ಹಟ್ಟಿಗಳಲ್ಲಿ ದನಗಳಾಗಿ ಹುಟ್ಟಿದ್ದರೆ ಆ ಮಕ್ಕಳು ಸಾಯುತ್ತಿರಲಿಲ್ಲ

Update: 2017-08-13 18:56 GMT

ದನಗಳಿಗೆ ಆ್ಯಂಬುಲೆನ್ಸ್, ರೋಮಿಯೋ ಸ್ಕ್ವಾಡ್, ಗೋರಕ್ಷಕ ಪಡೆ ಹೀಗೆ ಮುಖ್ಯಮಂತ್ರಿಯಾದ ದಿನದಿಂದ ತನ್ನ ಅವಾಸ್ತವವಾದ ಯೋಜನೆಗಳ ಕಾರಣಗಳಿಗಾಗಿಯೇ ಮಾಧ್ಯಮಗಳ ಮೂಲಕ ಹಾಡಿ ಹೊಗಳಿಸಿಕೊಳ್ಳುತ್ತಿದ್ದ ಆದಿತ್ಯನಾಥ್‌ರ ಉತ್ತರಪ್ರದೇಶದ ವಾಸ್ತವ ಏನು ಎನ್ನುವುದು ಕಳೆದೆರಡು ದಿನಗಳಿಂದ ಹೊರ ಬೀಳುತ್ತಿದೆ. ಆದಿತ್ಯನಾಥ್‌ರ ಕ್ಷೇತ್ರವೇ ಆಗಿರುವ ಗೋರಖ್‌ಪುರದ ಬಾಬಾ ರಾಘವದಾಸ್ ಆಸ್ಪತ್ರೆ 70ಕ್ಕೂ ಅಧಿಕ ಮಕ್ಕಳು ಎರಡೇ ದಿನಗಳಲ್ಲಿ ಸಾಯುವ ಮೂಲಕ ದೇಶವನ್ನು ಬೆಚ್ಚಿ ಬೀಳಿಸಿದೆ. ಇದನ್ನು ಒಂದು ದುರಂತ ಎಂದು ಕರೆದು ಅಲ್ಲಿನ ಸರಕಾರ ಮುಚ್ಚಿ ಹಾಕಲು ಸರ್ವ ಪ್ರಯತ್ನ ಮಾಡುತ್ತಿದೆ. ಆದರೆ ಇದೊಂದು ಹತ್ಯಾಕಾಂಡ ಎನ್ನುವುದು ಮೇಲ್ನೋಟಕ್ಕೆ ಬಯಲಾಗಿದೆ.

ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೇಸಂಭವಿಸಿರುವ ಸಾವು ಇದಲ್ಲ. ಹಾಗೆಯೇ ಯಾವುದೇ ಸಾಂಕ್ರಾಮಿಕ ರೋಗಗಳಿಂದ ಸಂಭವಿಸಿದ ದುರಂತವೂ ಅಲ್ಲ. ಆಸ್ಪತ್ರೆಗೆ ಸರಬರಾಜಾಗುವ ಆಮ್ಲಜನಕ ಸಿಲಿಂಡರ್ ಪೂರೈಕೆಯನ್ನು ಕಂಪೆನಿ ಸ್ಥಗಿತಗೊಳಿಸಿರುವುದೇ ಈ ಸರಣಿ ಸಾವಿಗೆ ಕಾರಣ ಎಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟಪಡಿಸಿದೆ. ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಯ ಬಾಬ್ತು 64 ಲಕ್ಷ ರೂಪಾಯಿಯನ್ನು ಆಸ್ಪತ್ರೆ ಬಾಕಿಉಳಿಸಿತ್ತು .ಈ ಸಂಬಂಧವಾಗಿ ಕಂಪೆನಿ ಹಲವು ಬಾರಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಆಸ್ಪತ್ರೆ ಇದನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಕಂಪೆನಿ ಅದಾಗಲೇ ಹೆಚ್ಚುವರಿ ಸಿಲಿಂಡರ್‌ಗಳನ್ನು ಒದಗಿಸಿರುವುದರಿಂದ, ಇನ್ನು ಸಾಧ್ಯವಿಲ್ಲ ಎಂದು ತನ್ನ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಆಸ್ಪತ್ರೆಯಲ್ಲಿ ಏನು ಸಾವು ಸಂಊಭವಿಸಿದೆಯೂ ಅದು ಅನಿರೀಕ್ಷಿತವಾಗಿರಲಿಲ್ಲ.

