ಮಕ್ಕಳ ಸರಣಿ ಸಾವು: ಉತ್ತರ ಪ್ರದೇಶ ರಾಜ್ಯ ಸರ್ಕಾರ ವಜಾಕ್ಕೆ ಆಗ್ರಹ

Update: 2017-08-14 11:49 GMT

ಶಿವಮೊಗ್ಗ, ಆ. 14: ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಮಕ್ಕಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸಲು ಒತ್ತಾಯಿಸಿ ಸೋಮವಾರ ನಗರದ ಡಿ.ಸಿ. ಕಚೇರಿ ಮುಂಭಾಗ ಎನ್.ಎಸ್.ಯು.ಐ. ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರ ಗೋರಖ್‌ಪುರದ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ 60ಕ್ಕೂ ಹೆಚ್ಚು ನವಜಾತ ಶಿಶುಗಳು ಮರಣ ಹೊಂದಿದ್ದು, ಈ ಪ್ರಕರಣದಲ್ಲಿ ದಿವ್ಯ ನಿರ್ಲಕ್ಷ್ಯ ತೋರಿರುವ ಯೋಗಿ ಆದಿತ್ಯನಾಥ್ ಅವರನ್ನು ಕೂಡಲೇ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುವುದರ ಜೊತೆಗೆ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್ ಪೂರೈಕೆ ಮಾಡುವ ಏಜೆನ್ಸಿಗಳಿಗೆ ಸಮರ್ಪಕವಾಗಿ ಬಿಲ್ ಪಾವತಿಸದಿರುವುದರಿಂದ ಏಜೆನ್ಸಿಯವರು ಆಮ್ಲಜನಕ ಸಿಲಿಂಡರ್ ಪೂರೈಸದೇ ಇಂತಹ ಘೋರ ದುರಂತ ನಡೆದಿದೆ. ಆದರೆ, ಇದೀಗ ಆಮ್ಲಜನಕ ಸಿಲಿಂಡರ್ ಪೂರೈಕೆಯಾಗಿದೆ ಬೇರೆ ಕಾರಣದಿಂದ ಈ ಘಟನೆ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಏನೇ ಆದರೂ ಈ ಕೃತ್ಯ ಅತ್ಯಂತ ಅಮಾನವೀಯವಾಗಿದ್ದು, ಇಡೀ ದೇಶ ತಲೆ ತಗ್ಗಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಕೂಡಲೇ ಈ ಪ್ರಕರಣ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು. ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವನ್ನು ವಜಾಗೊಳಿಸಬೇಕು. ಘಟನೆಗೆ ಕಾರಣರಾದ ಎಲ್ಲರನ್ನೂ ಬಂಧಿಸಿ, ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೆಚ್.ಎಸ್.ಬಾಲಾಜಿ, ಹೆಚ್.ಎಸ್.ವಿಜಯ್‌ಕುಮಾರ್, ಪ್ರಮೋದ್, ಕೆ. ಚೇತನ್, ರಮೇಶ್ ಹೆಗ್ಡೆ, ವಿಕಾಸ್ ನಾಡಿಗ್,ಧನಂಜಯ್ ಶ್ರವಣ್, ಮೊಹಮ್ಮದ್ ಆರೀಫ್ ವುಲ್ಲಾ, ಮುಖೇಶ್, ಚೇತನ್, ವಿನಯ್ ತಾಂಡ್ಲೆ, ಪುರಲೆ ಮಂಜು, ಚಂದು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News