‘‘ಬಾಕಿಯನ್ನು ತಕ್ಷಣ ತೀರಿಸಿ,ಇಲ್ಲದಿದ್ದರೆ ಆಮ್ಲಜನಕ ಪೂರೈಕೆ ನಿಲ್ಲಿಸುತ್ತೇವೆ’’

Update: 2017-08-12 11:41 GMT

ಗೋರಖಪುರ,ಆ.12: ಇಲ್ಲಿಯ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಲಕ್ನೋದ ಕಂಪನಿಯೊಂದು ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರಿಂದ 30 ಮಕ್ಕಳು ಸಾವನ್ನಪ್ಪಿದ ದುರಂತ ಇಡೀ ದೇಶವನ್ನು ನೋವಿಗೆ ತಳ್ಳಿದೆ. ಈ ಕಂಪನಿಯು ಬಾಕಿಯನ್ನು ತಕ್ಷಣ ತೀರಿಸಿ, ಇಲ್ಲದಿದ್ದರೆ ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಯನ್ನು ನಿಲ್ಲಿಸುತ್ತೇವೆ ಎಂದು ಆ.8ರಂದೇ ಆಸ್ಪತ್ರೆಯ ಅಧಿಕಾರಿಗಳಿಗೆ ಲಿಖಿತ ಪತ್ರದಲ್ಲಿ ಎಚ್ಚರಿಕೆ ನೀಡಿತ್ತು.

ಪುಷ್ಪಾ ಸೇಲ್ಸ್‌ನ ಪ್ರತಿನಿಧಿ ದಿಪಂಕರ್ ಶರ್ಮಾ ಬಿಆರ್‌ಡಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಿಗೆ ಬರೆದಿದ್ದ ಪತ್ರದಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಯ ಬಾಬ್ತು 63,65,702 ರೂ. ಬಾಕಿಯಿದೆ ಎಂದು ನಮೂದಿಸಿದ್ದು, ತಕ್ಷಣವೇ ಅದನ್ನು ಪಾವತಿಸು ವಂತೆ ಆಗ್ರಹಿಸಿದ್ದರು.

    ಮುಂದಿನ 4-5 ದಿನಗಳಿಗೆ ಸಿಲಿಂಡರ್ ಸಂಗ್ರಹವನ್ನು ಪೂರೈಸಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದ್ದು, ಬಾಕಿಯನ್ನು ತೀರಿಸದಿದ್ದರೆ ಪೂರೈಕೆಯಲ್ಲಿ ವ್ಯತ್ಯಯವಾಗ ಬಹುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

ನಮಗೆ ಆಮ್ಲಜನಕವನ್ನು ಪೂರೈಸುತ್ತಿರುವ ಇನೊಕ್ಸ್ ಕಂಪನಿಯು ನಾವು ಅವರಿಗೆ ಹಣ ಪಾವತಿಸದಿದ್ದರೆ ಭವಿಷ್ಯದಲ್ಲಿ ಸಿಲಿಂಡರ್‌ಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ ಎಂದು ಶರ್ಮಾ ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ಕಂಪನಿಯು ಬಾಕಿ ಹಣ ಪಾವತಿಸುವಂತೆ ಕೋರಿ ಆ.8ಕ್ಕೆ ಮೊದಲೂ ಕಾಲೇಜಿಗೆ ಹಲವಾರು ಪತ್ರಗಳನ್ನು ಬರೆದಿತ್ತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸ್ವಕ್ಷೇತ್ರವಾಗಿರುವ ಗೋರಖಪುರದ ಈ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಆಮ್ಲಜನಕದ ಕೊರತೆಯಿಂದ ಹಲವಾರು ಮಕ್ಕಳು ಸರಣಿ ಸಾವನ್ನಪ್ಪಿರುವುದು ದೇಶಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿದೆ. ಇಷ್ಟೊಂದು ಘೋರ ದುರಂತ ಸಂಭವಿಸಿದ್ದರೂ ಆಮ್ಲಜನಕದ ಕೊರತೆ ಮಕ್ಕಳ ಸಾವುಗಳಿಗೆ ಕಾರಣವಲ್ಲ, ಮಿದುಳು ಜ್ವರ ಕಾರಣ ಎಂಬ ಹಸಿಸುಳ್ಳನ್ನು ಲಜ್ಜೆಗೇಡಿ ಸರಕಾರವು ಹೇಳುತ್ತಿದೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News