ಮೂರನೆ ಟೆಸ್ಟ್ ನಲ್ಲಿ ಭಾರತಕ್ಕೆ ಜಯ; ಸರಣಿ 3 -0 ಕ್ಲೀನ್ ಸ್ವೀಪ್

Update: 2017-08-14 09:42 GMT

ಪಲ್ಲೆಕೆಲೆ, ಆ.14: ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ನಲ್ಲಿ ಭಾರತ  ಇನಿಂಗ್ಸ್ ಹಾಗೂ 179ರನ್ ಗಳ ಜಯ ಗಳಿಸಿದ್ದು, ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಪಲ್ಲೆಕೆಲೆ ಇಂಟರ್ ನ್ಯಾಶನಲ್  ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್ ನ ಮೂರನೆ ದಿನವಾಗಿರುವ ಇಂದು ಶ್ರೀಲಂಕಾ ತಂಡ  ಎರಡನೆ ಇನಿಂಗ್ಸ್ ನಲ್ಲಿ 74.3 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟಾಗಿದ್ದು, ಇದರೊಂದಿಗೆ ಭಾರತ 3 ಟೆಸ್ಟ್ ಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಳ್ಳುವ ಮೂಲಕ ವಿದೇಶಿ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.

ಲಂಕಾದ ವಿಕೆಟ್ ಕೀಪರ್ ಡಿಕ್ವೆಲ್ಲಾ 41 ರನ್ ದಾಖಲಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಭಾರತದ ರವಿಚಂದ್ರನ್ ಅಶ್ವಿನ್(68ಕ್ಕೆ 4), ಮುಹಮ್ಮದ್ ಶಮಿ(32ಕ್ಕೆ 3), ಉಮೇಶ್ ಯಾದವ್(21ಕ್ಕೆ 2) ಮತ್ತು ಕುಲದೀಪ್ ಯಾದವ್(56ಕ್ಕೆ 1) ದಾಳಿಗೆ ಸಿಲುಕಿದ ಶ್ರೀಲಂಕಾ ಎರಡನೆ ಇನಿಂಗ್ಸ್ ನ್ನು ಬೇಗನೆ ಮುಗಿಸಿತು.

ಟೆಸ್ಟ್‌ನ ಎರಡನೆ ದಿನವಾಗಿದ್ದ  ರವಿವಾರ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 37.4 ಓವರ್‌ಗಳಲ್ಲಿ 135 ರನ್‌ಗಳಿಗೆ ಆಲೌಟಾಗಿತ್ತು.352 ರನ್‌ಗಳ ಹಿನ್ನಡೆ ಯೊಂದಿಗೆ ಫಾಲೋಆನ್ ಪಡೆದಿತ್ತು. ಶ್ರೀಲಂಕಾ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್ ನಲ್ಲಿ 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 19 ರನ್ ಗಳಿಸಿತ್ತು.  

ಭಾರತ ಮೊದಲ ಇನಿಂಗ್ಸ್ ನಲ್ಲಿ 487 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News