ಕಲಬುರ್ಗಿ ಹತ್ಯೆಯ ಆನಂತರದ ಬರಹಗಳು

Update: 2017-08-13 18:06 GMT

‘‘ಅರಿವಿನ ನೆಲೆಗಳು’’ ಪ್ರೊ. ರಾಜೇಂದ್ರ ಚೆನ್ನಿಯವರ ಲೇಖನಗಳ ಸಂಗ್ರಹಗಳು. ಈ ಕೃತಿಯಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಚೆನ್ನಿ ಅವರು ಬರೆದ ಲೇಖನಗಳಿವೆ. ಕಳೆದ ಒಂದೆರಡು ವರ್ಷ ಎಂದರೆ, ಎಂ. ಎಂ. ಕಲಬುರ್ಗಿಯವರು ತೀರಿ ಹೋದ ಆನಂತರದ ದಿನಗಳಲ್ಲಿ ಹೊರಬಂದ ಲೇಖನಗಳು ಇವು. ಆದುದರಿಂದಲೇ, ಚೆನ್ನಿಯವರು ಸಾಹಿತ್ಯ, ಸಂಸ್ಕೃತಿ ಎಂದು ಮುಟ್ಟಲು ಹೊರಟ ವಸ್ತುಗಳೆಲ್ಲ ರಾಜಕೀಯ ಚರ್ಚೆಯಾಗಿಯೂ ರೂಪ ಪಡೆಯುತ್ತದೆ. ವರ್ತಮಾನದಲ್ಲಿ ಸಂಸ್ಕೃತಿ, ಸಾಹಿತ್ಯವನ್ನು ಹೇಗೆ ರಾಜಕೀಯ ಸುತ್ತಿಕೊಂಡಿದೆ ಎನ್ನುವುದನ್ನು ಹೇಳುತ್ತದೆ. ಇಲ್ಲಿರುವ ಬಹುಪಾಲು ಲೇಖನಗಳು ಸಮಾಜ, ಸಂಸ್ಕೃತಿ ಹಾಗೂ ರಾಜಕೀಯಕ್ಕೆ ಸಂಬಂಧಪಟ್ಟವುಗಳು. ಒಂದೆರಡು ಸಾಹಿತ್ಯದ ಕುರಿತಂತೆಯೂ ಇದೆ. ಕಾಕತಾಳೀಯವಾಗಿ ಇಲ್ಲಿನ ಲೇಖನಗಳು ತೆರೆದುಕೊಳ್ಳುವುದೇ ಕಲಬುರ್ಗಿಯನ್ನು ನೆನೆಯುವ ಮೂಲಕ. ‘ಕೆಟ್ಟಿತ್ತು ಕಲ್ಯಾಣ: ಕಲಬುರ್ಗಿಯವರ ಹತ್ಯೆ’ ಕರ್ನಾಟಕದ ಚರಿತ್ರೆಯಲ್ಲಿ ಒಂದು ದೊಡ್ಡ ತಿರುವಿನ ದ್ಯೋತಕ ಎಂದು ಚೆನ್ನಿ ಅಭಿಪ್ರಾಯಪಡುತ್ತಾರೆ. ವರ್ತಮಾನ ಹೇಗೆ ಹಿಂಸೆಯನ್ನು ಸಮರ್ಥಿಸುವ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ಕಲಬುರ್ಗಿಯ ಹತ್ಯೆಯನ್ನು ರೂಪಕವಾಗಿಟ್ಟುಕೊಂಡು ಚೆನ್ನಿ ಚರ್ಚಿಸುತ್ತಾರೆ. ಕಲಬುರ್ಗಿಯವರ ಹತ್ಯೆಯು ಹಠಾತ್ತನೆ ನಡೆದ ಒಂದು ಘಟನೆಯಲ್ಲ, ಅದು ಸದ್ಯದ ಚರಿತ್ರೆಯ ಒಂದು ಬೆಳವಣಿಗೆಯ ಫಲವಾಗಿದೆ ಎಂದು ಚೆನ್ನಿ ಗ್ರಹಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೃತಿಗಳನ್ನು, ಕೃತಿಕಾರರನ್ನು ಹಿಂಸೆಗೆ ಒಳಪಡಿಸುತ್ತಿರುವ ಸಂಘಟನೆಗಳು ಏನನ್ನೂ ಓದದ, ಸಾಹಿತ್ಯವನ್ನು