ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದೇನೆ: ನಟ ಉಪೇಂದ್ರ

Update: 2017-08-12 09:21 GMT

ಬೆಂಗಳೂರು, ಆ.12: "ನಮಗೆ ಜನನಾಯಕರು ಬೇಡ, ಜನಸೇವಕರು ಬೇಡ. ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಜಾತಿ ನೋಡುವುದಿಲ್ಲ. ಕೆಲಸ ಗೊತ್ತಿರುವುದನ್ನು ನೋಡಿ ಕೆಲಸ ಕೊಡುತ್ತೇವೆ. ಹಾಗೆಯೇ ಕೆಲಸ ಮಾಡುವವರನ್ನು ಗುರುತಿಸಿ ಅವರಿಗೆ ಮತ ನೀಡಬೇಕು’’ಎಂದು ನಟ ಉಪೇಂದ್ರ ಹೇಳಿದರು.

ತಾವರೆಕೆರೆ ಸಮೀಪದಲ್ಲಿರುವ ರುಪ್ಪೀಸ್ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ನಟ ಉಪೇಂದ್ರ "ನಾನು ಜನನಾಯಕನೂ ಅಲ್ಲ, ಜನ ಸೇವಕನೂ ಅಲ್ಲ ನಾನೊಬ್ಬ ಕಾರ್ಮಿಕ ಎಂದರು.

"ನಮ್ಮದು ಪ್ರಜಾಪ್ರಭುತ್ವ ದೇಶ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ. ಎಲ್ಲರೂ ಪ್ರತಿವರ್ಷ ಜನರು ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಾರೆ. ಅದು ಸಮರ್ಪಕವಾಗಿ ಖರ್ಚಾಗಬೇಕು  ಸರಕಾರದ  ಬಜೆಟ್ ಆಗೋದೆ ಜನರು ಕೊಡುವ ತೆರಿಗೆ ಹಣದಿಂದ. ಎಲ್ಲ ಜನಪ್ರತಿನಿಧಿಗಳಿಗೆ ಜನರ ದುಡ್ಡಿನಿಂದಲೇ ವೇತನ ಪಾವತಿಸಲಾಗುತ್ತದೆ. ಜನರು ಹಾಕಿದ ದುಡ್ಡು ಜನರಿಗೆ ಮುಟ್ಟಬೇಕು. ನಾನು ಯಾವುದೇ  ರಾಜಕೀಯ ಪಕ್ಷ ಸೇರುತ್ತಿಲ್ಲ. ಆದರೆ ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದೇನೆ" ಎಂದು  ಮಾಹಿತಿ ನೀಡಿದರು. 

 ಜಾತಿ, ಧರ್ಮ , ಖ್ಯಾತಿ, ದುಡ್ಡು ನೋಡಿ ಮತ ಹಾಕಬಾರದು. ನಮಗೆ ಪ್ರಜಾಕೀಯ, ಪ್ರಜಾಕಾರಣ, ಪ್ರಜಾಪ್ರಭುತ್ವ ಬೇಕಾಗಿದೆ. ರಾಜಕೀಯ ಅಥವಾ ರಾಜಕಾರಣ ಅಲ್ಲ. ರಾಜಕೀಯಕ್ಕೆ ಹಣ ಅನಿವಾರ್ಯವಾಗರಬಹುದು ಆದರೆ ಪ್ರಜಾಕೀಯಕ್ಕೆ ಹಣ ಬೇಕಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News