ಅದಾಗಲೇ ನಾಲ್ಕು ಬಾರಿ ಆಸ್ಪತ್ರೆಗೆ ಕಂಪೆನಿ ತನ್ನ ನೋಟಿಸ್ ನೀಡಿರುವುದರಿಂದ ಅದನ್ನು ನೇರವಾಗಿ ಹೊಣೆ ಮಾಡುವಂತೆ ಇಲ್ಲ. ಕಂಪೆನಿ ತನ್ನ ಸಿಲಿಂಡರ್ ಪೂರೈಕೆಯನ್ನು ನಿಲ್ಲಿಸಿದರೆ ಅಪಾರ ಸಂಖ್ಯೆಯ ರೋಗಿಗಳ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದೂ ನೋಟಿಸನ್ನು ನಿರ್ಲಕ್ಷಿಸಿದ ಆಸ್ಪತ್ರೆಯ ಆಡಳಿತ ಮಂಡಳಿಯೇ ಈ ದುರಂತಕ್ಕೆ ಕಾರಣ ಎಂದು ನಾವು ಮೇಲ್ನೋಟಕ್ಕೆ ಊಹಿಸಬಹುದಾಗಿದೆ. ಆರೋಪಿಗಳನ್ನು ಗುರುತಿಸಿ ಅವರನ್ನು ಶಿಕ್ಷಿಸಬೇಕಾದ ಸರಕಾರ ಅವರನ್ನು ಸರ್ವರೀತಿಯಲ್ಲಿ ರಕ್ಷಿಸುವ ದಾರಿಯನ್ನು ಹುಡುಕುತ್ತಿದೆ. ಆದುದರಿಂದಲೇ,ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಾ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿದೆ. ದುರಂತಕ್ಕೆ ‘ಆಮ್ಲಜನಕ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವುದು ಕಾರಣ’ ಎನ್ನುವುದು ಜಿಲ್ಲಾಧಿಕಾರಿಯ ಪ್ರಕಟನೆ ಸ್ಪಷ್ಟಪಡಿಸುತ್ತದೆ.

ಆಸ್ಪತ್ರೆಯ ಹೇಳಿಕೆಯೂ ಇದನ್ನೇ ಧ್ವನಿಸಿದೆ. ಇದೇ ಸಂದರ್ಭದಲ್ಲಿ, ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿ ಆರೋಪಿಗಳನ್ನು ತಕ್ಷಣ ಗುರುತಿಸಿ ಬಂಧಿಸಲು ಆದೇಶ ನೀಡಬೇಕಾಗಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಚಿತ್ರವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಯ ಪ್ರಕಾರ ಈ ದುರಂತಗಳಿಗೆ ಸಿಲಿಂಡರ್ ಪೂರೈಕೆ ಕಾರಣವಲ್ಲ. ಬದಲಿಗೆ ‘ಆಸ್ಪತ್ರೆಯು ಮಾಲಿನ್ಯದಿಂದ ಕೂಡಿದ್ದು, ರೋಗಗಳಿಗೆ ಕಾರಣವಾಗಿದೆ. ಆದುದರಿಂದ ಸಾವುಗಳು ಸಂಭವಿಸಿವೆ’ ಎಂಬರ್ಥ ಬರುವಂತಹ ಹೇಳಿಕೆಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಪ್ರಾಂಶುಪಾಲರನ್ನು ಹೊಣೆಯಾಗಿಸಿ ಅವರನ್ನು ತಕ್ಷಣಕ್ಕೆ ಅಮಾನತು ಮಾಡಿದ್ದಾರೆ. ಆದರೆ ಈ ವಜಾ ಒಂದು ವ್ಯಂಗ್ಯ ಎಂದಿರುವ ವೈದ್ಯಕೀಯ ಪ್ರಮುಖರು, ಆಸ್ಪತ್ರೆಯ ಆಡಳಿತ ಮಂಡಳಿಯೇ ನೇರ ಆರೋಪಿ ಎಂದು ದೂರಿದ್ದಾರೆ.

