ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸದಂತೆ ಆಗ್ರಹಿಸಿ ಮನವಿ

Update: 2017-08-14 11:43 GMT

ಶಿವಮೊಗ್ಗ, ಆ. 14: ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಹಲವೆಡೆ ಬಯಲು ಮಲ ವಿಸರ್ಜನೆ ಇಂದಿಗೂ ಮುಂದುವರಿದಿದೆ ಎಂದು ಆರೋಪಿಸಿ, ತೀರ್ಥಹಳ್ಳಿ ತಾಲ್ಲೂಕು ಬಿಜೆಪಿಯ ಜಿಪಂ, ತಾಪಂ, ಸದಸ್ಯರು ಮತ್ತು ಚುನಾಯಿತ ಸದಸ್ಯರು ಸೋಮವಾರ ನಗರದ ಡಿ.ಸಿ. ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ಶೌಚಾಲಯಗಳು ಇಲ್ಲದಿರುವ ಸಾಕಷ್ಟು ಮನೆಗಳನ್ನು ಗುರುತಿಸಲಾಗಿದೆ. ಹಣಗೆರೆ ಕಟ್ಟೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಸೈಯದ್ ಹಜರತ್ ದರ್ಗಾ, ಶ್ರೀ ಭೂತರಾಯ ದೇವಾಲಯಕ್ಕೆ ಪ್ರತಿ ವರ್ಷ ಸುಮಾರು 1.5 ಕೋಟಿ ರೂ. ಆದಾಯ ಬರುತ್ತದೆ.

ಇಂತಹ ಸ್ಥಳದಲ್ಲಿಯೇ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಭಕ್ತರು ಗಿಡ ಮರದ ಬಳಿ, ಬಯಲಿನಲ್ಲೇ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ. ಇದನ್ನು ಗಮನಿಸದೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ಜಿಲ್ಲಾಡಳಿತ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಶೌಚಾಲಯಗಳನ್ನು ನಿರ್ಮಾಣ ಮಾಡಿ ಆನಂತರ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಪ್ರಮುಖರಾದ ಶ್ರೀನಿವಾಸ್, ಸಾಲೆಕೊಪ್ಪ ರಾಮಚಂದ್ರ, ಬೇಗುವಳ್ಳಿ ಕವಿರಾಜ್, ಟಿ. ಮಂಜುನಾಥ್, ಗೀತಾ ಸದಾನಂದ ಶೆಟ್ಟಿ, ಸಂದ್ಯಾ ರಮೇಶ್, ಲಕ್ಷ್ಮೀ ಉಮೇಶ್, ಚಂದವಳ್ಳಿ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News