ಚಂಪಾ ಅವರ ಎಲ್ಲ ನಮೂನೆಯ ಕವನಗಳು....

Update: 2017-08-11 18:16 GMT

ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರು ತಮ್ಮ ವಿಡಂಬನಾತ್ಮಕವಾದ ಕಾವ್ಯಗಳಿಗೆ ಹೆಸರಾದವರು. 2010ರಲ್ಲಿ ಬಂದ ಅವರ ‘ದೇವಬಾಗ’ ಸಂಕಲನದ ಬಳಿಕ ಅವರು ಬರೆದ ಕವಿತೆಗಳ ಸಂಕಲನ ‘ಮತ್ತೊಂದು ಎಲೆ’. ಸಂಕ್ರಮಣ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಚಂಪಾ ಅವರ 13ನೆಯ ಕವನ ಸಂಕಲನವಿದು. ಇಲ್ಲಿ ಎಂಬತ್ತಕ್ಕೂ ಅಧಿಕ ಕವಿತೆಗಳಿವೆ. ಈ ಕವಿತೆಗಳು ಸ್ಪರ್ಶಿಸದ ಭಾವವಿಲ್ಲ. ಇತಿಹಾಸ, ವರ್ತಮಾನ, ಭವಿಷ್ಯ ಮೂರನ್ನೂ ಇಟ್ಟುಕೊಂಡು ಬರೆದಿರುವ ಸಾಲುಗಳಲ್ಲಿ ರಾಜಕೀಯವಿದೆ. ಸಾಂಸ್ಕೃತಿಕ ತಿಕ್ಕಾಟಗಳಿವೆ. ವ್ಯಂಗ್ಯ, ವಿಡಂಬನೆಗಳಿವೆ. ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲರು ಮುಂಚೂಣಿಯಲ್ಲಿದ್ದರು. ಆದರೆ ಇವರು ಬಂಡಾಯದ ಆಕ್ರೋಶಕ್ಕೆ ವ್ಯಂಗ್ಯದ ಮೊನಚನ್ನು ನೀಡಿದರು. ನಾಡಿನ ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳೆರಡರಲ್ಲೂ ಚಂಪಾ ಅವರು ಗುರುತಿಸಿಕೊಳ್ಳುತ್ತಿರುವುದರಿಂದ ಇಲ್ಲಿನ ಕವಿತೆಗಳು ವೈವಿಧ್ಯಮಯ ವಸ್ತುಗಳಿಂದ ಕೂಡಿದೆ. ವರ್ತಮಾನಗಳಿಗೆ ಕಟು ಪ್ರತಿಕ್ರಿಯೆಯನ್ನು ನೀಡುವ ಶಕ್ತಿಯನ್ನು ಈ ಕವಿತೆಗಳು ಹೊಂದಿವೆ.
‘‘ಇತಿಹಾಸ/ನಮ್ಮ ಬೆನ್ನ ಹಿಂದಿನ ಬೆಳಕು/ ಅನ್ನುತ್ತಾರೆ ಕವಿಗಳು/ಅದಕ್ಕೇ ಇರಬೇಕು/ನಮ್ಮ ಎದುರು ಹಾದಿಯ ಮೇಲೆ/ನಮ್ಮದೇ ಕಪ್ಪು ನೆರಳು’’ ಇತಿಹಾಸದ ಪಾಠ ಕಲಿಯದ ವರ್ತ ಮಾನದ ವ್ಯಂಗ್ಯ ಈ ಕವಿತೆಯಲ್ಲಿದೆ. ಇಂತಹ ರಾಜಕೀಯ ತಿರುಳುಲ್ಲ ಕವಿತೆಗಳನ್ನು ಬರೆಯುವ ಚಂಪಾ ‘‘ನೆರೆಯವರನ್ನು ಪ್ರೀತಿಸು-ಅಂದ ಸಂತ/ನೆರೆಯವನ ಹೆಂಡತಿಯನ್ನು ಪ್ರೀತಿಸಿದ ಭಕ್ತ’’ ಎಂಬಂತಹ ಸರಳ ಜೋಕುಗಳನ್ನು ಕೂಡ ಕವಿತೆಯ ಹೆಸರಿನಲ್ಲಿ ಬರೆತು ಸಂಕಲನದ ಉ್ದೇಶವನ್ನು ತೆಳು ಕೊಳಿಸುತ್ತಾರೆ.
