ನವೆಂಬರ್ ನಂತರ ಬರ ಘೋಷಣೆ: ಕಾಗೋಡು ತಿಮ್ಮಪ್ಪ

Update: 2017-08-14 11:37 GMT

ಶಿವಮೊಗ್ಗ, ಆ. 14: ನವೆಂಬರ್‌ವರೆಗೆ ಕಾದುನೋಡಿ ಬರ ಪರಿಸ್ಥಿತಿಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ವರೆಗೆ ಮಳೆಗಾಲ ಇರುವುದರಿಂದ ಸಧ್ಯವೇ ಯಾವುದೇ ತೀರ್ಮಾನ ಕೈಗೊಳ್ಳಲಾಗದು. ಆದರೆ ಬರ ಪರಿಸ್ಥಿತಿ ಎದುರಾಗಲಿದೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಅಪಾಯದ ಸೂಕ್ಷ್ಮ ಅರಿವಾಗಿದೆ ಎಂದರು.

ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಇಲ್ಲದ ಕಾರಣ, ಭತ್ತದ ಬೆಳೆಗೆ ಹಿನ್ನೆಡೆಯಾಗಿದೆ. ರೈತರು ಇದನ್ನು ಅರ್ಥಮಾಡಿಕೊಳ್ಳಬೇಕು. ಮಳೆಯೇ ಬೀಳದ ಮೇಲೆ ಎಲ್ಲಿಂದ ನೀರು ಪೂರೈಸುವುದು ಎಂದು ಪ್ರಶ್ನಿಸಿದ ಅವರು, ರೈತರ ಸ್ಥಿತಿ ಶೋಚನೀಯವಾಗಿದೆ. ಮೋಡ ಬಿತ್ತನೆಬಗ್ಗೆ ತೀರ್ಮಾನವಾಗಿದೆ. ಯಾವಾಗ ಎನ್ನುವುದು ಸಂಬಂಧಿತ ಸಚಿವರಿಗೆ ಬಿಟ್ಟ ವಿಚಾರ ಎಂದರು.

ಮೋಡ ಬಿತ್ತನೆಯಿಂದ ವೈಜ್ಞಾನಿಕವಾಗಿ ಲಾಭವಿಲ್ಲ ಎಂಬ ಮಾತು ಕೇಳಿಬರುತ್ತಿರುವ ಬಗ್ಗೆ ಮಾತನಾಡಿದ ಅವರು, ಹಿನ್ನೆಡೆ-ಮುನ್ನೆಡೆ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಆದರೆ ಮೋಡ ಬಿತ್ತನೆಗೆ ನಿಗದಿತ ಕಾಲ ಮತ್ತು ಮೋಡದ ಅಗತ್ಯವಿದೆ. ಅದನ್ನು ನೋಡಿಕೊಂಡು ಮೋಡಬಿತ್ತನೆ ಮಾಡಲಾಗುವುದು ಎಂದರು.
ಪ್ರಾಪರ್ಟಿ ಕಾರ್ಡ್ ವಿಳಂಬ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಅವರು, ಈ ಕಾರ್ಯ ವಿಳಂಬವಾಗಲಿದೆ. ಮೊದಲು ಆಸ್ತಿಯ ಸಂಪೂರ್ಣ ಸರ್ವೆ ನಡೆಯಬೇಕು. ಆನಂತರ ಕಾರ್ಡ್ ದಾಖಲಿಸುವ ಕೆಲಸವಾಗಬೇಕು. ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಈ ಕೆಲಸ ನಡೆಯುತ್ತಿದೆ. ಆದರೆ ಇದರಿಂದ ಒಳ್ಳೆಯದಾಗಲಿದೆ ಎಂಬ ಅಂಶ ತಿಳಿದುಬಂದಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News