ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಕಾಗೋಡು ತಿಮ್ಮಪ್ಪ

Update: 2017-08-14 11:40 GMT

ಶಿವಮೊಗ್ಗ, ಆ. 14: ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪರವರು ಸಮಿತಿಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಸಮಿತಿಯ ಅಧ್ಯಕ್ಷರಾಗುವ ಅರ್ಹತೆ ಹೊಂದಿದ್ದರು. ಆದರೆ ಜಿ. ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್‌ರವರು ಕಾಗೋಡುರವರಿಗೆ ಬೆಂಬಲ ಸೂಚಿಸಿದರು. ಸಭೆಯಲ್ಲಿ ಮಾತನಾಡಿದ ಅವರು, ’ಜಿಲ್ಲಾ ಉಸ್ತುವಾರಿ ಸಚಿವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು’ ಮನವಿ ಮಾಡಿದರು. ಸರ್ವಸದಸ್ಯರು ಇದನ್ನು ಒಪ್ಪಿದ್ದರಿಂದ ಅವಿರೋಧವಾಗಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಭೆಯನ್ನುದ್ದೇಶಿಸಿ ಕಾಗೋಡು ತಿಮ್ಮಪ್ಪ ಮಾತನಾಡಿ, ’ಜಿಲ್ಲಾ ಯೋಜನಾ ಸಮಿತಿ ರಚನೆ ಸರಿಸುಮಾರು ಒಂದು ವರ್ಷಗಳ ಕಾಲ ವಿಳಂಬವಾಗಿದೆ. ಆದರೆ ಈ ತಿಂಗಳೊಳಗೆ ಯೋಜನಾ ವರದಿ ತಯಾರಿಸಿ, ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು. ಈ ಸಮಿತಿಯಿಂದ ಆಗಬೇಕಾಗದ್ದ ಯಾವುದೇ ಯೋಜನೆಗಳನ್ನು ವಿಳಂಬವಿಲ್ಲದೆ ಮಾಡಲಾಗುವುದು. ಆಯಾಯ ವರ್ಷಗಳ ಕಾರ್ಯಕ್ರಮಗಳನ್ನು ಹಿಂದಿನವರ್ಷವೇ ತಯಾರಿಸುವ ಕೆಲಸ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಮಿತಿಯಲ್ಲಿ ಒಟ್ಟು 80 ಸದಸ್ಯರಿದ್ದು, ಇದಲ್ಲಿ 41 ಸದಸ್ಯರು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬಂದವರಾಗಿದ್ದಾರೆ. 19ಸ್ಥಾನ ನಗರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬಂದವರದ್ದಾಗಿರುತ್ತದೆ. ಸಮಿತಿಯು ರಚನೆಯಾಗಿ ಮೂರು ತಿಂಗಳು ಮುಗಿದಿದ್ದು, ಅಧ್ಯಕ್ಷರನ್ನು ಮಾತ್ರ ಆಯ್ಕೆಮಾಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಪಂ ಅಧ್ಯಕ್ಷರು ಮಾತ್ರ ಅಧ್ಯಕ್ಷರಾಗಲು ಅವಕಾಶವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News