ದಾಂಪತ್ಯ ಹೇಗೆ ಪುರುಷ ಪ್ರಧಾನ ನೆಲೆಯಲ್ಲೇ ಸ್ಥಾಪಿತಗೊಂಡಿದೆ ಎನ್ನುವುದನ್ನು ಅವರು ಕತೆಯ ಕತೆ ಕವಿತೆಯಲ್ಲಿ ಹೀಗೆ ಹೇಳುತ್ತಾರೆ ‘‘ದಾಂಪತ್ಯದ ಸುಗಮೀಕರಣಕ್ಕೆಂದು/ ಮದುವೆಯ ಮೊದಲ ರಾತ್ರಿ/ತನ್ನೆಲ್ಲ ಪೂರ್ವಾಶ್ರಮದ ಕತೆ/ಹೆಂಡತಿಗೆ ಹೇಳಿಕೊಂಡ ಗಂಡ/ ಹುರುಪಿಗೆದ್ದ ಅವಳೂ/ಅದೇ ಕಾರಣಕ್ಕೆಂದು/ಅಂಥದೇ ಕತೆ ಹೇಳಿದಳು/ ಅವಳ ಕತೆ ಅಲ್ಲಿಗೆ/ಶುಭಂ’’ ‘‘ಅಪ್ಪ, ಅವ್ವ ಅವಾಗ’’ ‘‘ಮತ್ತೊಂದು ಎಲೆ’’ ‘‘ಅಂದು ಅಲ್ಲಿ...ಇಂದು ಇಲ್ಲಿ’’ ಹೀಗೆ ಹಲವು ಗಂಭೀರ ಕವಿತೆಗಳ ನಡುವೆಯೇ ಕೆಲವು ವಾಚ್ಯ ರಾಜಕೀಯ ಭಾಷಣಗಳೂ ಈ ಕವನ ಸಂಕಲನದಲ್ಲಿ ಸೇರಿಕೊಂಡಿರುವುದರಿಂದ ಕೃತಿಯ ಮಹತ್ವ ಕಡಿಮೆಯಾಗಿದೆ. ಬಹುಶಃ ಅಳಿದುಳಿದ ಎಲ್ಲವನ್ನೂ ಸಂಪೂರ್ಣ ಗುಡಿಸಿ ಈ ಕೃತಿಯಲ್ಲಿ ಸೇರಿಸಿದ ಪ್ರಯತ್ನದ ಕಾರಣದಿಂದ ಇದು ಸಂಭವಿಸಿರಬಹುದು. ಕವಿತೆಗಳನ್ನು ಆಯ್ಕೆ ಮಾಡುವ ಸಂದರ್ಭ ದಲ್ಲಿ ಚಂಪಾ ಅವರು ಒಂದಿಷ್ಟು ಚೌಕಾಶಿ ಮಾಡಿದ್ದಿದ್ದರೆ ಇದೊಂದು ಒಳ್ಳೆಯ ಸಂಕಲನವಾಗಬಹುದಿತ್ತೋ ಏನೋ? ಆದುದರಿಂದಲೇ ಮುನ್ನುಡಿಯಲ್ಲಿ ‘ಎಲ್ಲ ನಮೂನೆಯ ಕವನಗಳೂ ಇಲ್ಲಿವೆ’ ಎಂದಿರುವುದು ಕವಿಯ ನಿರೀಕ್ಷಣಾ ಜಾಮೀನಿನಂತಿದೆ.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News