ಈಜುಕೊಳ ಕಾಮಗಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಾಗೋಡು ತಿಮ್ಮಪ್ಪ

Update: 2017-08-14 11:55 GMT

ಸಾಗರ, ಆ.15: ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ 90 ಕೋಟಿ ರೂ. ವೆಚ್ಚದ ಯೋಜನೆ ತಯಾರಿಸಲಾಗಿದ್ದು, ಕೆಆರ್‌ಡಿಎಲ್ ಯೋಜನೆಯ ಉಸ್ತುವಾರಿ ವಹಿಸಿದ್ದು, 30 ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುತ್ತಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಈಜುಕೊಳ ಕಾಮಗಾರಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದ ದಕ್ಷಿಣ ಕನ್ನಡಕ್ಕೆ ಮಲೆನಾಡು, ಉತ್ತರ ಕನ್ನಡ ಭಾಗದಿಂದ ಹೋಗಿ ಬರುವ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು. ತುಮರಿ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ 599 ಕೋಟಿ ರೂ. ವೆಚ್ಚದ ಡಿಪಿಆರ್ ತಯಾರಿಸಿದ್ದು ಕೇಂದ್ರದ ತಾಂತ್ರಿಕ ಪರಿಶೀಲನೆ ಮುಗಿದಿದ್ದು, ಈ ತಿಂಗಳ ಅಂತ್ಯದಲ್ಲಿ ತಾಂತ್ರಿಕ ಮಂಜೂರಾತಿ ದೊರೆಯಲಿದೆ. ಇದರ ಜೊತೆಗೆ ಸಾಗರ ನಗರದ ಎಸ್.ಎನ್.ನಗರ ವೃತ್ತದಿಂದ ಮರಕುಟಿಕವರೆಗೆ 75 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಡಿ.ಪಿ.ಆರ್. ತಯಾರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದೆ ಎಂದು ಹೇಳಿದರು.

ಸೊರಬ ರಸ್ತೆ ಅಗಲೀಕರಣ ಯೋಜನೆ ಅಂತಿಮ ಹಂತದಲ್ಲಿದೆ. ದುರ್ಗಾಂಬಾ ವೃತ್ತದಿಂದ ಎಸ್.ಎನ್.ನಗರ ವೃತ್ತದವರೆಗೆ 1.2 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ 45 ಕೋಟಿ ರೂ. ಯೋಜನೆ ತಯಾರಿಸಲಾಗಿದೆ. ಮೊದಲ ಹಂತದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬರುವ ಜಮೀನು ಸ್ವಾಧೀನ ಪಡಿಸಿಕೊಳ್ಳಲು 30 ಕೋಟಿ ರೂ. ಬಿಡುಗಡೆಯಾಗುತ್ತದೆ. ಇದಕ್ಕೆ ಸಂಬಂಧಿಸಿದ ಕಡತ ಮುಖ್ಯಮಂತ್ರಿಗಳ ಬಳಿ ಇದ್ದು ಹಣ ಬಿಡುಗಡೆ ಮಾಡಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. 15 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ರಸ್ತೆಯ ಮಧ್ಯಭಾಗದಿಂದ ಇಕ್ಕೆಲಗಳಲ್ಲಿ 7 ಮೀ. ಸಿಮೆಂಟ್ ರಸ್ತೆ ನಿರ್ಮಾಣವಾಗುವ ಎರಡೂ ಭಾಗದಲ್ಲೂ 2 ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗುತ್ತದೆ. ರಸ್ತೆ ಮಧ್ಯಭಾಗದಲ್ಲಿ ಡಿವೈಡರ್ ಅಳವಡಿಸಿ ಅದಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಿ, ಅತ್ಯಂತ ಸುಂದರವಾದ ರಸ್ತೆಯನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ.ರಮೇಶ್, ನಗರಸಭೆ ಅಭಿಯಂತರ ಎಚ್.ಕೆ.ನಾಗಪ್ಪ, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News