ಮುಖ್ಯಮಂತ್ರಿಯ ಮಾತುಗಳು ಈ ದುರಂತವನ್ನು ಇನ್ನಷ್ಟು ನಿಗೂಢಗೊಳಿಸಿದೆ. ಒಬ್ಬರ ಹಿಂದೆ ಒಬ್ಬರಂತೆ 70ಕ್ಕೂ ಅಧಿಕ ಮಂದಿ 48 ಗಂಟೆಗಳಲ್ಲಿ ಸಾಯಬೇಕಾದರೆ ಅಷ್ಟೂ ಜನರೂ ಆಕ್ಸಿಜನ್ ಬಳಸುತ್ತಿದ್ದರೆ? ಯಾವುದೇ ವೈದ್ಯಕೀಯ ಅಚಾತುರ್ಯದಿಂದ ಅವರನ್ನು ತುರ್ತಾಗಿ ಆಕ್ಸಿಜನ್‌ಗೆ ಒಳಪಡಿಸಲಾಯಿತೆ? ಆದುದರಿಂದ ಏಕಾಏಕಿ ಕೊರತೆ ಎದುರಾಯಿತೆ? ಎಂಬ ಸಂಶಯವನ್ನೂ ವ್ಯಕ್ತಪಡಿಸಬೇಕಾಗುತ್ತದೆ. ಜೊತೆಗೆ ದುರಂತದ ಅರಿವಾದ ತಕ್ಷಣ, ಬೇರೆಡೆಯಿಂದ ಸಿಲಿಂಡರ್‌ಗಳನ್ನು ತರಿಸಿ ಅಮಾಯಕರನ್ನು ಉಳಿಸುವುದಕ್ಕೆ ಗರಿಷ್ಠ ಶ್ರಮಿಸಿದ ಡಾ. ಮುಹಮ್ಮದ್ ಕಾಫಿಲ್ ಎಂಬ ವೈದ್ಯನನ್ನೇ ಅಲ್ಲಿಂದ ಅಲ್ಲಿಂದ ವರ್ಗಗೊಳಿಸಿ ಆ ಸ್ಥಾನಕ್ಕೆ ಬೇರೊಬ್ಬನನ್ನು ನೇಮಿಸಿರುವುದು, ಸರಕಾರ ತನ್ನಿಂದ ಸಂಭವಿಸಿರುವ ಘೋರ ಪ್ರಮಾದವನ್ನು ಮುಚ್ಚಿಡುವುದಕ್ಕೆ ಹೊರಟಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ.

ಆಸ್ಪತ್ರೆಯಲ್ಲಿ ನಡೆದಿರುವ ಮಕ್ಕಳ ಹತ್ಯಾಕಾಂಡದ ಹಿಂದೆ ಆಡಳಿತ ಮಂಡಳಿ ಮಾತ್ರವಲ್ಲ, ಸರಕಾರದ ಘೋರ ನಿರ್ಲಕ್ಷವೂ ಇದೆ. ತನ್ನವರನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ ಸರಕಾರ ತನಿಖೆಯ ದಾರಿಯನ್ನು ತಪ್ಪಿಸುತ್ತಿದೆ ಎನ್ನುವ ಆರೋಪ ಈಗ ಕೇಳಿ ಬರುತ್ತಿದೆ. ವಿಪರ್ಯಾಸವೆಂದರೆ, ಆಸ್ಪತ್ರೆ ಶುಚಿತ್ವವನ್ನು ಪಾಲಿಸಿಲ್ಲ ಎಂದು ಸ್ವತಃ ಮುಖ್ಯಮಂತ್ರಿಯೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇಂತಹದೊಂದು ದುರಂತ ಸಂಭವಿಸುವಷ್ಟು ಆಸ್ಪತ್ರೆಯ ಶುಚಿತ್ವ ಕೆಟ್ಟಿದೆಯೆಂದಾದರೆ, ತಕ್ಷಣವೇ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕಲ್ಲವೇ? ಈ ಆಸ್ಪತ್ರೆ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕ್ಷೇತ್ರದಲ್ಲಿದೆ. ಕೆಲವು ದಿನಗಳ ಹಿಂದೆ ಈ ಆಸ್ಪತ್ರೆಗೆ ಭೇಟಿ ನೀಡಿದ ಪ್ರಹಸನವನ್ನೂ ಆದಿತ್ಯನಾಥ್ ಮಾಡಿದ್ದರು.

ಅಂತಹ ಸಂದರ್ಭದಲ್ಲಿ ಅವರಿಗೆ ಅಶುಚಿತ್ವ ಕಣ್ಣಿಗೆ ಬಿದ್ದಿರಲಿಲ್ಲವೇ? ಹಾಗೆ ಕಣ್ಣಿಗೆ ಬಿದ್ದಿದ್ದರೆ ಆಗಲೇ ಆಸ್ಪತ್ರೆಯ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತಲ್ಲವೇ? ತನಿಖೆ ನಡೆಸುತ್ತಾ ಹೋದರೆ, ಪ್ರಕರಣ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕೊರಳಿಗೇ ಸುತ್ತಿಕೊಳ್ಳುವ ಸಾಧ್ಯತೆಗಳು ಕಾಣುತ್ತದೆ. ಆದುದರಿಂದಲೇ, ಮಾಧ್ಯಮಗಳ ಮೂಲಕ ಈ ಹತ್ಯಾಕಾಂಡವನ್ನು ಮುಚ್ಚಿ ಹಾಕಲು ಸರ್ವಪ್ರಯತ್ನ ನಡೆದಿದೆ. ಗೋವುಗಳಿಗೆ ಆ್ಯಂಬುಲೆನ್ಸ್ ಎನ್ನುವ ಭಾವನಾತ್ಮಕ ನಾಟಕಗಳ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದ್ದ ಆದಿತ್ಯನಾಥ್‌ರಿಗೆ ಆಡಳಿತದ ಕುರಿತಂತೆ ಇರುವ ಅಜ್ಞಾನವೇ ಇಂದಿನೆಲ್ಲ ದುರಂತಗಳಿಗೆ ಕಾರಣ.

