ನಿಮ್ಮ ಮಕ್ಕಳಿಗೆ ಎಂಬಿಎ ಮಾಡಿಸುವ ಮುನ್ನ ಈ ಸುದ್ದಿ ಓದಿ

Update: 2017-08-14 04:43 GMT

ಮುಂಬೈ, ಆ. 14: ಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಎಂಬಿಎಗೆ ಎಲ್ಲಿಲ್ಲದ ಮಹತ್ವ. ಕೇವಲ ಉದ್ಯಮ ಆಸಕ್ತಿಯವರಿಗಷ್ಟೇ ಅಲ್ಲ. ವ್ಯವಸ್ಥಾಪನೆಯ ಕೌಶಲ- ತಂತ್ರವನ್ನು ಕರಗತ ಮಾಡಿಕೊಳ್ಳಬೇಕಾದರೆ ಎಂಬಿಎ ಪದವಿ ಅನಿವಾರ್ಯ ಎಂಬ ಸ್ಥಿತಿ. ಆದರೆ ಕಳೆದ ಕೆಲ ವರ್ಷಗಳಿಂದ ಬಿ- ಸ್ಕೂಲ್‌ಗಳ ಗ್ರಹಚಾರ ನೆಟ್ಟಗಿಲ್ಲ. ಎಂಬಿಎ ಪದವಿಯ ಗಳಿಕೆ ನಿರಾಶಾದಾಯಕ ಎನ್ನುವ ಅಂಕಿ ಅಂಶ ಇದೀಗ ಬಹಿರಂಗವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಪ್ರತಿ ಇಬ್ಬರು ಎಂಬಿಎ ಪದವೀಧರರ ಪೈಕಿ ಒಬ್ಬರು ನಿರುದ್ಯೋಗಿ !

ಈ ಅಂಕಿ ಅಂಶಗಳನ್ನು ಗಮನಿಸಿ. 2016ರಲ್ಲಿ 75,658 ಮಂದಿ ಕ್ಯಾಂಪಸ್‌ನಲ್ಲೇ ಉದ್ಯೋಗ ಪಡೆದಿದ್ದಾರೆ. ಆದರೆ ದೇಶಾದ್ಯಂತ ಇರುವ 3,080 ಕಾಲೇಜುಗಳಲ್ಲಿ ಇಷ್ಟೇ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದ ಇತರ ವಿದ್ಯಾರ್ಥಿಗಳ ಸ್ಥಿತಿ ಏನು ಎಂಬ ಬಗ್ಗೆ ಮಾಹಿತಿ ಇಲ್ಲ.

'ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗದ ವಿದ್ಯಾರ್ಥಿಗಳು ಸಣ್ಣ ಪುಟ್ಟ ಉದ್ಯೋಗದ ಮೊರೆ ಹೋಗಿದ್ದಾರೆ. ಕೆಲವರು ಪದವಿ ಪಡೆದ ಒಂದೆರಡು ವರ್ಷಗಳ ಬಳಿಕ ಕಂಪನಿ ಉದ್ಯೋಗ ಪಡೆದಿದ್ದಾರೆ' ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಹೇಳುತ್ತಾರೆ.

ಐಐಎಂ ವಿದ್ಯಾರ್ಥಿಗಳು ಶೇಕಡ 100ರಷ್ಟು ಉದ್ಯೋಗ ಪಡೆದರೆ ಇತರ ಬಿ-ಸ್ಕೂಲ್‌ಗಳ ಸಾಧನೆ ನಿರಾಶಾದಾಯಕ. ಇದರಿಂದಾಗಿ ಐಐಎಂಗಳಲ್ಲಿ ಸೀಟು ಗಳಿಸದ ವಿದ್ಯಾರ್ಥಿಗಳು ಇತರ ಬಿ-ಸ್ಕೂಲ್‌ಗಳಲ್ಲಿ ಶಿಕ್ಷಣ ಪಡೆಯಲು ಮುಂದಾಗುತ್ತಿಲ್ಲ ಎಂದು ಅಸೋಚಾಮ್ ಅಧ್ಯಯನ ವರದಿ ಹೇಳಿದೆ. 20 ಅಗ್ರ ಬಿ-ಸ್ಕೂಲ್‌ಗಳನ್ನು ಹೊರತುಪಡಿಸಿ, ಉಳಿದಂತೆ ಪದವಿ ಪೂರ್ಣಗೊಳಿಸಿದ ತಕ್ಷಣ ಉದ್ಯೋಗ ಪಡೆಯುವವರ ಪ್ರಮಾಣ ಶೇಕಡ 7ರಷ್ಟು ಮಾತ್ರ ಎಂದು ವರದಿ ಹೇಳಿದೆ.

ಗುಣಮಟ್ಟ ನಿಯಂತ್ರಣ ಕೊರತೆ, ಕಡಿಮೆ ವೇತನದ ಉದ್ಯೋಗ ಹಾಗೂ ಕಳಪೆ ವ್ಯವಸ್ಥೆಗಳು ಭಾರತದ ಬಿ-ಸ್ಕೂಲ್‌ಗಳ ಪತನಕ್ಕೆ ಕಾರಣ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News