಗಲಿಲ್ಲ,'' ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News