ಜನರ ಮೂಲಭೂತ ಅಗತ್ಯಗಳನ್ನು ಮರೆತು, ಭಾವನಾತ್ಮಕ ರಾಜಕೀಯಕ್ಕೆ ಆದ್ಯತೆ ನೀಡಿದ ಪರಿಣಾಮವಾಗಿ ಇಂದು ವಿಶ್ವದ ಮುಂದೆ ತಲೆತಗ್ಗಿಸ ಬೇಕಾದಂತಹ ದುರಂತಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಬೇಕಾಯಿತು. ‘ಮಕ್ಕಳ ಸಾವನ್ನು ಭಾವನಾತ್ಮಕಗೊಳಿಸಬೇಡಿ’ ಎನ್ನುತ್ತಿರುವ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರು ಒಂದು ಪ್ರಶ್ನೆಗೆ ಉತ್ತರಿಸಬೇಕು. ಉತ್ತರ ಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಮನೆಯ ಫ್ರಿಜ್ಜಿನಲ್ಲಿ ದನದ ಮಾಂಸವಿತ್ತು ಎಂದು ಆರೋಪಿಸಿ ಆ ಹಿರಿಯರನ್ನು ಗುಂಪೊಂದು ಥಳಿಸಿ ಕೊಂದು ಹಾಕಿತು.

ಒಂದು ಕರುವಿನ ಸಾವಿನ ವದಂತಿಯನ್ನು ಭಾವನಾತ್ಮಕಗೊಳಿಸಿ ಅಮಾಯಕರನ್ನು ಕೊಂದು ಹಾಕಿರುವ ರಾಜ್ಯದಲ್ಲಿ, 70ಕ್ಕೂ ಅಧಿಕ ಮಕ್ಕಳನ್ನು ತಮ್ಮ ಬೇಜವಾಬ್ದಾರಿಯಿಂದ ಸರಕಾರವೊಂದು ಕಗ್ಗೊಲೆಗೈದಿರುವಾಗ ಅದು ಯಾಕೆ ಜನರ ಭಾವನಾತ್ಮಕ ವಿಷಯವಾಗಬಾರದು? ಒಂದು ವೇಳೆ, ಉತ್ತರ ಪ್ರದೇಶದ ಯಾವನೋ ಒಬ್ಬ ಮುಸ್ಲಿಮನ ಹಟ್ಟಿಯಲ್ಲಿ 20 ದನಗಳು ಉಸಿರುಗಟ್ಟಿ ಮೃತಪಟ್ಟಿದ್ದರೆ, ಆ ರಾಜ್ಯದಲ್ಲಿರುವ ಅಮಾಯಕ ಮುಸ್ಲಿಮರ ಸ್ಥಿತಿ ಇಂದೇನಾಗುತ್ತಿತ್ತು? ಆ ದನಗಳಿಗಿರುವ ಮಹತ್ವ, ಉಸಿರಾಟಕ್ಕಾಗಿ ಒದ್ದಾಡಿ ಸತ್ತುಹೋಗಿರುವ ಎಳೆ ಮಕ್ಕಳಿಗಿಲ್ಲ ಎಂದ ಮೇಲೆ, ಆ ರಾಜ್ಯದಲ್ಲಿ ಒಂದು ಪ್ರಜಾಸತ್ತಾತ್ಮಕವಾದ ಸರಕಾರ ಅಸ್ತಿತ್ವದಲ್ಲಿದೆ ಎಂದು ನಂಬುವುದಾದರೂ ಹೇಗೆ? ಬಹುಶಃ ಮೃತ ಕಂದಮ್ಮಗಳು ಹಟ್ಟಿಯಲ್ಲಿ ದನಗಳಾಗಿ ಹುಟ್ಟದೆ ಬಡವರ ಮನೆಯ ಮಕ್ಕಳಾಗಿ ಹುಟ್ಟಿರುವುದೇ ತಪ್ಪು ಎಂದು ಹೇಳುವುದಕ್ಕೆ ಹೊರಟಿದ್ದಾರೆಯೇ ಮುಖ್ಯಮಂತ್ರಿ ಆದಿತ್ಯನಾಥ್?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News