ನಿವೃತ್ತಿಯ ನಿರ್ಧಾರಕ್ಕೆ ಕಾರಣ ತಿಳಿಸಿದ ಸುನೀಲ್ ಚೆಟ್ರಿ
ಸುನೀಲ್ ಚೆಟ್ರಿ | PC : PTI
ಹೊಸದಿಲ್ಲಿ: ಮುಂದಿನ ತಿಂಗಳು ಕುವೈತ್ ವಿರುದ್ಧ ನಡೆಯುವ 2026ರ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ನಿವೃತ್ತಿಯಾಗುವ ನನ್ನ ನಿರ್ಧಾರ ಸಹಜವಾಗಿತ್ತು. ನನ್ನ ನಿವೃತ್ತಿಯ ನಿರ್ಧಾರಕ್ಕೆ ದೈಹಿಕ ಅಂಶ ಕಾರಣವಲ್ಲ. ದೇಶೀಯ ಫುಟ್ಬಾಲ್ ನ ಬದ್ಧತೆಯನ್ನು ಮುಗಿಸಿದ ನಂತರ ವಿರಾಮವನ್ನು ಆನಂದಿಸಲು ಬಯಸಿದ್ದೇನೆ ಎಂದು ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಶುಕ್ರವಾರ ಹೇಳಿದ್ದಾರೆ.
ಜೂನ್ 6ರಂದು ಕೋಲ್ಕತಾದಲ್ಲಿ ನಡೆಯುವ ಕುವೈಟ್ ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರ್ರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವುದಾಗಿ 39ರ ಹರೆಯದ ಚೆಟ್ರಿ ಗುರುವಾರ ಎಕ್ಸ್ ನಲ್ಲಿ ಹಾಕಿರುವ ವೀಡಿಯೊದಲ್ಲಿ ತಿಳಿಸಿದ್ದರು. ಭಾರತದ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿ ಅಗ್ರಮಾನ್ಯ ಗೋಲ್ಸ್ಕೋರರ್ ಆಗಿರುವ(94)ಚೆಟ್ರಿ ತನ್ನ 19 ವರ್ಷಗಳ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದರು.
ದೈಹಿಕ ಅಂಶದಿಂದಾಗಿ ನಿವೃತ್ತಿಯ ನಿರ್ಧಾರಕ್ಕೆ ಬಂದಿಲ್ಲ. ನಾನು ಈಗಲೂ ಫಿಟ್ ಆಗಿದ್ದೇನೆ. ರನ್ನಿಂಗ್, ಚೇಸಿಂಗ್, ಡಿಫೆಂಡಿಂಗ್, ಕಠಿಣ ಪರಿಶ್ರಮ ನನಗೆ ಕಷ್ಟಕರವಲ್ಲ. ನಾನು ನನ್ನೊಂದಿಗೆ ಜಗಳವಾಡುತ್ತಿದ್ದೆ. ಸಮಗ್ರವಾಗಿ ಯೋಚಿಸಲು ಪ್ರಯತ್ನಿಸುತ್ತಿದ್ದೆ. ನಾನು ಒಂದು ವರ್ಷ ಬೆಂಗಳೂರು ಎಫ್ಸಿಯಲ್ಲಿ ಇರುತ್ತೇನೆ. ದೇಶೀಯ ಫುಟ್ಬಾಲ್ ಅನ್ನು ಎಷ್ಟು ಸಮಯ ಆಡುತ್ತೇನೆಂದು ನನಗೆ ಗೊತ್ತಿಲ್ಲ. ಆ ನಂತರ ನಾನು ವಿಶ್ರಾಂತಿ ಪಡೆಯಲು ಬಯಸುತ್ತೇನೆ ಎಂದು ಚೆಟ್ರಿ ಹೇಳಿದ್ದಾರೆ.
ಇಂಡಿಯನ್ ಸೂಪರ್ ಲೀಗ್ ತಂಡದೊಂದಿಗೆ ಒಂದು ವರ್ಷ ಗುತ್ತಿಗೆ ಹೊಂದಿರುವ ಖ್ಯಾತ ಕ್ರೀಡಾಪಟು ಚೆಟ್ರಿ ಅವರು ಭುಚುಂಗ್ ಭುಟಿಯಾ ನಿವೃತ್ತಿಯಾದ ನಂತರ ಭಾರತೀಯ ಫುಟ್ಬಾಲ್ ನನ್ನು ಮುನ್ನಡೆಸಿದ್ದರು.
ತನ್ನ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸುವ ಮೊದಲು ಭಾರತದ ಕೋಚ್ ಇಗೊರ್ ಸ್ಟಿಮ್ಯಾಕ್ ಜೊತೆಗೆ ತನ್ನ ನಿರ್ಧಾರದ ಕುರಿತು ಚರ್ಚಿಸಿದ್ದೆ. ಅದನ್ನು ಅವರು ಅರ್ಥ ಮಾಡಿಕೊಂಡರು ಎಂದು ಚೆಟ್ರಿ ಹೇಳಿದ್ದಾರೆ.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೂ ನಾನು ಮಾತನಾಡಿದ್ದೆ. ಅವರು ನನಗೆ ತುಂಬಾ ಆತ್ಮೀಯರಾಗಿದ್ದಾರೆ. ಅವರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಚೆಟ್ರಿ ಹೇಳಿದ್ದಾರೆ.