ಕೇಳಿಯೂ ಅರಿಯದ, ಧರ್ಮದ ಪಾವಿತ್ರತೆಯ ಪರಿಚಯವೂ ಇಲ್ಲದ ಕ್ರಿಮಿನಲ್ ಸ್ವಭಾವದ ವ್ಯಕ್ತಿಗಳ ಸಂಘಟನೆಗಳಾಗಿವೆ. ಇವುಗಳನ್ನು ಸರಕಾರಗಳು ನಿಷೇಧಿಸದಿದ್ದರೆ ಕನ್ನಡ ಸಂಸ್ಕೃತಿಯು ವೈಚಾರಿಕತೆಯ ತನ್ನ ಪರಂಪರೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅವರು ನೀಡುತ್ತಾರೆ. ‘ಸಮಕಾಲೀನ ದಲಿತ ಸಾಹಿತ್ಯ’ ಬರಹದಲ್ಲಿ ಭಾರತೀಯ ಹಾಗೂ ಪ್ರಾದೇಶಿಕ ಭಾಷೆಗಳ ದಲಿತ ಸಾಹಿತ್ಯ ಮತ್ತು ವಿಮರ್ಶೆಯ ಅನುಸಂಧಾನ ದಲ್ಲಿ ದಲಿತ ಸಾಹಿತ್ಯ ಮೀಮಾಂಸೆಯ ಅನನ್ಯ ಮಾರ್ಗವನ್ನು ಅವರು ಶೋಧಿಸಿದ್ದಾರೆ. ‘ಸಂಸ್ಕೃತಿಗಳು ಯಾವುದು ಪ್ರಧಾನ ಯಾವುದು ಅಧೀನ’ ಲೇಖನ ದಲ್ಲಿ ಸಂಸ್ಕೃತಿ ಸಂಬಂಧ ಕನ್ನಡದಲ್ಲಿ ನಡೆದ ಅಧ್ಯಯನದ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಸೆಕ್ಯುಲರ್ ವಾದವನ್ನು ಕುರಿತಂತೆ ಎರಡು ಮಹತ್ವದ ಲೇಖನಗಳಲ್ಲಿ ಪಶ್ಚಿಮ ಮತ್ತು ಪೂರ್ವಗಳಲ್ಲಿ ಸೆಕ್ಯುಲರ್‌ವಾದ ಬೆಳೆದು ಬಂದ ಬಗೆ, ಚಾರಿತ್ರಿಕವಾಗಿ ಪಡೆದ ವಿಭಿನ್ನ ಅರ್ಥ ಸಾಧ್ಯತೆಗಳು, ಅವುಗಳ ಹಿಂದಿನ ಚಾರಿತ್ರಿಕ ಒತ್ತಡಗಳನ್ನು ಕುರಿತಾದ ವಿದ್ವತ್ಪೂರ್ಣ ವಿಶ್ಲೇಷಣೆ ಇದೆ. ಹಾಗೆಯೇ ಈ ಕೃತಿಯಲ್ಲಿ ಹಲವು ಜ್ಞಾನ ಶಿಸ್ತುಗಳಿಗೆ ಸಂಬಂಧಿಸಿದ ಲೇಖನಗಳಿವೆ. ಪ್ರಾದೇಶಿಕ, ಭಾರತೀಯ, ಇತರ ಭಾಷೆಗಳ ಹಾಗೂ ಜಾಗತಿಕ ಸಾಹಿತ್ಯ ಸಂವೇದನೆ ಚಿಂತನೆ ಸಂದರ್ಭಗಳ ಮುಖಾಮುಖಿಯಲ್ಲಿ ವಿಶ್ಲೇಷಣೆಗಳು ನಡೆಯುತ್ತವೆ. ಕಲಬುರ್ಗಿ, ರಾಜ್‌ಕುಮಾರ್, ಶೇಕ್ಸ್ ಪಿಯರ್, ಕನಕದಾಸ ಹೀಗೆ ಹಲವು ವ್ಯಕ್ತಿತ್ವಗಳ ಮೂಲಕ, ಸಾಂಸ್ಕೃತಿಕ ಸಾಮಾಜಿಕ ಬಿಕ್ಕಟ್ಟುಗಳನ್ನು ಅವರ ಬರಹಗಳು ಚರ್ಚಿಸುತ್ತವೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 140 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News