ಪಂಜಾಬ್ ಕಿಂಗ್ಸ್‌ನ ಕೊನೆಯ ಪಂದ್ಯಕ್ಕೆ ಜಿತೇಶ್ ಶರ್ಮಾ ನಾಯಕ
ಜಿತೇಶ್ ಶರ್ಮಾ | PC : X
ಮುಂಬೈ: ಈಗ ನಡೆಯುತ್ತಿರುವ ಐಪಿಎಲ್ ಟಿ20 ಟೂರ್ನಮೆಂಟ್‌ನಲ್ಲಿ ಪಂಜಾಬ್ ಕಿಂಗ್ಸ್ ಆಡಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಜಿತೇಶ್ ಶರ್ಮಾ ತಂಡದ ನಾಯಕನಾಗಲಿದ್ದಾರೆ ಎಂದು ಫ್ರಾಂಚೈಸಿ ಶನಿವಾರ ಪ್ರಕಟಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಆಡುವ ತನ್ನ ಕೊನೆಯ ಪಂದ್ಯದಲ್ಲಿ ಜಿತೇಶ್ ನಾಯಕನಾಗಿರುತ್ತಾರೆ.
ಪಾಕಿಸ್ತಾನ ವಿರುದ್ಧ ಟಿ20 ಸರಣಿಯನ್ನು ಆಡಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲು ಸ್ಯಾಮ್ ಕರ್ರನ್ ಸ್ವದೇಶಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಜಿತೇಶ್ ನಾಯಕನ ಸ್ಥಾನ ವಹಿಸಿಕೊಂಡಿದ್ದಾರೆ.
ಜಿತೇಶ್ ಈ ವರ್ಷದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿರುವ ಮೂರನೇ ಆಟಗಾರನಾಗಿದ್ದಾರೆ. ಶಿಖರ್ ಧವನ್ ಎಪ್ರಿಲ್ 9ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಭುಜನೋವಿಗೆ ಒಳಗಾಗಿದ್ದು ಆ ನಂತರ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಧವನ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಕರ್ರನ್ ಪಂಜಾಬ್ ತಂಡದ ನಾಯಕನಾಗಿದ್ದರು.
ಪಂಜಾಬ್ ಕಿಂಗ್ಸ್ ಈಗಾಗಲೇ ಐಪಿಎಲ್-2024ರ ಪ್ಲೇ ಆಫ್ ರೇಸ್‌ನಿಂದ ಹೊರಗುಳಿದಿದ್ದು ಇದು ಕೇವಲ ಪ್ರತಿಷ್ಠೆಯ ಪಂದ್ಯವಾಗಿದೆ. ಹಿಂದಿನ ಪಂದ್ಯ ಮಳೆಗಾಹುತಿಯಾಗಿರುವ ಕಾರಣ ಸನ್‌ರೈಸರ್ಸ್ ತಂಡ ಈ ವರ್ಷದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜಯ ಸಾಧಿಸುವ ವಿಶ್ವಾಸದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡ ಈಗಾಗಲೇ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾಗಿರೊ ರಬಾಡ ಅವರ ಸೇವೆಯಿಂದ ವಂಚಿತವಾಗಿದೆ. ಅವರು ಗಾಯದ ಸಮಸ್ಯೆಯ ಕಾರಣಕ್ಕೆ ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿದ್ದಾರೆ.
ಪಂಜಾಬ್ ತಂಡ ಬುಧವಾರ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯ ಆಡಿದ ನಂತರ ಕರ್ರನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ರಿಟನ್‌ಗೆ ಮರಳಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಈ ಮೊದಲೇ ತೆರಳಿದ್ದಾರೆ.